ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಹಂಗಾಮಿ ಸಹಾಯಕ ಎಂಜಿನಿಯರ್ (ವಿದ್ಯುತ್) ಹುದ್ದೆಗೆ ಅರ್ಜಿ ಆಹ್ವಾನಿಸಿರುವ ಅಧಿಸೂಚನೆ ಅನುಮಾನಾಸ್ಪದ ಹಾಗೂ ನಿಯಮ ಬಾಹಿರವಾಗಿದೆ. ಆದ್ದರಿಂದ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾವಣಗೆರೆ ವಿವಿಗೆ ಒತ್ತಾಯಿಸಿದೆ.
ತಾಲೂಕಿನ ತೋಳಹುಣಸೆಯ ಶಿವಗಂಗೋತ್ರಿಯ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಕುಲ ಸಚಿವ (ಆಡಳಿತ)ರಾದ ಎಸ್.ಬಿ. ಘಂಟಿ ಅವರಿಗೆ ಡಿಎಸ್‌ಎಸ್ ಮುಖಂಡರು, ಪದಾಧಿಕಾರಿಗಳ ನೇತೃತ್ವದಲ್ಲಿ ಮನವಿ ಅರ್ಪಿಸಲಾಯಿತು.
ಅರ್ಹತೆಗಳು, ಮಾನದಂಡಗಳು, ನಿಬಂಧನೆಗಳು ಸ್ಪಷ್ಟವಾಗಿಲ್ಲ
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ ಮಾತನಾಡಿ, ಫೆ.2ರಂದು ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಹಂಗಾಮಿ ಸಹಾಯಕ ಎಂಜಿನಿಯರ್ (ವಿದ್ಯುತ್) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅಧಿಸೂಚನೆಯಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತೆಗಳು, ಮಾನದಂಡಗಳು, ನಿಬಂಧನೆಗಳು ಸ್ಪಷ್ಟವಾಗಿಲ್ಲ. ಇಡೀ ಅಧಿಸೂಚನೆಯೇ ಗೊಂದಲಮಯವಾಗಿದೆ ಎಂದರು.
ಅಧಿಸೂಚನೆಯಲ್ಲಿ ಅಗತ್ಯ ಮಾನದಂಡಗಳನ್ನು ನಿಗದಿಪಡಿಸದೇ, ಯಾರದೋ ಹಿತ ಕಾಯಲು, ಯಾವುದೋ ಅವಸರದಿಂದಾಗಿ ಅರ್ಜಿಗಳನ್ನು ಆಹ್ವಾನಿಸಿರುವುದು ಮೇಲ್ನೋಟಕ್ಕೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಅಲ್ಲದೇ, ಅಧಿಸೂಚನೆಯೇ ನಿಯಮಬಾಹಿರವಾಗಿದೆ. ವಿಶೇಷವಾಗಿ ಅಧಿಸೂಚನೆಯಲ್ಲಿ ಶೈಕ್ಷಣಿಕ ಅರ್ಹತೆಗಳ ಸ್ಪಷ್ಟ ವ್ಯಾಖ್ಯಾನ, ಅನುಭವದ ಕನಿಷ್ಠ ಅವಧಿ, ಆಯ್ಕೆ ಪ್ರಕ್ರಿಯೆಯ ವಿಧಾನ, ಮೀಸಲಾತಿ ನಿಯಮಗಳ ಅನ್ವಯತೆ ಬಗ್ಗೆ ಅಧಿಸೂಚನೆಯಲ್ಲಿ ಯಾವುದೇ ಸ್ಪಷ್ಟ ಉಲ್ಲೇಖ ಇಲ್ಲ ಎಂದು ಆಕ್ಷೇಪಿಸಿದರು.
ಅಸ್ಪಷ್ಟ, ಗೊಂದಲಮಯವಾದ, ಯಾರದೋ ಅವಸರ, ಯಾರದೋ ಹಿತ ಕಾಯಲು ಹೊರಡಿಸಿದಂತಿರುವ ಅಸ್ಪಷ್ಟ ಅಧಿಸೂಚನೆಯಲ್ಲಿ ಯಾವುದನ್ನೂ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಇದರಿಂದ ಅರ್ಹ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಘೋರ ಅನ್ಯಾಯವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ದಾವಣಗೆರೆ ವಿವಿ ಸದರಿ ಹಂಗಾಮಿ ಸಹಾಯಕ ಎಂಜಿನಿಯರ್ (ವಿದ್ಯುತ್) ನೇಮಕಾತಿ ಪ್ರಕ್ರಿಯೆ ರದ್ದುಪಡಿಸಬೇಕು. ರಾಜ್ಯ ಸರ್ಕಾರ, ದಾವಣಗೆರೆ ವಿಶ್ವವಿದ್ಯಾನಿಲಯವು ನಿಯಮಾನುಸಾರ ಸೂಕ್ತ ಹಾಗೂ ಪಾರದರ್ಶಕ ಮಾನದಂಡಗಳನ್ನು ನಿಗದಿಪಡಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸಿ, ಸ್ಪಷ್ಟವಾಗಿ, ಪಾರದರ್ಶಕ, ನಿಯಮಾನುಸಾರ ಇರುವ ಅರ್ಜಿ ಆಹ್ವಾನಿಸುವ ಅಧಿಸೂಚನೆ ಹೊರಡಿಸಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ದಾವಣಗೆರೆ ವಿವಿ ಉದಾಸೀನ ಮಾಡಬಾರದು. ಡಿಎಸ್‌ಎಸ್ ಬೇಡಿಕೆಗೆ ಸ್ಪಂದಿಸದಿದ್ದರೆ ದಾವಣಗೆರೆ ವಿವಿ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕರಾದ ಟಿ.ರವಿಕುಮಾರ, ಎಂ.ರವಿಕುಮಾರ ಕೆಟಿಜೆ ನಗರ, ಮಂಜುನಾಥ ಹಳೇ ಚಿಕ್ಕನಹಳ್ಳಿ, ಜಿಲ್ಲಾ ಖಜಾಂಚಿ ಎಚ್.ಮಲ್ಲಿಕಾರ್ಜುನ ವಂದಾಲಿ ಇತರರು ಇದ್ದರು.
ಗೊಂದಲಗಳು ಹುಟ್ಟಿಕೊಳ್ಳುತ್ತಿರುವುದು ಇಂದು ನಿನ್ನೆಯದಲ್ಲ
ದಾವಣಗೆರೆ ವಿವಿ ನೇಮಕಾತಿ ವೇಳೆ ಇಂತಹ ಗೊಂದಲಗಳು ಹುಟ್ಟಿಕೊಳ್ಳುತ್ತಿರುವುದು ಇಂದು ನಿನ್ನೆಯದಲ್ಲ. ಪ್ರಾಧ್ಯಾಪಕರಾದಿಯಾಗಿ ಯಾವುದೇ ಹುದ್ದೆಗಳ ನೇಮಕಾತಿ ವೇಳೆ ದಾವಣಗೆರೆ ಖ್ಯಾತಿಗಿಂತಲೂ ಅಪಖ್ಯಾತಿಗೆ ಪಾತ್ರವಾಗುತ್ತಿದೆ. ಹಿಂದೆಲ್ಲಾ ನೇಮಕಾತಿ ವೇಳೆ ಏನೆಲ್ಲಾ ಆಗಿದೆಯೆಂಬುದು ಸಹ ಎಲ್ಲರಿಗೂ ಗೊತ್ತಿರುವ ಸಂಗತಿ. ಮುಂದೆ ಇಂತಹದ್ದಕ್ಕೆಲ್ಲಾ ಅವಕಾಶ ನೀಡದೇ, ಡಿಎಸ್‌ಎಸ್ ಬೇಡಿಕೆ ಗಂಭೀರವಾಗಿ ಪರಿಗಣಿಸಿ, ನ್ಯಾಯಸಮ್ಮತ, ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು.
- ರಾಘವೇಂದ್ರ ಡಿ. ಕಡೇಮನಿ, ಮುಖಂಡ, ಡಿಎಸ್‌ಎಸ್.