- ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ವಾಲ್ಮೀಕಿ ಜಾತ್ರೆ-2026 । ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಮಂತ್ರಿ
- - -- 2013ರ ಬೆಳಗಾವಿ ಅಧಿವೇಶನದಲ್ಲಿ ಆರೇಳು ಸಾವಿರ ಕೋಟಿ ಅನುದಾನ ನೀಡಿದ್ದೇವೆ
- ಬಿಜೆಪಿಯವರು ನಾವೇ ಮಾಡಿದ್ದು ಎನ್ನುತ್ತ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ- - -
ಕನ್ನಡಪ್ರಭ ವಾರ್ತೆ ಹರಿಹರ
ಪರಿಶಿಷ್ಠ ಜಾತಿ ಮತ್ತು ಪಂಗಡಗಳಿಗೆ ವಿವಿಧ ಮೀಸಲಾತಿಗಳನ್ನು ನೀಡಿದವರು ಹಾಗೂ ಅತಿ ಹೆಚ್ಚು ಅನುದಾನಗಳನ್ನು ಕೊಟ್ಟವರು ನಾವು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆದ ವಾಲ್ಮೀಕಿ ಜಾತ್ರೆ-2026ರ ಎರಡನೇ ದಿನವಾದ ಸೋಮವಾರ ನಡೆದ ಜನಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ತಪ್ಪುದಾರಿಗೆ ಎಳೆಯುವ ಬಿಜೆಪಿ:
ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ಮಾಜಿ ಸಚಿವ ಆಂಜನೇಯ ಇದ್ದಾಗ 2013ರ ಬೆಳಗಾವಿ ಅಧಿವೇಶನದಲ್ಲಿ ಆರೇಳು ಸಾವಿರ ಕೋಟಿ ಅನುದಾನ ನೀಡಿದ್ದೇವೆ. ಇಂದು ಸಮಾಜದ ಜನಸಂಖ್ಯೆಗೆ ಅನುಗುಣವಾಗಿ 42 ಸಾವಿರದ 18 ಕೋಟಿ ರು. ನೀಡುತ್ತಿರುವುದು ನಾವು. ರಿಜರ್ವೇಷನ್ ಹಾಗೂ ಪ್ರಮೋಷನ್ ಕಾಯ್ದೆ ತಂದವರು ನಾವು. ಕಳೆದ 3 ವರ್ಷಗಳಲ್ಲಿ 1 ಲಕ್ಷ 17 ಸಾವಿರ ಕೋಟಿ ಅನುದಾನವನ್ನು ಕೊಟ್ಟವರು ನಾವು. ಆದರೆ 4 ವರ್ಷ ಆಡಳಿತ ಮಾಡಿದ ಬಿಜೆಪಿಯವರು ನಾವು ಮಾಡಿದೆವು ನಾವು ಮಾಡಿದೆವು ಎನ್ನುತ್ತ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಹರಿಹಾಯ್ದರು.ಶೋಷಿತ ಸಮಾಜಗಳ ಮಠಗಳು ಮುಖಂಡರು ಇಂಥ ಜಾತ್ರಾ ಸಂದರ್ಭದಲ್ಲಿ ಸಮಾಜದ ಜನತೆಗೆ ಇತಿಹಾಸ ಹಾಗೂ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು. ಇದರಿಂದ ಸಮಾಜದಲ್ಲಿ ಇದ್ದ ವ್ಯವಸ್ಥೆ ಹಾಗೂ ಈಗ ಇರುವ ವ್ಯವಸ್ಥೆಯ ಅರಿವು ಮೂಡಿಸಿಕೊಳ್ಳುವ ಕಾರ್ಯ ಆಗಲು ಸಾಧ್ಯ. ಯಾರಿಗೆ ಇತಿಹಾಸದ ಅರಿವು ಇರುವುದೋ ಅವರು ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದರು.
ಪಟ್ಟಭದ್ರ ಹಿತಾಸಕ್ತಿಗಳು ಸಂವಿಧಾನ ಬರುವ ಮೊದಲು ಸರ್ವರಿಗೂ ಶಿಕ್ಷಣ ಸಿಗುವ ಅವಕಾಶದಿಂದ ವಂಚಿತರಾನ್ನಾಗಿ ಮಾಡಿದ್ದರು. ಶೂದ್ರರು ವಿದ್ಯೆ ಕಲಿಯುವ ಅವಕಾಶದಿಂದ ವಂಚಿತರನ್ನಾಗಿ ಮಾಡಿದ್ದರು. ಅದೇ ವಿದ್ಯೆ ಕಲಿತ ಅಂಬೇಡ್ಕರ್, ಮಹಾಭಾರತ ಬರೆದ ವ್ಯಾಸರು, ರಾಮಾಯಣ ಬರೆದ ವಾಲ್ಮೀಕಿ ಮುನ್ನೆಲೆಗೆ ಬಂದರು. ಹಾಗಾಗಿ, ಪ್ರತಿಯೊಬ್ಬ ಹಿಂದುಳಿದ ಜಾತಿ ವರ್ಗದವರು ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಸಿಎಂ ಅಭಿಪ್ರಾಯಪಟ್ಟರು.ಹಿಂದಿನ ಜನ್ಮ ಎಂಬುದೇ ಇಲ್ಲ:
ಅಂದು ಹಾಗೂ ಇಂದಿಗೂ ಶೂದ್ರರಿಗೆ ಮೌಢ್ಯ, ಕಂದಾಚಾರ, ಮೂಢನಂಬಿಕೆಗಳನ್ನು ತುಂಬುವ ಪ್ರಯತ್ನಗಳು ನಡೆಯುತ್ತಿವೆ. ಹಿಂದಿನ ಜನ್ಮದ ಪಾಪ ಇದೆ ಎಂದು ಬಿಂಬಿಸುವ ಕಾರ್ಯಗಳು ನಡೆಯುತ್ತಿವೆ. ಹಿಂದಿನ ಜನ್ಮವೇ ಇಲ್ಲ ಎಂದಾಗ ಹಿಂದಿನ ಜನ್ಮದ ಪಾಪ ಹೇಗೆ ಪ್ರಸ್ತುತ ಜನ್ಮಕ್ಕೆ ಬರಲು ಸಾಧ್ಯ. ಬ್ರಹ್ಮ ಹಣೆಬರಹ ಬರೆಯುವುದಾಗಿದ್ದರೆ, ನಾನು ಮುಖ್ಯಮಂತ್ರಿ ಆಗುವುದಿರಲಿ ಶಾಸಕ ಅಥವಾ ವಕೀಲನಾಗಲೂ ಸಾಧ್ಯವಿರುತ್ತಿರಲಿಲ್ಲ. ಇದನ್ನು ವಿರೋಧಿಸಿದ ಬಸವಾದಿ ಶರಣರು ಅದನ್ನು ತಿರಸ್ಕರಿಸಿ ಹೊರಬಂದರು ಎಂದು ಸಿದ್ದರಾಮಯ್ಯ ಹೇಳಿದರು.ಮೌಢ್ಯ, ಕಂದಾಚಾರ, ಮೂಢನಂಬಿಕೆಗಳಿಂದ ಹೊರಬನ್ನಿ. ಉತ್ತಮ ಶಿಕ್ಷಣ ಹೊಂದಿ. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದೆ ಬನ್ನಿ. ಉತ್ತಮ ಶಿಕ್ಷಣ, ಸಂಘಟನೆ, ಹೋರಾಟಗಳಿಂದ ನಿಮ್ಮ ಹಕ್ಕುಗಳನ್ನು ಪಡೆಯಲು ಹಾಗೂ ಸಮಸಮಾಜ ನಿರ್ಮಾಣ ಸಾಧ್ಯ. ಈಗಾಗಲೇ ಶೇ.3ರಿಂದ ಶೇ.7ರಷ್ಟು ಮೀಸಲಾತಿಗೆ ನಾವು ಒಪ್ಪಿಗೆ ನೀಡಿದ್ದೇವೆ. ಅದನ್ನು ಕೇಂದ್ರ ಸರ್ಕಾರದಿಂದ ಅನುಮೋದನೆ ಮಾಡಿಸುವ ಕಾರ್ಯ ಸಂಸದರ ಬಳಿ ಇದೆ. ಅಧ್ಯಕ್ಷ ಬಸವನಗೌಡ ದದ್ದಲ್ ನೀಡಿರುವ ವಿವಿಧ ಬೇಡಿಕೆಗಳ ಮನವಿ ಪರಿಗಣಿಸಿ ಹಂತ ಹಂತವಾಗಿ ಪೂರೈಸುವುದಾಗಿ ಭರವಸೆ ನೀಡಿದರು.
ಜಾತ್ರಾ ಸಮಿತಿ ಅಧ್ಯಕ್ಷ ಬಸವನಗೌಡ ದದ್ದಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜದ ಉನ್ನತಿಗಾಗಿ ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದರು. ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ, ಪಂಚಮಸಾಲಿ ಪೀಠದ ವಚನಾನಂದ ಶ್ರೀ, ದಿವ್ಯ ಸಾನಿಧ್ಯ ವಹಿಸಿದ್ದರು.ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಶಾಸಕ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವ ಶಂಕರ್, ಸಂಸದ ಕುಮಾರನಾಯ್ಕ, ಹಾಲಿ ಮಾಜಿ ಶಾಸಕರು, ಸಚಿವರು ನಿಗಮ ಮಂಡಳಿ ಅಧ್ಯಕ್ಷರಾದ ಬಿ.ಪಿ. ಹರೀಶ್, ಬಸವಂತಪ್ಪ, ಕೃಷ್ಣ ನಾಯ್ಕ, ಡಿ.ಬಿ. ಶಾಂತನಗೌಡ, ದೇವೇಂದ್ರಪ್ಪ, ಶ್ರೀನಿವಾಸ್, ಟಿ.ವಿ. ಜಯಚಂದ್ರ, ಎನ್.ವೈ. ಗೋಪಾಲಕೃಷ್ಣ, ರುದ್ರಪ್ಪ ಲಮಾಣಿ, ರಘುಮೂರ್ತಿ ಯೋಗಿಶ್, ಮರಿಯೋಜಿ ರಾವ್ ಜಯದೇವ ನಾಯ್ಕ,. ರಘು ಮೂರ್ತಿ, ಎಚ್. ಆಂಜನೇಯ, ಸಮರ್ಥ ಮಲ್ಲಿಕಾರ್ಜುನ್, ಸಂಚಾಲಕ ಎಂ.ಜಿ. ಪಂಪಾಪತಿ, ರೇಣುಕಾಚಾರ್ಯ, ಮಾಜಿ ಸಂಸದ ಪ್ರತಾಪ್ ಸಿಂಹ, ಅರವಿಂದ ಬೆಲ್ಲದ್, ರುದ್ರಪ್ಪ ಲಂಬಾಣಿ, ಎಸ್.ಪಿ. ಬಸವರಾಜನ್, ಪ್ರಕಾಶ್ ಕೋಳಿವಾಡ, ಶಿವನಗೌಡ ನಾಯಕ, ವಿವಿಧ ಮಂಡಳಿಗಳ ಅಧ್ಯಕ್ಷರಾದ ಎಚ್.ಪಿ. ಮಂಜಪ್ಪ, ಬಂಗಾರು ಹನುಮಂತು, ಜಯದೇವ ನಾಯಕ್, ಎಸ್.ವಿ. ರಾಮಚಂದ್ರಪ್ಪ ಸೇರಿದಂತೆ ಅನೇಕ ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು, ಮುಖಂಡರು ಭಾಗವಹಿಸಿದ್ದರು.
- - --09ಎಚ್‌ಆರ್‌ಆರ್01.ಜೆಪಿಜಿ:
ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆದ ವಾಲ್ಮೀಕಿ ಜಾತ್ರೆ-2026ರ ಎರಡನೇ ದಿನವಾದ ಸೋಮವಾರ ನಡೆದ ಜನಜಾಗೃತಿ ಜಾತ್ರಾ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.