ದುನಿಯಾ ವಿಜಯ್‌ ನನ್ನನ್ನು ಗ್ರೇಟ್‌ ಅಂದ್ರು: ಬೃಂದಾ ಆಚಾರ್ಯ

| N/A | Published : Nov 21 2025, 02:01 PM IST

actress Brinda Acharya

ಸಾರಾಂಶ

ದುನಿಯಾ ವಿಜಯ್‌, ಶ್ರೇಯಸ್‌ ಮಂಜು ನಟನೆಯ, ಎಸ್‌. ನಾರಾಯಣ್‌ ನಿರ್ದೇಶನದ ಹಾಗೂ ಕೆ. ಮಂಜು, ರಮೇಶ್‌ ಯಾದವ್‌ ನಿರ್ಮಾಣದ ‘ಮಾರುತ’ ಸಿನಿಮಾ ಇಂದು (ನ.21) ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕಿ ಬೃಂದಾ ಆಚಾರ್ಯ ಮಾತನಾಡಿದ್ದಾರೆ.

 ಆರ್‌. ಕೇಶವಮೂರ್ತಿ

ಚಿತ್ರದಲ್ಲಿ ನಿಮ್ಮ ಪಾತ್ರ ಯಾವ ರೀತಿ ಇರುತ್ತದೆ?

ಮುಗ್ಧ, ಪಾಪದ ಹುಡುಗಿ ಪಾತ್ರ ನನ್ನದು. ಈ ಡಿಜಿಟಲ್‌ ಯುಗದ ಬಹುತೇಕ ಹೆಣ್ಣು ಮಕ್ಕಳ ನಿಜ ಜೀವನಕ್ಕೆ ನನ್ನ ಪಾತ್ರ ಕನೆಕ್ಟ್‌ ಆಗುತ್ತದೆ. ಇಲ್ಲಿ ನನ್ನ ಪಾತ್ರದ ಹೆಸರು ಅನನ್ಯ.

ಕತೆಯಲ್ಲಿ ನಿಮ್ಮ ಪಾತ್ರ ಪ್ರಾಮುಖ್ಯತೆ ಎಷ್ಟಿದೆ?

ಕತೆ ಈಗಿನ ಸೋಷಿಯಲ್‌ ಮೀಡಿಯಾದಲ್ಲಿ ನಡೆಯುವ ಕೃತ್ಯಗಳ ಬಗ್ಗೆ ಇದೆ. ಒಬ್ಬ ಹುಡುಗಿಯ ನಂಬಿಕೆಯನ್ನು ಬೇರೆ ಯಾರೋ ದುರುಪಯೋಗ ಪಡಿಸಿಕೊಳ್ಳುತ್ತಾರೆ. ಆ ಹುಡುಗಿ ನಾನೇ.

ಒಂದು ಸಾಲಿನಲ್ಲಿ ಕತೆ ಹೇಳುವುದಾದರೆ?

ಈಗಿನ ಜನರೇಷನ್‌ ಕತೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಂಕಷ್ಟಗಳು ಮತ್ತು ಅದರಿಂದ ಪಾರಾಗಲು ಹೋದಾಗ ಮತ್ತಷ್ಟು ಸಮಸ್ಯೆಗಳನ್ನು ತಂದುಕೊಳ್ಳುತ್ತಿರುತ್ತಾರೆ. ಅದು ಹೇಗೆ ಎಂಬುದೇ ಚಿತ್ರದ ಕತೆ. ಸೋಷಿಯಲ್‌ ಮೀಡಿಯಾದಲ್ಲಿ ನಡೆಯುವ ವಂಚನೆ, ಮೋಸ, ಸ್ಕ್ಯಾಮ್‌, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಇತ್ಯಾದಿಗಳ ಹಿನ್ನೆಲೆಯಲ್ಲಿ ಸಿನಿಮಾ ಸಾಗುತ್ತದೆ.

ಯಾವ ರೀತಿ ಸಿನಿಮಾ ಸಾಗುತ್ತದೆ?

ನಾಲ್ಕು ಪಾತ್ರಧಾರಿಗಳ ಮೂಲಕ ಸಿನಿಮಾ ಸಾಗುತ್ತದೆ. ನಾನು, ಶ್ರೇಯಸ್‌, ಸಾಧು ಕೋಕಿಲಾ ಹಾಗೂ ದುನಿಯಾ ವಿಜಯ್‌ ಆ ನಾಲ್ಕು ಪಾತ್ರಧಾರಿಗಳು. ಒಂದು ರೀತಿಯಲ್ಲಿ ಇದು ಜರ್ನಿ ಸಿನಿಮಾ. ಮಾಹಿತಿ, ಸಂದೇಶ ಮತ್ತು ಮನರಂಜನೆ ಸಿನಿಮಾ.

ಈ ಚಿತ್ರದಲ್ಲಿ ನಟಿಸಿದ ಅನುಭವ ಹೇಗಿತ್ತು?

ನಾನು ಮತ್ತು ಶ್ರೇಯಸ್‌ ಈ ಜನರೇಷನ್‌ ಕಲಾವಿದರು. ಎಸ್‌. ನಾರಾಯಣ್‌ ಅವರ ಅನುಭವ, ಪಯಣದ ಮುಂದೆ ನಾನು ಏನೂ ಅಲ್ಲ. ದುನಿಯಾ ವಿಜಯ್‌ ಸ್ಟಾರ್‌ ಹೀರೋ. ನಿರ್ದೇಶಕರಾಗಿಯೂ ಗೆದ್ದವರು. ಇಂಥವರ ಜೊತೆಗೆ ನಾನು ವಿದ್ಯಾರ್ಥಿಯಂತೆ ಇದ್ದೆ. ದಿನಾ ಶಿಸ್ತಾಗಿ ಶಾಲೆಗೆ ಹೋಗಿ ಮೇಷ್ಟ್ರು ಹೇಳಿದ್ದನ್ನು ಬರೆದು, ಕಲಿತು ಬರುವ ವಿದ್ಯಾರ್ಥಿಯಂತೆ ನಾನು ಇಲ್ಲಿ ಪಾತ್ರ ಮಾಡಿದ್ದೇನೆ.

ನಿಮ್ಮ ಈ ವಿದ್ಯಾರ್ಥಿತನಕ್ಕೆ ಸೆಟ್‌ನಲ್ಲಿ ಕೇಳಿ ಬರುತ್ತಿದ್ದ ಮೆಚ್ಚುಗೆ ಮಾತುಗಳೇನು?

ಎಸ್‌ ನಾರಾಯಣ್‌ ಅವರು ನನ್ನ ಒಂದೇ ಒಂದು ದಿನವೂ ಕೆಲಸದ ವಿಚಾರವಾಗಿ ಗದರಿದವರಲ್ಲ. ಅದನ್ನು ನೋಡಿದ್ದ ವಿಜಯ್‌ ಅವರು, ‘ನಮ್ಮ ಸೀನಿಯರ್‌ ಡೈರೆಕ್ಟರ್‌ ಅವರಿಂದ ಬೈಸಿಕೊಳ್ಳದೆ ಕೆಲಸ ಮಾಡುತ್ತಿದ್ದೀರಿ. ಗ್ರೇಟ್‌ ಕಣಮ್ಮ’ ಅಂತ ಹೊಗಳಿದ್ದು ನನಗೆ ಬಂದ ಬೆಸ್ಟ್‌ ಕಾಂಪ್ಲಿಮೆಂಟ್‌.

ನಿಮ್ಮ ಮತ್ತು ವಿಜಯ್‌ ಪಾತ್ರಕ್ಕೆ ಲಿಂಕೇನು?

ಚಿತ್ರದಲ್ಲಿ ಅವರ ಪಾತ್ರ ಎಂಟ್ರಿ ಆಗುವುದೇ ನನ್ನಿಂದ. ಮತ್ತು ಅವರ ಪಾತ್ರ ಕೊನೆಯಾಗುವುದೇ ನನ್ನಿಂದ. ಅದು ಯಾಕೆ ಮತ್ತು ಹೇಗೆ ಎಂಬುದು ಸಿನಿಮಾ ನೋಡಿ ತಿಳಿಯಬೇಕು.

ಈ ಜನರೇಷನ್‌ನ ನಟಿಯಾಗಿ ನೀವು ಎಸ್‌ ನಾರಾಯಣ್‌ ಬಗ್ಗೆ ಹೇಳುವುದಾದರೆ?

ಅಚ್ಚುಕಟ್ಟಾಗಿ ಸಿನಿಮಾ ಮಾಡುವ ಶಿಸ್ತುಬದ್ಧ ನಿರ್ದೇಶಕರು. ಸೆಟ್‌ನಲ್ಲಿ ಶೂಟಿಂಗ್‌ ಶುರುವಾಗಿ ಪ್ಯಾಕಪ್‌ ಆಗುವ ತನಕ ಅವರು ಕೂತಿದ್ದನ್ನು ನಾನು ನೋಡಿಲ್ಲ. ಜೊತೆಗೆ ಮಾನಿಟರ್‌ ನೋಡಿದವರಲ್ಲ. ಕ್ಯಾಮೆರಾದಲ್ಲೇ ಫ್ರೇಮ್‌ಗಳನ್ನು ನೋಡುತ್ತಿದ್ದರು. ಟ್ರೆಡಿಷನಲ್‌ ಸಿನಿಮಾ ಮೇಕರ್‌ನನ್ನು ನೋಡಿದ ಖುಷಿ ಆಯಿತು.

ಕೌಸಲ್ಯ ಸುಪ್ರಜಾ ರಾಮ ಚಿತ್ರದ ನಂತರ ನಿಮ್ಮ ಜರ್ನಿಯಲ್ಲಿ ಆದ ಬದಲಾವಣೆ ಏನು?

ಒಬ್ಬ ನಟಿಯಾಗಿ ನನಗೇ ಯಾವ ರೀತಿ ಪಾತ್ರ, ಕತೆ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವಷ್ಟು ಬದಲಾಗಿದೆ. ಆ ಚಿತ್ರದ ನಂತರ 43 ಕತೆಗಳನ್ನು ಕೇಳಿದ್ದೇನೆ. ಅಷ್ಟೂ ಕತೆಗಳಲ್ಲಿ ನಾನು ಆಯ್ಕೆ ಮಾಡಿಕೊಂಡಿದ್ದು ಐದು ಚಿತ್ರಗಳನ್ನು. ಈ ಪೈಕಿ ‘ಎಕ್ಸ್‌ ವೈ ಝಡ್‌’ ತೆರೆಗೆ ಬಂದಿದೆ. ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ತೆರೆಗೆ ಬರಬೇಕಿದೆ. ಅಜಯ್‌ ರಾವ್‌ ಜೊತೆಗೊಂದು ಸಿನಿಮಾ ಇದೆ.

ನಿಮ್ಮ ಇಷ್ಟು ವರ್ಷಗಳ ಜರ್ನಿಯಲ್ಲಿ ನೀವು ಹಾಕಿಕೊಂಡಿದ್ದ ಷರತ್ತು ಏನು?

2021ರಲ್ಲಿ ನನ್ನ ಮೊದಲ ಸಿನಿಮಾ ಶುರುವಾಗಿದ್ದು. ಅಲ್ಲಿಂದ ಇಲ್ಲಿತನಕ ನಾನು ಪಾಲಿಸಿಕೊಂಡು ಬಂದಿದ್ದು ಅವಕಾಶಗಳಿಗಾಗಿ, ಹಣಕ್ಕಾಗಿ ಬಂದಿದ್ದೆಲ್ಲವನ್ನೂ ಒಪ್ಪಿಕೊಂಡಿಲ್ಲ. ಪ್ರತಿಯೊಂದು ಕತೆಯನ್ನು ಸಂಪೂರ್ಣವಾಗಿ ಕೇಳಿ, ನನಗೆ ಸೂಕ್ತ ಅನಿಸಿದರೆ ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾ ಬಂದೆ.

 

Read more Articles on