ಕನ್ನಡಪ್ರಭ ವಾರ್ತೆ ರಾಮದುರ್ಗ ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ಮತ್ತು ಸಾಲಾಪೂರ ಬಸವೇಶ್ವರ ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಅವುಗಳ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಗುರ್ಲಾಪುರ ಕಬ್ಬಿನ ಹೋರಾಟದಂತೆ ಸಾಲಹಳ್ಳಿಯ ರಾಜ್ಯ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ರಾಮದುರ್ಗ ತಾಲೂಕಿನ ವೀರಭದ್ರೇಶ್ವರ ಮತ್ತು ಸಾಲಾಪೂರ ಬಸವೇಶ್ವರ ಏತ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿದ್ದು, ಅವುಗಳ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಗುರ್ಲಾಪುರ ಕಬ್ಬಿನ ಹೋರಾಟದಂತೆ ಸಾಲಹಳ್ಳಿಯ ರಾಜ್ಯ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದರು.ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ವೀರಭದ್ರೇಶ್ವರ ಏತ ನೀರಾವರಿ, ಸಾಲಾಪೂರ ಬಸವೇಶ್ವರ ಏತ ನೀರಾವರಿ ಯೋಜನೆಗಳು ಪೂರ್ಣಗೊಳ್ಳದೆ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಇದ್ದ ಮತ್ತು ಈಗಿನ ಶಾಸಕರ ಮತ್ತು ಅಧಿಕಾರಿಗಳ ಇಚ್ಚಾಸಕ್ತಿ ಕೊರತೆಯಿಂದ ಯೋಜನೆಗಳು ಆಮೆಗತಿಯಲ್ಲಿ ನಡೆದಿವೆ. ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳನ್ನು ಎಚ್ಚರಿಸಲು ಹೋರಾಟ ಅನಿವಾರ್ಯವಾಗಿದೆ. ಸಾಲಹಳ್ಳಿಯಲ್ಲಿ ರಾಜ್ಯ ಹೆದ್ದಾರಿಯನ್ನು ಗುರ್ಲಾಪೂರ ಮಾದರಿಯಲ್ಲಿ ತಡೆ ನಡೆಸುವ ಜೊತೆಗೆ ಶಾಸಕರ ಮನೆಗೆ ಮುತ್ತಿಗೆ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರ ಮತ್ತು ಶಾಸಕರು ಹೋರಾಟಕ್ಕೆ ಅವಕಾಶ ನೀಡದೆ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕೆಂದರು.ರಾಮದುರ್ಗ ತಾಲೂಕಿನಲ್ಲಿ ರೈತ ಸಂಘಟನೆ ಪದಾಧಿಕಾರಿಗಳ ನೇಮಕ ವಿಳಂಬವಾದ ಹಿನ್ನೆಲೆಯಲ್ಲಿ ಹೋರಾಟಗಳು ನಿಂತು ಹೋಗಿದ್ದವು. ಪದಾಧಿಕಾರಿಗಳ ಆಯ್ಕೆ ಪೂರ್ಣಗೊಂಡಿದೆ. ಮುಂದಿನ ಹದಿನೈದು ದಿನಗಳಲ್ಲಿ ಎಲ್ಲ ಹಳ್ಳಿಗಳಲ್ಲಿ ರೈತರನ್ನು ಸಂಘಟನೆ ಮಾಡಲಾಗುವುದು. ಇದಾದ ನಂತರ ಶಾಸಕರನ್ನು ಭೇಟಿ ಮಾಡಿ ಯೋಜನೆಗಳನ್ನು ಪೂರ್ಣಗೊಳಿಸಲು ಇನ್ನೊಮ್ಮೆ ಮನವಿ ಸಲ್ಲಿಸಲಾಗುವುದು. ಅಷ್ಟಾಗಿಯೂ 15-20 ದಿನಗಳಲ್ಲಿ ನೀರಾವರಿ ಯೋಜನೆಗಳಿಗೆ ಚಾಲನೆ ಸಿಗದಿದ್ದರೆ ಹೋರಾಟದ ಮೂಲಕ ಬಿಸಿ ಮುಟ್ಟಿಸಲಾಗುವುದು ಎಂದು ತಿಳಿಸಿದರು.ರಾಮದುರ್ಗ ತಾಲೂಕಿನ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆಯಿಂದ ಕೊನೆಯ ರೈತರಿಗೆ ಇನ್ನು ನೀರು ತಲುಪುತ್ತಿಲ್ಲ ಮತ್ತು ಸತ್ತಗೇರಿ ಏತ ನೀರಾವರಿ ಯೋಜನೆಗೆ ಸರ್ಕಾರ ಮಂಜೂರಾತಿ ಸೇರಿದಂತೆ ಎಲ್ಲ ಏತ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಮಲಪ್ರಭಾ ನದಿ ಪಕ್ಕದ ನಾಲ್ಕು ತಾಲೂಕುಗಳು, ನೀರಾವರಿಗೆ ಬೇಡಿಕೆ ಇಟ್ಟಿರುವ ಉಳಿದ ತಾಲೂಕಿನ ರೈತರನ್ನು ಸಾಲಹಳ್ಳಿಯಲ್ಲಿ ಸೇರಿಸಲಾಗುವುದು. ರಸ್ತೆ ತಡೆ ನಡೆಸಿ ನೀರಾವರಿ ಖಾತೆ ಹೊಂದಿರುವ ಉಪಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಮುಷ್ಕರದ ಸ್ಥಳಕ್ಕೆ ಆಗಮಿಸಿ ಯೋಜನೆ ಆರಂಭಿಸುವ ತನಕ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಜಗದೀಶ ದೇವರಡ್ಡಿ, ಜಿಲ್ಲಾ ಉಪಾಧ್ಯಕ್ಷ ಶಿವಾನಂದ ದೊಡವಾಡ, ಸೇನೆಯ ನೂತನ ಪದಾಧಿಕಾರಿಗಳು ಹಾಜರಿದ್ದರು.-----ಕೋಟ್‌ಮುಖ್ಯಮಂತ್ರಿಗಳ ಹಿಂದೆಯೇ ಕಾಣಿಸಿಕೊಳ್ಳುವ ಶಾಸಕ ಅಶೋಕ ಪಟ್ಟಣ ಅವರಿಗೆ ಯೋಜನೆಯ ಅನುಷ್ಠಾನಕ್ಕೆ ತೊಂದರೆ ಏನಿಲ್ಲ. ಮುಖ್ಯಮಂತ್ರಿಗಳಿಗೆ ಹೇಳಿ ತಮ್ಮ ಕ್ಷೇತ್ರದ ನೀರಾವರಿಯನ್ನು ಪೂರ್ಣಗೊಳಿಸಬಹುದಿತ್ತು. ಆದರೆ, ಶಾಸಕ ಅಶೋಕ ಪಟ್ಟಣ ಅವರು ಸ್ವತಃ ಪ್ರಯತ್ನ ಮಾಡಿ ಮಂಜೂರ ಮಾಡಿಸಿದ ಯೋಜನೆ ಪೂರ್ಣಗೊಳಿಸಲು ಏಕೆ ಪ್ರಯತ್ನಿಸುತ್ತಿಲ್ಲ.ಚೂನಪ್ಪ ಪೂಜೇರಿ, ರೈತ ಸಂಘದ ರಾಜ್ಯಾಧ್ಯಕ್ಷ