ಸಾರಾಂಶ
ದೈಹಿಕ ಚಟುವಟಿಕೆ, ನಿದ್ರೆ, ಆಹಾರ ಕ್ರಮ, ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಉಂಟು ಮಾಡಲಿವೆ ಎಂದು ಐಐಎಂನ ಸಾಂಸ್ಥಿಕ ನಡವಳಿಕೆ ಮತ್ತು ಶೈಕ್ಷಣಿಕ ನಾಯಕತ್ವ ವಿಭಾಗದ ಮುಖ್ಯಸ್ಥ ಪ್ರೊ.ಸೌರವ್ ಮುಖರ್ಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ದೈಹಿಕ ಚಟುವಟಿಕೆ, ನಿದ್ರೆ, ಆಹಾರ ಕ್ರಮ, ಸಾಮಾಜಿಕ ಮಾಧ್ಯಮಗಳು ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಉಂಟು ಮಾಡಲಿವೆ ಎಂದು ಐಐಎಂನ ಸಾಂಸ್ಥಿಕ ನಡವಳಿಕೆ ಮತ್ತು ಶೈಕ್ಷಣಿಕ ನಾಯಕತ್ವ ವಿಭಾಗದ ಮುಖ್ಯಸ್ಥ ಪ್ರೊ.ಸೌರವ್ ಮುಖರ್ಜಿ ಹೇಳಿದರು.ಬುಧವಾರ ನಗರದಲ್ಲಿ ನಡೆದ ‘ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನಾಚರಣೆ’ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮಗಳಿಂದ ದೂರವಾಗುತ್ತಿರುವ ಮಾನವ ಸಂಬಂಧಗಳನ್ನು ಪುನರ್ ನಿರ್ಮಾಣ ಮಾಡುವುದು ಬಹು ಮುಖ್ಯವಾಗಿದೆ. ಅರ್ಥ ಪೂರ್ಣ ಸಂಬಂಧಗಳು ಜೀವನದ ಕಠಿಣಕರ ಸಂದರ್ಭಗಳನ್ನು ಎದುರಿಸುವುದಕ್ಕೆ ಸಹಕಾರಿಯಾಗಲಿವೆ ಎಂದರು.
ಅಪೋಲೋ ಆಸ್ಪತ್ರೆಯ ಕ್ಲಿನಿಕಲ್ ಮಾನವಶಾಸ್ತ್ರ ವಿಭಾಗದ ಹಿರಿಯ ವೈದ್ಯೆ ಡಾ.ಸುಗಮಿ ರಮೇಶ್ ಮಾತನಾಡಿ, ಒತ್ತಡ, ಅನಾರೋಗ್ಯ ಮತ್ತು ಭಾವನಾತ್ಮಕ ನೋವುಗಳು ಉಂಟಾದಾಗ ಒಬ್ಬರನ್ನೊಬ್ಬರು ಬೆಂಬಲಿಸಬೇಕು, ಸಹಾನುಭೂತಿ ತೋರಬೇಕು. ಯುವ ಜನರು, ಬದುಕಿನ ಭರವಸೆ ಕಳೆದುಕೊಳ್ಳಬಾರದು. ಆತ್ಮಹತ್ಯೆಯು ಸಾಮಾನ್ಯವಾಗಿ ಆಳವಾದ ಮಾನಸಿಕ ನೋವು, ಹತಾಶತೆಯ ಭಾವನೆ ಅಥವಾ ಒಂಟಿತನದಿಂದ ಉಂಟಾಗುತ್ತದೆ. ಆದರೆ ಈ ಭಾವನೆಗಳು ತಾತ್ಕಾಲಿಕ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.ಮುಖ್ಯ ಕ್ಲಿನಿಕಲ್ ಕೇರ್ ಮ್ಯಾನೇಜರ್ ಡಾ.ಎಲ್.ಅರ್ಚನಾ ಆತ್ಯಹತ್ಯೆ ತಡೆಯ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಅಪೋಲೋ ಆಸ್ಪತ್ರೆಗಳ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಡಾ.ಸಂಗೀತಾ ರೆಡ್ಡಿ, ಉಪಾಧ್ಯಕ್ಷ ಮತ್ತು ಸಿಒಒ ಡಾ.ಗೋವಿಂದಯ್ಯ ಯತೀಶ್, ಕ್ಲಿನಿಕಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಜಂಟಿ ನಿರ್ದೇಶಕ ಡಾ.ಕೆ ಪ್ರೀತಮ್, ಕ್ಲಿನಿಕಲ್ ಸಲಹೆಗಾರ ಡಾ.ಸುನಿಲ್ ನಾರಾಯಣ್ ದತ್ ಮೊದಲಾದವರಿದ್ದರು.