ಬಸವಣ್ಣ ಅಧ್ಯಯನ ಪೀಠ ಸ್ಥಾಪನೆ ಮಾಡಿ: ಮೊಯ್ಲಿ

| Published : Sep 11 2025, 02:00 AM IST

ಸಾರಾಂಶ

ಸವ ಸಮಿತಿಯ ಸಂಸ್ಥಾಪಕ ಡಾ.ಬಿ.ಡಿ ಜತ್ತಿಯವರ 113ನೇ ಜಯಂತ್ಯುತ್ಸವ ಮತ್ತು ಸಂಸ್ಥಾಪನಾ ದಿನಾಚರಣೆಯಲ್ಲಿ ಸಾಧಕರನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಜಗಜ್ಯೋತಿ ಬಸವೇಶ್ವರ ಅವರ ಬಗ್ಗೆ ಜಾಗತಿಕ ಮಟ್ಟದಲ್ಲಿ ಅಧ್ಯಯನ ನಡೆಸಬೇಕಾಗಿದ್ದು, ಕೂಡಲ ಸಂಗಮದಲ್ಲಿ ಬಸವಣ್ಣ ಅವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಅಥವಾ ಅಧ್ಯಯನ ಪೀಠ ಸ್ಥಾಪನೆ ಆಗಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದರು.

ಬುಧವಾರ ಬಸವೇಶ್ವರ ರಸ್ತೆಯಲ್ಲಿರುವ ಬಸವ ಸಮಿತಿಯ ವತಿಯಿಂದ ನಗರದ ಅನುಭವ ಮಂಟಪದಲ್ಲಿ ನಡೆದ ಭಾರತದ ರಾಷ್ಟ್ರಪತಿ ಹಾಗೂ ಬಸವ ಸಮಿತಿಯ ಸಂಸ್ಥಾಪಕ ಡಾ. ಬಿ.ಡಿ ಜತ್ತಿಯವರ 113ನೇ ಜಯಂತ್ಯುತ್ಸವ ಮತ್ತು ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಬಸವೇಶ್ವರ ಅವರ ಹೆಸರಿನಲ್ಲಿ ವಿದ್ವಾಂಸ ಕೇಂದ್ರ, ಮಾನವೀಯ ಆಕಾಂಕ್ಷೆಗಳನ್ನು ಹೊತ್ತ ಸೌಧವನ್ನು ಕಟ್ಟುವಂತಹ ಪ್ರಯತ್ನ ಆಗಬೇಕು. ಈಗಾಗಲೇ ಅನೇಕ ಗಣ್ಯರ ಹೆಸರಿನಲ್ಲಿ ವಿಶ್ವವಿದ್ಯಾಲಯ, ಅಧ್ಯಯನ ಪೀಠ ಸ್ಥಾಪನೆ ಮಾಡಲಾಗಿದೆ. ಆದರೆ ಇದುವರೆಗೂ ಬಸವೇಶ್ವರ ಅವರ ಅಧ್ಯಯನ ಪೀಠ ಮಾಡಲು ಸಾಧ್ಯವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಡಾ. ಬಿ.ಡಿ ಜತ್ತಿಯವರ 113ನೇ ಜನ್ಮ ದಿನೋತ್ಸವದಲ್ಲಿ ಭ್ರಷ್ಟಾಚಾರ ನಿಮೂರ್ಲನೆ ಮತ್ತು ಆಡಳಿತ ಸುಧಾರಣೆ ಮಾಡುವಂತಹ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕು. ಆಗ ಮಾತ್ರ ಒಂದು ಕ್ರಾಂತಿಕಾರಿ ಬದಲಾವಣೆ ಸಾಧ್ಯವಾಗುತ್ತದೆ. ಯಾಕೆಂದರೆ ರಾಷ್ಟ್ರದಲ್ಲಿ ಅದರ ರೂಪುರೇಷೆ ಹಾಕಿದ್ದು ನಾನು, ಲೋಕಪಾಲ್‌ ಬಿಲ್‌ ತಂದಿದ್ದು ನಾನೇ. ಅದು ಶೇ.100 ರಷ್ಟು ಜಾರಿಯಾದರೆ ದೇಶದಲ್ಲಿ ಭ್ರಷ್ಟಾಚಾರ ನಿರ್ನಾಮವಾಗಲಿದೆ ಎಂದರು.

ಹಿರಿಯ ಸಾಹಿತಿ ಗೊ.ರು. ಚೆನ್ನಬಸ್ಸಪ್ಪ ಮಾತನಾಡಿ ಬಸವ ಸಮಿತಿಯು ಬಸವಣ್ಣ ಸೇರಿದಂತೆ ಹಲವಾರು ವಚನಕಾರರಿಗೆ ದಾರಿದೀಪವಾಗಿದ್ದು, ಇಂತಹ ಬಸವ ಸಮಿತಿಯಿಂದ ಇಂದು ನನಗೆ ಬಸವ ವಿಭೂಷಣ ಪ್ರಶಸ್ತಿ ನೀಡಿದ್ದು, ಗೌರವ ತಂದು ಕೊಟ್ಟಿದೆ ಎಂದರು.

ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅವರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಬಸವ ಸಮಿತಿಯ ಕೆ.ಎಲ್. ಇ. ಬಸವ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವೇಳೆ ಬಸವ ಸಮಿತಿ ಹಿರಿಯ ಉಪಾಧ್ಯಕ್ಷ ಪ್ರಭುದೇವ. ಜೆ. ಚಿಗಟೇರಿ, ಉಪಾಧ್ಯಕ್ಷೆ ಲೀಲಾದೇವಿ ಆರ್. ಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಗೌರವ ಸನ್ಮಾನ: ಬಸವ ವಿಭೂಷಣ ಪ್ರಶಸ್ತಿ ಪಡೆದ ಹಿರಿಯ ಸಾಹಿತಿ ಡಾ. ಗೊ.ರು. ಚೆನ್ನಬಸಪ್ಪ, ಬಸವಶ್ರೀ ಪ್ರಶಸ್ತಿ ಪುರಸ್ಕೃತ ಹಾಸನದ ಯುನೈಟೆಡ್ ಅಕಾಡೆಮಿಯ ಸಿ.ಎಂ. ಚಂದ್ರಶೇಖರ್, ವಚನ ಜ್ಯೋತಿ ಬಳಗದ ಎಸ್. ಪಿನಾಕಪಾಣಿ ಅವರನ್ನು ಸನ್ಮಾನಿಸಲಾಯಿತು.