ಪೊಲೀಸರಿಂದ ಸಿಗದ ನ್ಯಾಯ: ಧರಣಿ

KannadaprabhaNewsNetwork | Published : Apr 28, 2025 11:46 PM

ಸಾರಾಂಶ

ತಮ್ಮ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ವ್ಯಕ್ತಿಗಳನ್ನು ಬಂಧಿಸಲು ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ. ಅವರಿಗೆ ಇಲ್ಲಿಯ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆಂದು ಆರೋಪಿಸಿ ಹಲ್ಲೆಗೊಳಗಾಗಿರುವ ಕೆಂಪಮ್ಮ ನವರ ಕುಟುಂಬದ ಸದಸ್ಯರು ಸ್ಥಳೀಯ ಪೊಲೀಸ್‌ ಠಾಣೆ ಮುಂಭಾಗ ಪ್ರತಿಭಟನೆ ಮಾಡಿದ ಘಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಮ್ಮ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ವ್ಯಕ್ತಿಗಳನ್ನು ಬಂಧಿಸಲು ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೆ. ಅವರಿಗೆ ಇಲ್ಲಿಯ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆಂದು ಆರೋಪಿಸಿ ಹಲ್ಲೆಗೊಳಗಾಗಿರುವ ಕೆಂಪಮ್ಮ ನವರ ಕುಟುಂಬದ ಸದಸ್ಯರು ಸ್ಥಳೀಯ ಪೊಲೀಸ್‌ ಠಾಣೆ ಮುಂಭಾಗ ಪ್ರತಿಭಟನೆ ಮಾಡಿದ ಘಟನೆ ನಡೆಯಿತು. ಕಳೆದ ೧೭ ದಿನಗಳ ಹಿಂದೆ ತಾಲೂಕಿನ ನರಿಗೇಹಳ್ಳಿಯಲ್ಲಿ ಜಮೀನಿನ ಸಂಬಂಧ ತಮ್ಮ ತಾಯಿ ಕೆಂಪಮ್ಮ ಮತ್ತು ಸಹೋದರ ನವೀನ್‌ ರಿಗೆ ಅದೇ ಗ್ರಾಮದ ಮಹೇಶ್, ರಾಮಣ್ಣ, ತಂಗ್ಯಮ್ಮ, ಮಂಜುನಾಥ್ ಎಂಬುವವರು ಮನಸಾ ಇಚ್ಚೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆ ದೂರು ನೀಡಲಾಗಿತ್ತು. ಪೊಲೀಸರು ಆರೋಪಿಗಳನ್ನು ಬಂಧಿಸುವ ಕ್ರಮ ಕೈಗೊಳ್ಳಲೇ ಇಲ್ಲ. ಈ ಠಾಣೆಯ ಮುಂಭಾಗವೇ ಓಡಾಡಿಕೊಂಡಿದ್ದರೂ ಸಹ ಪೊಲೀಸರು ಅವರನ್ನು ಬಂಧಿಸುವ ಪ್ರಯತ್ನವನ್ನೂ ಸಹ ಮಾಡಲಿಲ್ಲ. ಇಲ್ಲಿಯ ಪೊಲೀಸರ ಪಕ್ಷಪಾತದ ಧೋರಣೆಯನ್ನು ಖಂಡಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿ ಎದುರೇ ಪ್ರತಿಭಟನೆ ಮಾಡಿದ ವೇಳೆ ಅಡಿಷನಲ್‌ ಎಸ್ಪಿ ಖಾದರ್‌ ರವರು ಆರೋಪಿಗಳನ್ನು ಶೀಘ್ರವೇ ಬಂಧಿಸುವ ಆಶ್ವಾಸನೆ ನೀಡಿ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದ್ದರು. ಹಿರಿಯ ಅಧಿಕಾರಿಗಳ ಸೂಚನೆಯನ್ನೂ ಸಹ ಇಲ್ಲಿಯ ಪೊಲೀಸರು ನಿರ್ಲಕ್ಷಿಸಿದ್ದಾರೆ. ಆರೋಪಿಗಳನ್ನು ಹಿಡಿಯದೇ ಉದಾಸೀನ ತೋರಿದ್ದಾರೆ. ಅವರು ತಲೆತಪ್ಪಿಸಿಕೊಳ್ಳಲು ಕಾರಣರಾಗಿದ್ದಾರೆಂದು ನರೀಗೆಹಳ್ಳಿ ಗ್ರಾಮದ ಮುನೇಶ್ ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಟಿ.ಎ.ಓಂಪ್ರಕಾಶ್‌ ರವರು ಪ್ರತಿಭಟನಾಕಾರರ ಮನವಿ ಆಲಿಸಿದರು. ಆರೋಪಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಎರಡು ತಂಡಗಳನ್ನು ನೇಮಿಸಲಾಗಿದೆ. ಆರೋಪಿಗಳು ಮೊಬೈಲ್‌ ಸ್ಚಿಫ್‌ ಆಫ್‌ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾರೆ. ಅವರ ಸಂಬಂಧಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದರು. ಡಿವೈಎಸ್ಪಿ ಓಂಪ್ರಕಾಶ್ ಮತ್ತು ಸಿಪಿಐ ಲೋಹಿತ್‌ ಕುಮಾರ್ ನೀಡಿದ ಭರವಸೆಯ ಮೇರೆಗೆ ಕೆಂಪಮ್ಮನವರ ಕುಟುಂಬದ ಸದಸ್ಯರು ಪ್ರತಿಭಟನೆಯನ್ನು ಕೈಬಿಟ್ಟರು.

Share this article