ಕೆಪಿಟಿಸಿಎಲ್‌ ಎಇ ಹುದ್ದೆಗಳಿಗೆ ತಾತ್ಕಾಲಿಕ ನೇಮಕ ಪತ್ರ

| Published : Feb 08 2024, 01:33 AM IST

ಸಾರಾಂಶ

‘ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ’ದಲ್ಲಿನ (ಕೆಪಿಟಿಸಿಎಲ್) 404 ಸಹಾಯಕ ಎಂಜಿನಿಯರ್‌ ಹುದ್ದೆಗಳ (ಎಇ) ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ಪತ್ರ ವಿತರಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ’ದಲ್ಲಿನ (ಕೆಪಿಟಿಸಿಎಲ್) 404 ಸಹಾಯಕ ಎಂಜಿನಿಯರ್‌ ಹುದ್ದೆಗಳ (ಎಇ) ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ಪತ್ರ ವಿತರಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.

ನೇಮಕಾತಿ ಸಂಬಂಧ ಕೆಪಿಟಿಸಿಎಲ್ 2023ರ ಫೆ.4ರಂದು ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠದ ತೀರ್ಪು ಪ್ರಶ್ನಿಸಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ರಾಜ್ಯದ ವಿವಿಧ ಭಾಗಗಳ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

2023ರ ಜ.3ರಂದು ಪ್ರಕಟಿಸಿದ 404 (313 ಮೂಲ ವೃಂದ, 91 ಕಲ್ಯಾಣ ಕರ್ನಾಟಕ ವೃಂದ) ಅಭ್ಯರ್ಥಿಗಳನ್ನು ಒಳಗೊಂಡ ತಾತ್ಕಾಲಿಕ ನೇಮಕ ಪಟ್ಟಿಯಲ್ಲಿ ಅರ್ಹರಿಗೆ ತಾತ್ಕಾಲಿಕ ನೇಮಕಾತಿ ಆದೇಶ ವಿತರಿಸಬೇಕು ಎಂದು ಕೆಪಿಟಿಸಿಎಲ್‌ಗೆ ನಿರ್ದೇಶಿಸಿರುವ ವಿಭಾಗೀಯ ಪೀಠ, ಈ ಪ್ರಕ್ರಿಯೆಯು ಮೇಲ್ಮನವಿಗೆ ಸಂಬಂಧಿಸಿದ ತನ್ನ ಅಂತಿಮ ತೀರ್ಪಿಗೆ ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿ ವಿಚಾರಣೆಯನ್ನು ಮಾ.13ಕ್ಕೆ ಮುಂದೂಡಿದೆ.

ತಾತ್ಕಾಲಿಕ ನೇಮಕಾತಿ ಆದೇಶದಲ್ಲಿ, ‘ಈ ಆದೇಶ ಪತ್ರ ಹೈಕೋರ್ಟ್‌ನ ಅಂತಿಮ ತೀರ್ಪಿಗೆ ಒಳಪಡುತ್ತದೆ’ ಎಂದು ನಮೂದಿಸಬೇಕು. ಒಂದೊಮ್ಮೆ ಮೇಲ್ಮನವಿ ಪುರಸ್ಕೃತಗೊಂಡು ಮೇಲ್ಮನವಿದಾರರು ಆಯ್ಕೆಗೊಂಡರೆ ಆ ವೇಳೆ ಸೇವಾ ಹಿರಿತನ ಮತ್ತು ರೋಸ್ಟರ್ ಪಾಲಿಸಬೇಕು ಎಂದು ಕೆಪಿಟಿಸಿಎಲ್‌ಗೆ ನಿರ್ದೇಶಿಸಿದ ನ್ಯಾಯಪೀಠ ಮೇಲ್ಮನವಿಯ ವಿಚಾರಣೆಯನ್ನು ಮಾ.13ಕ್ಕೆ ಮುಂದೂಡಿದೆ.

ಕೆಪಿಟಿಸಿಎಲ್‌ನಲ್ಲಿ ಖಾಲಿಯಿರುವ ಸಹಾಯಕ ಎಂಜಿನಿಯರ್‌ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆ ನಡೆಸಿ ಪ್ರಕಟಿಸಿದ ಕೀ ಉತ್ತರಕ್ಕೆ ಅನೇಕ ಅಭ್ಯರ್ಥಿಗಳು ‘ಕೆಲವು ಕೀ ಉತ್ತರಗಳು ತಪ್ಪಾಗಿವೆ’ ಎಂದು ಆಕ್ಷೇಪಿಸಿದ್ದರು. ಕೆಇಎ ರಚಿಸಿದ್ದ ತಜ್ಞರ ಸಮಿತಿ ಈ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಪರಿಷ್ಕೃತ ಅಂತಿಮ ಕೀ ಉತ್ತರ ಪ್ರಕಟಿಸಿತ್ತು.ಈ ಆಧಾರದಲ್ಲಿ 2023ರ ಜ.3ರಂದು ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಅರ್ಹತಾ ಪ್ರಕಟಿಸಲಾಗಿತ್ತು. ಅದರಲ್ಲಿ 501 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡು, 404 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಈ ಮಧ್ಯೆ ಪರಿಷ್ಕೃತ ಕೀ ಉತ್ತರ ಪಟ್ಟಿಗೆ 900ಕ್ಕೂ ಹೆಚ್ಚು ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಅದನ್ನು ಮತ್ತೆ ತಜ್ಞರ ಸಮಿತಿಯು ಪರಿಶೀಲಿಸಿತು. ಸಮಿತಿ ಶಿಫಾರಸು ಅನ್ವಯ ಕೆಎಇ, ಹೆಚ್ಚುವರಿ ಅಂಕಗಳನ್ನು ನೀಡಿ 2023ರ ಫೆ.4ರಂದು ಪರಿಷ್ಕೃತ ಪಟ್ಟಿ ಪ್ರಕಟಿಸಿತ್ತು. ಇದರಲ್ಲಿ 135 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದರಿಂದ ಒಟ್ಟು ತಾತ್ಕಾಲಿಕ ಅರ್ಹ ಅಭ್ಯರ್ಥಿಗಳ ಸಂಖ್ಯೆ 636 ಆಯಿತು. ಎರಡನೇ ಬಾರಿ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದ್ದನ್ನು ಆಕ್ಷೇಪಿಸಿ ಮೊದಲ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಎರಡನೇ ಪರಿಷ್ಕರಣೆಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು. ಇದರಿಂದ ಅರ್ಹತಾ ಪಟ್ಟಿಯಿಂದ ವಂಚಿತರಾದ 135 ಅಭ್ಯರ್ಥಿಗಳ ಪೈಕಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ.