ನ್ಯಾಯದಾನ ಕಾರ್ಯ ದೇವರ ಕೆಲಸಕ್ಕೆ ಸಮ: ಉಪಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ

KannadaprabhaNewsNetwork | Published : Jun 17, 2024 1:43 AM

ಸಾರಾಂಶ

ಕಾನೂನು ಸೇವಾ ಪ್ರಾಧಿಕಾರವನ್ನು ಬಳಸಿಕೊಂಡು ಅನೇಕ ಅಸಹಾಯಕ ಅರ್ಹರಿಗೆ ನ್ಯಾಯಕೊಡಿಸಲು ಸರ್ಕಾರ ನ್ಯಾಯಾಂಗಕ್ಕೆ ಗುರುತರ ಜವಾಬ್ದಾರಿ ನೀಡಿದ್ದು ಅದನ್ನು ಸಮರ್ಥವಾಗಿ ನಿರ್ವಹಿಸೋಣ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಗದಗ

ಅರ್ಹರಿಗೆ ನ್ಯಾಯದಾನ ಮಾಡುವ ವ್ಯವಸ್ಥೆ ದೇವರ ಕೆಲಸಕ್ಕೆ ಸಮವಾದದ್ದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹೇಳಿದರು.ಭಾನುವಾರ ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ಕುರಿತು ನಡೆದ ಸಭೆ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದವನ್ನು ಬೇರೆ ಇಲಾಖೆಗಳಿಗೆ ಹೋಲಿಸಿದರೆ ತುಂಬಾ ವ್ಯತ್ಯಾಸವಿದ್ದು, ಸಾರ್ವಜನಿಕರು ಇದನ್ನು ಗೌರವ ಮತ್ತು ವಿಶ್ವಾಸದಿಂದ ಕಾಣುತ್ತಾರೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಯಾರಿಗೂ ಅನ್ಯಾಯವಾಗದಂತೆ ಕೂಲಂಕಷವಾಗಿ ಪರಿಶೀಲಿಸಿ ಅರ್ಹರಿಗೆ ನ್ಯಾಯ ದಾನ ಮಾಡೋಣ ಎಂದರು.

ಕಾನೂನು ಸೇವಾ ಪ್ರಾಧಿಕಾರವನ್ನು ಬಳಸಿಕೊಂಡು ಅನೇಕ ಅಸಹಾಯಕ ಅರ್ಹರಿಗೆ ನ್ಯಾಯಕೊಡಿಸಲು ಸರ್ಕಾರ ನ್ಯಾಯಾಂಗಕ್ಕೆ ಗುರುತರ ಜವಾಬ್ದಾರಿ ನೀಡಿದ್ದು ಅದನ್ನು ಸಮರ್ಥವಾಗಿ ನಿರ್ವಹಿಸೋಣ. ಈಗಾಗಲೇ ಲೋಕ ಅದಾಲತ್ ಮೂಲಕ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕು ಅನೇಕ ಅರ್ಹರಿಗೆ ನ್ಯಾಯ ಒದಗಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ಜರಗುವ ಕಾನೂನು ಅರಿವು ಕಾರ್ಯಕ್ರಮದ ಮೂಲಕ ಜನರಿಗೆ ಕಾನೂನಿನ ಜಾಗೃತಿ ಮೂಡಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಯಾವುದೇ ಒಂದು ಪ್ರಕರಣದಲ್ಲಿ ಒಂದು ಕುಟುಂಬಕ್ಕೆ ಸಕಾಲದಲ್ಲಿ ಸರಿಯಾಗಿ ಪರಿಹಾರ ದೊರೆಯದಿದ್ದರೆ ಅಂತಹ ಕುಟುಂಬಗಳು ಬೀದಿಗೆ ಬರಬಹುದು ಅಥವಾ ಕುಟುಂಬದ ನಿರ್ವಹಣೆಗೆ ಅಡ್ಡದಾರಿ ಹಿಡಿಯಬಹುದು. ಹಾಗಾಗಿ, ಲೋಕಾಯುಕ್ತ ಮತ್ತು ಕಾನೂನು ಸೇವಾ ಪ್ರಾಧಿಕಾರದ ದೂರಿನ ಅನ್ವಯ ತನಿಖೆ ನಡೆಸಿ ಸರಿಪಡಿಸಲು ಅವಕಾಶವಿದೆ. ತಪ್ಪು ಮಾಡಿದ ಅಧಿಕಾರಿಗಳಿಗೆ ದಂಡ ಮತ್ತು ಶಿಕ್ಷೆ ವಿಧಿಸಲು ಅವಕಾಶವಿದೆ ಎಂದರು.

ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಮಾತನಾಡಿ, ಕರ್ನಾಟಕ ಲೋಕಾಯುಕ್ತ ಸಂಸ್ಥೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ವ್ಯಾಪ್ತಿಯು ಅಪರಿಮಿತವಾಗಿದ್ದು, ಅದನ್ನು ಸರಿಯಾಗಿ ಸದ್ಬಳಕೆ ಮಾಡಿ ಸಮನ್ವಯದಿಂದ ಕಾರ್ಯನಿರ್ವಹಿಸಿ ದೂರುಗಳಿಗೆ ಶಿಘ್ರ ಪರಿಹಾರ ಕಂಡುಕೊಂಡು ದೇಶದ ಉನ್ನತಿಗೆ ಶ್ರಮಿಸೋಣ ಎಂದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಲೋಕಾಯುಕ್ತ ಸಂಪನ್ಮೂಲ ಅಧಿಕಾರಿ ಪ್ರಕಾಶ ನಾಡಗೇರ, ಲೋಕಾಯುಕ್ತ ಉಪನಿಬಂಧಕ ಅಮರನಾರಾಯಣ ಕೆ., ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡರ, ಸತೀಶ ಚಿಟಗುಬ್ಬಿ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಜಿ.ಎಸ್. ಪಲ್ಲೇದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತ ತಾಲೂಕುಗಳ ನ್ಯಾಯಾಧೀಶರು ಹಾಜರಿದ್ದರು. ಬಸವರಾಜ ಕುಕನೂರು ನಿರೂಪಿಸಿದರು.

Share this article