ಕೆ.ಸಿ.ವ್ಯಾಲಿ, ಎಚ್‌.ಎನ್‌. ವ್ಯಾಲಿ 3ನೇ ಹಂತದ ಸಂಸ್ಕರಣೆ ಪ್ರಸ್ತಾವ ಸದ್ಯಕ್ಕಿಲ್ಲ

KannadaprabhaNewsNetwork | Published : Jul 2, 2025 11:47 PM

ಸಾರಾಂಶ

ನಂದಿಬೆಟ್ಟ: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿರುವ ಬೆಂಗಳೂರಿನ ಕೊಳಚೆ ನೀರಿನ ಮೂರನೇ ಹಂತದ ಸಂಸ್ಕರಣೆಗೆ ಆ ಭಾಗದ ರೈತರು ಮತ್ತು ಪರಿಸರ ತಜ್ಞರಿಂದ ತೀವ್ರ ಒತ್ತಾಯ ಕೇಳಿಬರುತ್ತಿದೆ. ಆದರೆ, ಸದ್ಯಕ್ಕೆ ಸರ್ಕಾರದ ಮುಂದೆ ಅಂತಹ ಯೋಜನೆಯ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ.

ನಂದಿಬೆಟ್ಟ: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತಿರುವ ಬೆಂಗಳೂರಿನ ಕೊಳಚೆ ನೀರಿನ ಮೂರನೇ ಹಂತದ ಸಂಸ್ಕರಣೆಗೆ ಆ ಭಾಗದ ರೈತರು ಮತ್ತು ಪರಿಸರ ತಜ್ಞರಿಂದ ತೀವ್ರ ಒತ್ತಾಯ ಕೇಳಿಬರುತ್ತಿದೆ. ಆದರೆ, ಸದ್ಯಕ್ಕೆ ಸರ್ಕಾರದ ಮುಂದೆ ಅಂತಹ ಯೋಜನೆಯ ಪ್ರಸ್ತಾವನೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ.

ನಂದಿಬೆಟ್ಟದಲ್ಲಿ ಬುಧವಾರ ನಡೆದ ಬೆಂಗಳೂರು ಕಂದಾಯ ವಿಭಾಗದ ವಿಶೇಷ ಸಚಿವ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿ ವೇಳೆ ಈ ಸ್ಪಷ್ಟನೆ ನೀಡಿದರು. ಹೆಬ್ಬಾಳ-ನಾಗವಾರ ವ್ಯಾಲಿಯ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಶಿಡ್ಲಘಟ್ಟ ಅಮಾನಿಕೆರೆಯಿಂದ ಶಿಡ್ಲಘಟ್ಟ ತಾಲೂಕಿನ 45 ಕೆರೆಗಳಿಗೆ ಮತ್ತು ಚಿಂತಾಮಣಿ ತಾಲೂಕಿನ 119 ಕೆರೆಗಳಿಗೆ ಸೇರಿ ಒಟ್ಟು 164 ಕೆರೆಗಳಿಗೆ ನೀರು ತುಂಬಿಸಲು 237 ಕೋಟಿ ರು.ಗಳ ಅಂದಾಜು ಮೊತ್ತದ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಈ ವೇಳೆ, ಎರಡು ಹಂತದಲ್ಲಿ ಸಂಸ್ಕರಿಸುತ್ತಿರುವ ಈ ನೀರನ್ನು ಮೂರನೇ ಹಂತದಲ್ಲಿ ಸಂಸ್ಕರಿಸಲು ತಜ್ಞರು, ರೈತರಿಂದ ಒತ್ತಾಯ, ಹೋರಾಟಗಳು ನಡೆಯುತ್ತಿವೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎರಡನೇ ಹಂತದಲ್ಲಿ ಸಂಸ್ಕರಿಸಿ ಮೂರು ಜಿಲ್ಲೆಗಳ ಕೆರೆಗಳಿಗೆ ನೀರು ಹರಿಸುತ್ತಿರುವುದು ಕೇವಲ ಅಂತರ್ಜಲ ಮರುಪೂರಣಕ್ಕೆ ಮಾತ್ರ. ಇದು ಕುಡಿಯುವ ನೀರು, ಕೃಷಿ ಬಳಕೆಗೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸದ್ಯಕ್ಕೆ ಮೂರನೇ ಹಂತದ ಸಂಸ್ಕರಣೆಗೆ ಸಂಬಂಧಿಸಿ ಯಾವುದೇ ಪ್ರಸ್ತಾವನೆ ಇಲ್ಲ. ರೈತರು, ತಜ್ಞರು ಸರ್ಕಾರಕ್ಕೆ ಈ ಬಗ್ಗೆ ಬೇಡಿಕೆ ಸಲ್ಲಿಸಿದರೆ ನಂತರ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಂಸ್ಕರಿತ ನೀರು ತುಂಬುತ್ತಿರುವ ಕೆರೆಗಳಲ್ಲೇ ಕುಡಿಯುವ ನೀರಿನ ಕೊಳವೆಬಾವಿಗಳಿದ್ದು, ಅವುಗಳಿಂದ ನೀರೆತ್ತಿ ಸುತ್ತಮುತ್ತಲ ಹಳ್ಳಿಗಳಿಗೆ ನೀಡಲಾಗುತ್ತಿದೆಯಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಇದೇ ವೇಳೆ ಉತ್ತರ ನೀಡಿದ ಉನ್ನತ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌, ಈಗಾಗಲೇ ಕೆಡಿಪಿ ಸಭೆಯಲ್ಲಿ ಅಂತಹ ಯಾವುದೇ ಬೋರ್ವೆಲ್‌ಗಳಿಂದ ಕುಡಿಯುವ ಉದ್ದೇಶಕ್ಕೆ ನೀರೆತ್ತದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವುಗಳ ಬದಲಿಗೆ ಹೊಸ ಬೋರ್ವೆಲ್‌ಗಳನ್ನು ಕೊರೆಸಿ ಕುಡಿಯುವ ನೀರು ಒದಗಿಸಲಾಗುವುದು ಎಂದರು.

ನಮ್ಮ ಸರ್ಕಾರ ಬೆಂಗಳೂರು ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ತುಂಬಿಸುತ್ತಿರುವುದಕ್ಕೆ ಕೇಂದ್ರ ಸರ್ಕಾರ, ಬೇರೆ ಬೇರೆ ರಾಜ್ಯಗಳಿಂದಲೂ ಪ್ರಸಂಸೆ ವ್ಯಕ್ತವಾಗಿದೆ. ಇದೇ ರೀತಿ ದೇಶದ ಬೇರೆ ಮಹಾನಗರಗಳಲ್ಲೂ ಕೊಳಚೆ ನೀರನ್ನು ಶುದ್ಧೀಕರಿಸುವ ಯೋಜನೆ ಅಳವಡಿಸಿಕೊಳ್ಳುವ ಆಲೋಚನೆ, ಪ್ರಯತ್ನಗಳೂ ನಡೆಯುತ್ತಿವೆ ಎಂದು ಹೇಳಿದರು.

PREV