ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ ಬಾರದಂತೆ ಕೆಲಸ ಮಾಡಬೇಕು. ಮುಂಬರುವ ಪಾಲಿಕೆ ಚುನಾವಣೆಯಲ್ಲಿ ಐದೂ ಹೊಸ ಪಾಲಿಕೆಗಳಲ್ಲಿ ಗೆಲುವು ಸಾಧಿಸುವ ರೀತಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರದ ಕಾಂಗ್ರೆಸ್ ಶಾಸಕರಿಗೆ ಸೂಚನೆ ನೀಡಿದ್ದಾರೆ.ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು, ಸಚಿವರೊಂದಿಗೆ ಸಭೆ ನಡೆಸಿದ ಅವರು, ಸೂಕ್ತ ಅನುದಾನದ ಭರವಸೆಯನ್ನೂ ನೀಡಿದರು ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರವು ಪ್ರತಿಪಕ್ಷಗಳ ವಿರೋಧದ ನಡುವೆಯೂ ಬೆಂಗಳೂರು ನಗರದ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಜಿಬಿಎ ರಚನೆ ಮಾಡಿ ಐದು ಪಾಲಿಕೆಗಳನ್ನು ರಚಿಸಲಾಗಿದೆ. ಜಿಬಿಎ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಪಾಲಿಕೆಗಳಲ್ಲಿ ಜನಪ್ರತಿನಿಧಿಗಳು ಇಲ್ಲದ ಕಾರಣ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಿಮ್ಮ (ಶಾಸಕರು) ಜವಾಬ್ದಾರಿ ದೊಡ್ಡದು. ಹೀಗಾಗಿ ನಿರೀಕ್ಷೆಗೆ ತಕ್ಕಂತೆ ನೀವು ಸ್ಪಂದಿಸಿ ನೆರವಾಗಬೇಕು ಎಂದು ಸೂಚನೆ ನೀಡಿದ್ದಾರೆ.ಹೊಸದಾಗಿ ರಚನೆಯಾಗಿರುವ ಐದು ಪಾಲಿಕೆಗಳ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದ್ದು, ಚುನಾವಣೆ ಸಲುವಾಗಿ ಪಕ್ಷ ಸಂಘಟನೆಗಾಗಿ ಐದು ಪಾಲಿಕೆಗಳಿಗೂ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ಬೆಂಗಳೂರು ಪೂರ್ವ ಪಾಲಿಕೆಗೆ ಕೃಷ್ಣ ಬೈರೇಗೌಡ, ಪಶ್ಚಿಮಕ್ಕೆ ಬಿ.ಎಸ್.ಸುರೇಶ್, ಉತ್ತರಕ್ಕೆ ಕೆ.ಜೆ.ಜಾರ್ಜ್, ದಕ್ಷಿಣಕ್ಕೆ ರಾಮಲಿಂಗಾರೆಡ್ಡಿ ಹಾಗೂ ಬೆಂಗಳೂರು ಕೇಂದ್ರ ಪಾಲಿಕೆಗೆ ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್ ಅವರನ್ನು ಪಕ್ಷದಿಂದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಇವರು ಮುಂದಿನ ಚುನಾವಣೆಯಲ್ಲಿ ಐದೂ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು ಎಂದು ತಿಳಿದುಬಂದಿದೆ.ಬೆಂಗಳೂರಿನಲ್ಲಿ ಮೂಲ ಸೌಕರ್ಯದ ಕೊರತೆ, ರಸ್ತೆ ಗುಂಡಿ, ಟ್ರಾಫಿಕ್ ದಟ್ಟಣೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಹಲವು ಶಾಸಕರು ಪ್ರಸ್ತಾಪಿಸಿದರು. ಬೆಂಗಳೂರು ನಗರದಲ್ಲಿ ಸಮಸ್ಯೆಗಳು ಹೆಚ್ಚಿದ್ದು ವಿಶೇಷ ಅನುದಾನದ ಅಗತ್ಯವನ್ನೂ ಪ್ರತಿಪಾದಿಸಿದರು ಎಂದು ತಿಳಿದುಬಂದಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕೆ.ಜೆ. ಜಾರ್ಜ್ ಹೊರತುಪಡಿಸಿ ಬೆಂಗಳೂರು ನಗರದ ಎಲ್ಲಾ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಶಾಸಕರ ಜತೆಗೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಎಸ್.ಟಿ.ಸೋಮಶೇಖರ್ ಭಾಗವಹಿಸಿದ್ದರು.