ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರನ್ನು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಕೊಲಿಜಿಯಂ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದೇ ವೇಳೆ ನ್ಯಾ। ಪಿ.ಎಸ್. ದಿನೇಶ್ ಕುಮಾರ್ ಅವರ ಹೆಸರನ್ನು ತೆರವಾಗುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಹುದ್ದೆಗೆ ಶಿಫಾರಸು ಮಾಡಲಾಗಿದೆ. ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ 5 ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂ ಶುಕ್ರವಾರ ಇಲ್ಲಿ ಸಭೆ ಸೇರಿ ಈ ಶಿಫಾರಸು ಮಾಡಿದೆ.
ಹಾಲಿ ವಿವಿಧ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವವರ ಹಿರಿಯರ ಪೈಕಿ ನ್ಯಾ. ವರಾಳೆ ಕೂಡಾ ಒಬ್ಬರಾಗಿರುವ ಅಂಶ ಮತ್ತು ಸುಪ್ರೀಂಗೆ ಪದೋನ್ನತಿ ಪಡೆಯಲು ಅರ್ಹತೆ ಹೊಂದಿದವರ ಪೈಕಿ ನ್ಯಾ.ವರಾಳೆ ಅವರೊಬ್ಬರೇ ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದನ್ನು ಪರಿಗಣಿಸಿ ಈ ಶಿಫಾರಸು ಮಾಡಲಾಗಿದೆ.
ಸುಪ್ರೀಂಕೋರ್ಟ್‌ಗೆ 34 ನ್ಯಾಯಮೂರ್ತಿಗಳ ನೇಮಕಕ್ಕೆ ಅವಕಾಶವಿದ್ದು, ನ್ಯಾ.ಸಂಜಯ್ ಕಿಶನ್ ಕೌಲ್ 2023ರ ಡಿ.25ರಂದು ನಿವೃತ್ತಿಯಾದ ಹಿನ್ನೆಲೆಯಲ್ಲಿ ಒಂದು ಸ್ಥಾನ ಖಾಲಿಯಾಗಿತ್ತು. ಇದೀಗ ಕೊಲಿಜಿಯಂ ಶಿಫಾರಸನ್ನು ಕೇಂದ್ರ ಸರ್ಕಾರ ಅನುಮೋದಿಸಿದರೆ, ಎಲ್ಲಾ 34 ಹುದ್ದೆಗಳು ಭರ್ತಿಯಾದಂತೆ ಆಗಲಿದೆ.
ದಿನೇಶ್ ಅವಧಿ ತಿಂಗಳಿಗೂ ಕಮ್ಮಿ: ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಶಿಫಾರಸು ಆಗಿರುವ ನ್ಯಾ। ದಿನೇಶ್ 2015ರಲ್ಲೇ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು.
ಅವರು ಫೆ.24, 2024ಕ್ಕೆ ನಿವೃತ್ತರಾಗಲಿದ್ದಾರೆ. ಹೀಗಾಗಿ ಮುಖ್ಯ ನ್ಯಾಯಾಧೀಶರಾಗಿ ಅವರ ಅವಧಿ ಸುಮಾರು 1 ತಿಂಗಳು ಮಾತ್ರ ಇರಲಿದೆ ಎಂದು ಕೊಲಿಜಿಯಂ ಹೇಳಿದೆ
ನಿಪ್ಪಾಣಿಯಲ್ಲಿ ಜನಿಸಿದ್ದ ವರಾಳೆ: ಕರ್ನಾಟಕದ ನಿಪ್ಪಾಣಿಯಲ್ಲಿ ಜನಿಸಿದ ನ್ಯಾ. ವರಾಳೆ, 23 ವರ್ಷಗಳ ಕಾಲ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ವಕೀಲಿಕೆ ನಡೆಸಿ, 2008ರಲ್ಲಿ ಬಾಂಬೆ ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕವಾಗಿದ್ದರು.
2022ರ ಅಕ್ಟೋಬರ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದರು.