ಸಾರಾಂಶ
ಲ್ಯಾಂಡ್‌ಲಾರ್ಡ್ ಸಿನಿಮಾದಲ್ಲಿ ತನ್ನ ಪಾತ್ರದ ಬಗ್ಗೆ ಸಿನಿಮಾದ ಕಥೆಯ ಬಗ್ಗೆ ದುನಿಯಾ ವಿಜಯ್ ಹಾಗೂ ಚಿತ್ರತಂಡವರು ಮಾತನಾಡಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
‘ನಾವೆಲ್ಲ ಚಿಕ್ಕೋರಿದ್ದಾಗ ಸ್ವಲ್ಪ ದುರಹಂಕಾರ ತೋರಿಸಿದ್ರೆ ನೀನೇನು ದೊಡ್ಡ ಲ್ಯಾಂಡ್ ಲಾರ್ಡಾ ಅನ್ನೋ ಮಾತನ್ನ ಹೇಳೋರು. ಆ ನುಡಿಗಟ್ಟನ್ನೇ ನಮ್ಮ ಈ ದೇಸಿಕಥೆಗೆ ಶೀರ್ಷಿಕೆಯಾಗಿ ಇಟ್ಟಿದ್ದೇವೆ. ಬಡಜನರ ಪ್ರತಿನಿಧಿಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ’ ಎಂದು ದುನಿಯಾ ವಿಜಯ್ ಹೇಳಿದ್ದಾರೆ.ನೆಲಮಂಗಲದ ಬರದಿಬೆಟ್ಟದ ತಪ್ಪಲಲ್ಲಿ ‘ಲ್ಯಾಂಡ್ ಲಾರ್ಡ್’ ಸಿನಿಮಾಗಾಗಿ ಹಳ್ಳಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗುತ್ತಿದೆ. ಈ ಸೆಟ್‌ನಲ್ಲೇ ದುನಿಯಾ ವಿಜಯ್ ಬರ್ತ್ ಡೇ ಆಚರಣೆ ನಡೆಯಿತು. ಈ ವೇಳೆ ವಿಜಯ್, ‘ಬರ್ತ್ ಡೇ ದಿನವೂ ಶೂಟಿಂಗ್ ಮಾಡಿದ್ದಕ್ಕೆ ಖುಷಿ ಆಯ್ತು. ಮುಂದಿನ ವರ್ಷ ಅಭಿಮಾನಿಗಳೊಂದಿಗೆ ಜನ್ಮದಿನ ಆಚರಿಸುತ್ತೇನೆ. ಈ ಸಿನಿಮಾದಲ್ಲಿ ನಾನು 51 ವರ್ಷದ ಹಳ್ಳಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಮಗಳು ರಿತನ್ಯಾ ಸಿನಿಮಾದಲ್ಲೂ ಮಗಳ ಪಾತ್ರ ಮಾಡುತ್ತಿದ್ದಾಳೆ’ ಎಂದರು.ನಿರ್ದೇಶಕ ಜಡೇಶ್ ಹಂಪಿ, ‘ಇದು ಕೋಲಾರದ ಕಥೆ. ಕೂಲಿಗಾಗಿ ಕಾಸು ಎಂಬ ವಿಚಾರ ಸಿನಿಮಾದಲ್ಲಿ ಪ್ರಮುಖವಾಗಿ ಬರುತ್ತದೆ. ಈ ಸಿನಿಮಾ ನಾಯಕನ ಹೆಸರು ರಾಚಯ್ಯ. 1980ರ ಕಾಲಘಟ್ಟದಲ್ಲಿ ನಡೆಯುವ ಕಥೆ’ ಎಂದರು. ನಿರ್ಮಾಪಕರಾದ ಸೂರಜ್ ಗೌಡ, ಸತ್ಯಪ್ರಕಾಶ್, ರಿತನ್ಯಾ ವಿಜಯ್ ಇದ್ದರು. ಸಿನಿಮಾ ನಾಯಕಿ ರಚಿತಾರಾಮ್ ಗೈರು ಹಾಜರಾಗಿದ್ದರು. ಬಾಕ್ಸ್ಮಧ್ಯವಯಸ್ಸಿನ ಹೆಣ್ಮಗಳಾಗಿ ರಚಿತಾರಾಮ್
ಈ ಸಿನಿಮಾದಲ್ಲಿ ದುನಿಯಾ ವಿಜಯ್ ವಯಸ್ಸು 51 ವರ್ಷ. ಅವರ ಪತ್ನಿ ಪಾತ್ರಧಾರಿ ರಚಿತಾ ರಾಮ್ ಅವರದ್ದೂ ಮಧ್ಯ ವಯಸ್ಸಿನ ಪ್ರೌಢ ಮಹಿಳೆಯ ಪಾತ್ರ. ಆರಂಭದಿಂದ ಕೊನೆಯವರೆಗೂ ತಾನು ಹಾಗೂ ರಚಿತಾ ಇದೇ ವಯಸ್ಸಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ದುನಿಯಾ ವಿಜಯ್ ಹೇಳಿದ್ದಾರೆ.