ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವೈಫಲ್ಯ ಕಂಡಿದೆ. ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಇದರಿಂದಲೇ ಮದ್ದೂರು ಗಲಭೆ ಸೇರಿದಂತೆ ರಾಜ್ಯಾದ್ಯಂತ ಕೋಮು ಗಲಭೆಗಳು ನಡೆಯುತ್ತಿವೆ ಎಂದು ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಆರೋಪಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮೆರವಣಿಗೆಗಳು ನಡೆಯಬೇಕಾದರೆ ಯಾರ ಅನುಮತಿ ಪಡೆಯಬೇಕು ಎಂದು ಗೊಂದಲ ರಾಜ್ಯದಲ್ಲಿ ಸೃಷ್ಟಿಯಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಘಟನೆಗಳನ್ನು ಗಮನಿಸಿದಾಗ ಪೂರ್ವ ನಿಯೋಜಿತವಾಗಿಯೇ ಸಂಚು ರೂಪಿಸಿ ಗಲಭೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆದರೂ, ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಲು ವಿಳಂಬ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಗಲಭೆಕೋರರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.ಪೊಲೀಸರು ಸಮಯಕ್ಕೆ ಸರಿಯಾದ ಕ್ರಮ ಕೈಗೊಳ್ಳದಿರುವುದರಿಂದ ೮ ಜನರು ಗಾಯಗೊಂಡಿದ್ದು, ೨೧ ಮಂದಿಯನ್ನು ಬಂಧಿಸಲು ತಡವಾಯಿತು. ಇದು ಅಲ್ಪಸಂಖ್ಯಾತ ತುಷ್ಟೀಕರಣ ನೀತಿಯ ಪರಿಣಾಮ ಎಂದ ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಾಟ ನಡೆದಿದ್ದು, ರಾಷ್ಟ್ರೀಯ ಭಾವನೆಗಳನ್ನು ಅದು ಅವಮಾನಿಸಿದೆ. ಇದನ್ನು ಕೂಡ ತಡೆಯಲು ಸರ್ಕಾರ ವಿಫಲವಾಗಿದೆ ಎಂದು ದೂರಿದರು.ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ವ್ಯವಸ್ಥೆ ಹಾಳಾಗಲು ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕೀಯ ಹಾಗೂ ಅನ್ಯ ಕೋಮಿನವರ ರಕ್ಷಣೆಯೇ ಕಾರಣವಾಗಿದೆ. ಆದ್ದರಿಂದ ಅಲ್ಪಸಂಖ್ಯಾತರಿಗೆ ಇದು ನಮ್ಮ ಸರ್ಕಾರ ನಾವು ಏನೇ ತಪ್ಪು ಮಾಡಿದರೂ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂಬ ಮನೋಭಾವ ಮೂಡುತ್ತಿದೆ. ಹೀಗಾಗಿ ರಾಜ್ಯದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದರು.ಭದ್ರಾವತಿಯಲ್ಲಿ ಸಾರ್ವಜನಿಕವಾಗಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದೆ ಇನ್ನೂ ಪರಿಶೀಲಿಸುವ ಹಂತದಲ್ಲಿದೆ. ಹಾಗಾದರೆ ನಿಮ್ಮ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಬೇರೆಲ್ಲಾ ಮೆರವಣಿಗಗಳು ನಡೆದಾಗ ನಿಮಗೆ ವರದಿ ಸಿಗುತ್ತವೆ. ಆದರೆ, ಹಿಂದೂಗಳ ಮೆರವಣಿಗೆಯಲ್ಲಿ ಏಕೆ ಮಾಹಿತಿ ಸಿಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೋಲಾರನಲ್ಲಿ ಪ್ಯಾಲೇಸ್ತೀನ್ ಧ್ವಜ ಹಿಡಿದು ಈದ್ ಮಿಲಾದ್ ಮೆರವಣಿಗೆ ಮಾಡಿದ್ದಾರೆ. ಆದರೂ ಆರೋಪಿಗಳ ಮೇಲೆ ಕಾಂಗ್ರೆಸ್ ಸರ್ಕಾರ ಕ್ರಮ ಜರುಗಿಸುವ ಗೋಜಿಗೆ ಹೋಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.ಗೃಹ ಸಚಿವರು ಒಳ್ಳೆಯವರಿದ್ದಾರೆ. ಆದರೆ, ಗೃಹ ಸಚಿವರ ಹಿಡಿತದಲ್ಲಿ ಗೃಹ ಇಲಾಖೆ ಇದೆಯಾ ಎಂಬ ಪ್ರಶ್ನೆ ಮೂಡುತ್ತಿದೆ. ಯಾವುದೇ ಘಟನಾವಳಿಗಳ ಬಗ್ಗೆ ಮಾಹಿತಿ ಕೇಳಿದಾಗ ಮಾಹಿತಿ ಬರಬೇಕು ಎಂಬ ಹಾರಿಕೆ ಉತ್ತರ ನೀಡುವುದನ್ನು ನೋಡಿದರೆ ಗೃಹ ಸಚಿವರ ವೈಫಲ್ಯ ಎದ್ದು ಕಾಣುತ್ತಿದೆ. ಇನ್ನಾದರೂ ಗೃಹ ಸಚಿವರು ಎಚ್ಚೆತ್ತುಕೊಂಡು ಇಲಾಖೆ ಸರಿಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.ಮುಂದಿನ ಜನ್ಮವೊಂದಿದ್ದರೆ ನಾನು ಮುಸ್ಲಿಮನಾಗಿ ಹುಟ್ಟುವೆ ಎಂಬ ಭದ್ರಾವತಿ ಶಾಸಕ ಕೆ. ಸಂಗಮೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ಜನ್ಮ ತಡವಾಗಬಹುದು ಮತ್ತು ಇನ್ನೊಂದು ಜನ್ಮ ಇದೆಯೋ ಇಲ್ಲೋ ಗೊತ್ತಿಲ್ಲ. ಹಾಗಾಗಿ ತಕ್ಷಣ ನಿಮ್ಮ ನಿಮ್ಮ ಆಸೆ ಈಡೇರಿಸಿಕೊಳ್ಳಿ. ಇದರಿಂದ ನಿಮಗೂ ಒಳ್ಳೆಯದು ಹಾಗೂ ನೀವು ಮಾತು ಕೊಟ್ಟವರಿಗೂ ನಿಮ್ಮ ಮೇಲೆ ನಂಬಿಕೆ ಮೂಡುತ್ತದೆ ಎಂದು ಕುಹಕವಾಡಿದರು.ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ, ಜಿಲ್ಲಾ ಅಧ್ಯಕ್ಷ ಗೀತಾ ಸುತಾರ, ಎಂ.ಬಿ.ಝಿರಲಿ, ಹನುಮಂತ ಕೊಂಗಾಲಿ, ಸಚಿನ ಕಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.