- ಪ್ರಿಯಾ ಕೆರ್ವಾಶೆ

ಸಿನಿಮಾ ಕಾರ್ಯಕ್ರಮಗಳಲ್ಲಿ, ಶೂಟಿಂಗ್‌ ವೇಳೆ ಅಸಭ್ಯ ರೀತಿಯಲ್ಲಿ ಫೋಟೋ, ವೀಡಿಯೋಗ್ರಫಿ ಮಾಡುವ ಯೂಟ್ಯೂಬರ್‌, ಪಾಪರಾಜಿಗಳ ವಿರುದ್ಧ ‘ಕಾಂತಾರ’ ಖ್ಯಾತಿಯ ನಟಿ ಸಪ್ತಮಿ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅಸಭ್ಯವಾಗಿ ದೇಹದ ಭಾಗಗಳನ್ನು ಚಿತ್ರೀಕರಣ ಮಾಡುವುದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ಹೇಳಿದ್ದಾರೆ.

ಅವರ ಪರವಾಗಿ ರಮ್ಯಾ, ರುಕ್ಮಿಣಿ ವಸಂತ್‌, ಡಾಲಿ ಧನಂಜಯ, ನಿಶ್ವಿಕಾ ನಾಯ್ಡು ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕ ಮಂದಿ ದನಿಗೂಡಿಸಿದ್ದಾರೆ. ಈ ಕುರಿತು ಸಪ್ತಮಿ ಗೌಡ ಜೊತೆ ಮಾತುಕತೆ.


ಸಡನ್ನಾಗಿ ಪಾಪರಾಜಿಗಳ ವಿರುದ್ಧ ತಿರುಗಿ ಬೀಳಲು ಕಾರಣ?

ಇತ್ತೀಚೆಗೆ ಸೋಷಲ್‌ ಮೀಡಿಯಾದಲ್ಲಿ ನನ್ನನ್ನು ಕೆಟ್ಟದಾಗಿ ಚಿತ್ರೀಕರಿಸಿದ ಫೋಟೋ ಕಣ್ಣಿಗೆ ಬಿತ್ತು. ಆ ವ್ಯಕ್ತಿಯ ಅಕೌಂಟ್‌ ಚೆಕ್ ಮಾಡಿದೆ. ಬರೀ ಇಂಥಾ ಫೋಟೋಗಳೇ ಇದ್ದವು. ಆತಂಕವಾಗಿ ಬೇರೆ ನಟಿಯರ ಬಳಿ ಚರ್ಚಿಸಿದೆ. ಅವರು ತಮಗೂ ಈ ರೀತಿ ಆಗಿರುವುದನ್ನು ಹೇಳಿಕೊಂಡರು, ಆದರೆ ಎಲ್ಲಿ ನೆಗೆಟಿವ್‌ ಅಭಿಪ್ರಾಯ ಬರುತ್ತೋ ಎಂಬ ಭಯದಲ್ಲಿ ಅವರು ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ನನಗೆ ಇಂಥಾ ಕೆಟ್ಟ ಚಾಳಿಗೆ ಬ್ರೇಕ್‌ ಹಾಕಲೇ ಬೇಕು ಅನಿಸಿತು.

- ವಾಸ್ತವದಲ್ಲಿ ಏನಾಗುತ್ತಿದೆ?

ಸಿನಿಮಾ ಈವೆಂಟ್‌ ಅಥವಾ ಶೂಟಿಂಗ್‌ ವೇಳೆ ಪಾಪರಾಜಿಗಳು, ಯೂಟ್ಯೂಬರ್‌ಗಳನ್ನು ಪ್ರಚಾರಕ್ಕೆ ಅಂತ ಕರೆಸುತ್ತಾರೆ. ಅವರಲ್ಲಿ ಕೆಲವರು ಕಾರಿನಿಂದ ಅಥವಾ ಕ್ಯಾರವಾನ್‌ನಿಂದ ಇಳಿಯುವಾಗಿನಿಂದ ಹಿಡಿದು ಬೇರೆ ಬೇರೆ ಸನ್ನಿವೇಶಗಳಲ್ಲಿ ಅಸಭ್ಯ, ಕೆಟ್ಟ ವೀಡಿಯೋ, ಫೋಟೋ ಹೊಡೆದು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ಇತ್ತೀಚೆಗೆ ಹಾಗೊಂದು ವೀಡಿಯೋವನ್ನು 30 ಲಕ್ಷ ಜನ ನೋಡಿದ್ದರು. ಪ್ರಮೋಶನ್‌ ಅಂತಾರಲ್ಲ, ಈ ವೀಡಿಯೋ ನೋಡಿದ 30 ಲಕ್ಷ ಜನರಲ್ಲಿ ಅರ್ಧದಷ್ಟು ಜನ ಬಂದರೂ ಆ ಸಿನಿಮಾ ಸೂಪರ್‌ ಹಿಟ್‌ ಆಗುತ್ತಿತ್ತು.

ಪಾಪರಾಜಿಗಳನ್ನು ನಟಿಯರೇ ಕರೆಸುತ್ತಾರೆ ಎಂಬ ಮಾತಿದೆಯಲ್ಲಾ?

ಕೆಲವು ನಟಿಯರು ಕರೆಸಿದರೆ ಅದು ಅವರ ವೈಯುಕ್ತಿಕ ವಿಚಾರ. ಅವರು ಅನುಮತಿ ನೀಡಿದರೆ ಚಿತ್ರೀಕರಿಸಿ ವೀಡಿಯೋ ಅಪ್‌ಲೋಡ್‌ ಮಾಡಲಿ. ಅದರರ್ಥ ಎಲ್ಲಾ ನಟಿಯರೂ ಹಾಗೇ ಇರುತ್ತಾರೆ ಅಂತಲ್ಲವಲ್ಲ! ಸಿನಿಮಾ ಈವೆಂಟ್‌ಗಳಿಗೆ, ಶೂಟಿಂಗ್‌ಗೆ ಯಾಕೆ ಇಂಥವರನ್ನು ಕರೆಸ್ತೀರಿ ಅಂತ ಕೇಳಿದ್ರೆ ಪ್ರಚಾರ ಅಂತಾರೆ. ಇವರಲ್ಲಿ ಕೆಲವರು ಕೇವಲ ನಟಿಯರ ಅಸಭ್ಯ ಫೋಟೋಗಳನ್ನಷ್ಟೇ ಸೋಷಲ್‌ ಮೀಡಿಯಾದಲ್ಲಿ ಹಾಕಿ ಹಿಟ್ಸ್‌ ಪಡೆಯಲು ಯತ್ನಿಸುತ್ತಾರೆ. ಇದರಿಂದ ಸಿನಿಮಾಕ್ಕೆ ಯಾವ ಪ್ರಚಾರ ಸಿಕ್ಕ ಹಾಗಾಯ್ತು.

ಏನು ಮಾಡಬೇಕು ಅಂತಿದ್ದೀರಿ?

ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರ ಗಮನಕ್ಕೆ ತಂದಿದ್ದೇನೆ. ಇಡೀ ಚಿತ್ರರಂಗದ ಮಂದಿ ಇಂಥ ಕೆಟ್ಟ ಪರಂಪರೆಗೆ ಇತಿಶ್ರೀ ಹಾಡಲು ಕೈ ಜೋಡಿಸಿದ್ದಾರೆ. ನಟಿಯರ ಅಸಭ್ಯ ಫೋಟೋ ತೆಗೆಯದಂತೆ ವಾಣಿಜ್ಯಮಂಡಳಿ ಕಠಿಣ ಕಾನೂನು ಜಾರಿಗೆ ತರಬೇಕು. ನಟಿಯರನ್ನು ಹೇಗೆ ಬೇಕಿದ್ದರೂ ಬಳಸಿಕೊಳ್ಳಬಹುದು ಎಂಬ ಕ್ರೌರ್ಯಕ್ಕೆ ಫುಲ್‌ಸ್ಟಾಪ್‌ ಬೀಳಬೇಕು. ಇದು ಸಾಧ್ಯವಾಗುವ ತನಕ ನಮ್ಮ ಹೋರಾಟ ಚಾಲ್ತಿಯಲ್ಲಿರುತ್ತದೆ.