ಸಾರಾಂಶ
ಕನನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಡಿ.7ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025ರ ಕಾರ್ಯಕ್ರಮಕ್ಕೆ ಐರನ್ ಮ್ಯಾನ್ ಖ್ಯಾತಿಯ ಹಿರಿಯ ಐಪಿಎಸ್ ಅಧಿಕಾರಿ ಮತ್ತು ಕೆಎಸ್‌ಆರ್‌ಪಿ ಐಜಿಪಿ ಸಂದೀಪ ಪಾಟೀಲರನ್ನು ಸಮಿತಿಯಿಂದ ಆಹ್ವಾನಿಸಲಾಯಿತು.ಬೆಂಗಳೂರಿನಲ್ಲಿ ಹೆರಿಟೇಜ್ ರನ್ ಪ್ರಾಯೋಜಕ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ.ಪಿ.ಕೆ.ಎಂ ಮತ್ತು ಸಚಿವ ಎಂ.ಬಿ.ಪಾಟೀಲರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಅವರು ಆಹ್ವಾನಿಸಿದರು.
ಆಹ್ವಾನಕ್ಕೆ ಸಂತೋಷದಿಂದ ಒಪ್ಪಿಗೆ ಸೂಚಿಸಿದ ಸಂದೀಪ ಪಾಟೀಲ, ಜಲ, ವೃಕ್ಷ, ಶಿಕ್ಷಣ, ಆರೋಗ್ಯ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಆಯೋಜಿಸಲಾಗಿರುವ ಹೆರಿಟೇಜ್ ರನ್‌ನಲ್ಲಿ ಪಾಲ್ಗೊಳ್ಳಲು ಹೆಮ್ಮೆ ಎನಿಸುತ್ತದೆ. ಐತಿಹಾಸಿಕ ಗೋಳಗುಮ್ಮಟ, ಬಾರಾಕಮಾನ ಮತ್ತಿತರ ಪ್ರಾಚೀನ ಸ್ಮಾರಕಗಳ ಮುಂದೆ ಓಡುವುದು ಓಟಗಾರರಿಗೆ ಸ್ಪೂರ್ತಿ ನೀಡುತ್ತದೆ. ಇದು ಓಟಗಾರರಿಗೆ ಉತ್ತೇಜನವನ್ನೂ ಕೊಡುತ್ತದೆ. ಬೆಂಗಳೂರಿನಲ್ಲಿರುವ ಮ್ಯಾರಾಥಾನ್ ಓಟಗಾರರ ತಂಡಗಳನ್ನು ಸಂಪರ್ಕಿಸಿ ಈ ಬಾರಿ ವಿಜಯಪುರ ಹರಿಟೇಜ್ ರನ್‌ನಲ್ಲಿ ಪಾಲ್ಗೊಳ್ಳಲು ಪ್ರೇರೆಪಿಸುವುದಾಗಿ ಹೇಳಿದರು.ಇತ್ತೀಚೆಗೆ ಡೆನ್ಮಾರ್ಕ್‌ನ ಕೊಪನಹೆಗನನಲ್ಲಿ ವಿಶ್ವ ಟ್ರಯಥ್ಲಾನ್ ಕಾರ್ಪೊರೇಶನ್ ಆಯೋಜಿಸಿದ್ದ ಐರನ್ ಮ್ಯಾನ್ ಟ್ರಯಥ್ಲಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಸಂದೀಪ ಪಾಟೀಲ ಅವರು, ಒಟ್ಟು 14 ಗಂಟೆ 45 ನಿಮಿಷಗಳಲ್ಲಿ ಸಮುದ್ರದಲ್ಲಿ 3.80 ಕಿ.ಮೀ ಈಜುವುದು, ನಂತರ 180 ಕಿ.ಮೀ. ಸೈಕಲ್ ಓಡಿಸುವುದು ಹಾಗೂ ಬಳಿಕ 42 ಕಿ.ಮೀ ಪುಲ್ ಮ್ಯಾರಾಥಾನ್ ಓಡುವ ಮೂಲಕ ಸ್ಪರ್ಧೆ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಇಡೀ ಪೊಲೀಸ್ ಇಲಾಖೆ ಮಾತ್ರವಲ್ಲ ಕರ್ನಾಟಕ ಮತ್ತು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಸಂದೀಪ ಪಾಟೀಲ ಈ ಬಾರಿಯ ವೃಕ್ಷಥಾನ್ ಹೆರಿಟೇಜ್ ರನ್- 2025ರಲ್ಲಿ ಪಾಲ್ಗೊಳ್ಳುತ್ತಿರುವುದು ಮ್ಯಾರಾಥಾನ್ ಎಲ್ಲ ಓಟಗಾರರಿಗೆ ಸಂತಸ ತಂದಿದ್ದು ಯುವ ಓಟಗಾರರಿಗೆ ಸ್ಪೂರ್ತಿ ನೀಡಿದೆ ಎಂದು ಡಾ.ಮಹಾಂತೇಶ ಬಿರಾದಾರ ತಿಳಿಸಿದರು.