-87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜ್ಯೋತಿಯಾತ್ರೆ
------ಕನ್ನಡಪ್ರಭ ವಾರ್ತೆ ಬೀದರ್
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು ಅದು ಬೀದರ್ ಜಿಲ್ಲೆಗೆ ಅ. 12 ಮತ್ತು 13ರಂದು ಬರುತ್ತಿರುವುದರಿಂದ ಎಲ್ಲರೂ ಸೇರಿ ವಿಜೃಂಭಣೆಯಿಂದ ಸ್ವಾಗತಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಜಿಲ್ಲೆಯಲ್ಲಿ ಅ.12 ಮತ್ತು 13 ರಂದು ಸಂಚರಿಸುವ ಪ್ರಯುಕ್ತ ಪೂರ್ವಭಾವಿಯಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಮತ್ತು ಇತರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು.
ಅ.12ರಂದು ಬೀದರ್ ಗಡಿ ಗ್ರಾಮ ಹಳ್ಳಿಖೇಡ (ಕೆ) ಬೆಳಿಗ್ಗೆ 9.30 ಗಂಟೆಗೆ ಬರುತ್ತದೆ. ಅಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘ-ಸಂಸ್ಥೆಯವರು ಎಲ್ಲರೂ ಸೇರಿ ವಿಜೃಂಭಣೆಯಿಂದ ಸ್ವಾಗತಿಸಿಕೊಳ್ಳಬೇಕು. ಈ ರಥಯಾತ್ರೆ ಹುಮನಾಬಾದ್‌ನಲ್ಲಿ ಬೆಳಿಗ್ಗೆ 11ಗಂಟೆ ವರೆಗೆ ಸಂಚರಿಸಲಿದೆ. ನಂತರ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಇದು ಸಂಚರಿಸಲಿದೆ. ತಮ್ಮ-ತಮ್ಮ ತಾಲೂಕಿಗೆ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಆಗಮಿಸಿದಾಗ ಎಲ್ಲರೂ ಸೇರಿ ಸ್ವಾಗತಿಸುವ ಮೂಲಕ ಆಯಾ ತಾಲೂಕಿನ ಮುಖ್ಯ ಬೀದಿಗಳಲ್ಲಿ ಸಂಚರಿಸುವಂತೆ ನೋಡಿಕೊಳ್ಳಬೇಕು ಎಂದರು.ಜಿಲ್ಲೆಯ ಎಲ್ಲಾ ತಾಲೂಕಿನ ತಹಸೀಲ್ದಾರರು ತಮ್ಮ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಮುಖಂಡರು. ವಿವಿಧ ಸಂಘ-ಸಂಸ್ಥೆಗಳು, ಸಾಹಿತಿಗಳು, ಚಿಂತಕರು, ಕಲಾವಿದರು ಒಳಗೊಂಡಂತೆ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆದು ಈ ಕುರಿತು ಎಲ್ಲರಿಗೂ ಮಾಹಿತಿ ನೀಡಬೇಕು ಎಂದರು.
ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮಾತನಾಡಿ, ಜಿಲ್ಲೆಗೆ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಪ್ರಥಮ ಬಾರಿಗೆ ಬರುತ್ತಿದೆ. ಎಲ್ಲಾ ಕನ್ನಡ ಪರ ಸಂಘಟನೆಗಳು ಸೇರಿದಂತೆ ಎಲ್ಲರೂ ಸೇರಿ ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಬೀದರ್ ಗೌರವ ಹೆಚ್ಚಿಸೋಣ ಮತ್ತು ಈ ಜ್ಯೋತಿ ರಥಯಾತ್ರೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಿಗದಿಪಡಿಸಿದ ಸಮಯದಲ್ಲಿ ಸಂಚರಿಸುವಂತೆ ನೋಡಿಕೊಳ್ಳೊಣ ಎಂದು ಹೇಳಿದರು.ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾಂತ ಪೂಜಾರಿ, ಬೀದರ್ ತಹಸೀಲ್ದಾರ್ ದಿಲಶಾದ ಮಹತ್, ಡಿಡಿಪಿಯು ಚಂದ್ರಕಾಂತ ಶಾಬಾದಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕ ಶ್ರೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಸಾಹಿತಿಗಳಾದ ಎಂಎಸ್ ಮನೋಹರ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ್ ಸೋನಾರೆ, ಶಿವಶಂಕರ ಟೋಕರೆ, ವಿರೂಪಾಕ್ಷ ಗಾದಗಿ, ಜಿಲ್ಲೆಯ ತಾಲೂಕಿನ ತಹಸೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
----ಫೋಟೊ: ಫೈಲ್ 5ಬಿಡಿ3