ಸಂದೀಪ ನಗರದ ನಿವಾಸಿಗಳಿಗೆ ಜಾಗ ಸಕ್ರಮಗೊಳಿಸಿ

| Published : Sep 06 2025, 01:01 AM IST

ಸಾರಾಂಶ

ಕುಷ್ಟಗಿಯ ಸಂದೀಪ ನಗರದ ನಿವಾಸಿಗಳು ಅಲ್ಲಿರುವವವರು ಕೂಲಿ ಮಾಡಿ ಮಕ್ಕಳೊಂದಿಗೆ ಕಷ್ಟಕರವಾದ ಜೀವನ ನಡೆಸುತ್ತಿದ್ದಾರೆ. 25 ವರ್ಷಗಳಿಂದಲೂ ನಿವೇಶನ, ಸೂರು ರಹಿತ ಕುಟುಂಬಗಳಿಗೆ ನಿಗದಿಯಾಗಿದ್ದ ಆಶ್ರಯ ಬಡಾವಣೆಯಲ್ಲಿ ಜೋಪಡಿ, ತಗಡಿನ ಶೆಡ್‌ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ.

ಕುಷ್ಟಗಿ:

ಪಟ್ಟಣದ ಸಂದೀಪ ನಗರದ ನಿವಾಸಿಗಳು ವಾಸಿಸುವ ಜಾಗವನ್ನು ಸಕ್ರಮ ಮಾಡುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿ ಸ್ಥಳೀಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಸಂತೋಷ ತೋಟದ ಮಾತನಾಡಿ, ಪಟ್ಟಣದ 8ನೇ ವಾರ್ಡ್ ಸಂದೀಪ ನಗರದಲ್ಲಿ ನೂರಾರು ಕುಟುಂಬಗಳು 25 ವರ್ಷಗಳಿಂದ ವಾಸಿಸುತ್ತಿದ್ದು ಈ ಜಾಗವನ್ನು ಸಕ್ರಮಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಬೇಕು ಎಂದರು.

ಅಲ್ಲಿರುವವವರು ಕೂಲಿ ಮಾಡಿ ಮಕ್ಕಳೊಂದಿಗೆ ಕಷ್ಟಕರವಾದ ಜೀವನ ನಡೆಸುತ್ತಿದ್ದಾರೆ. 25 ವರ್ಷಗಳಿಂದಲೂ ನಿವೇಶನ, ಸೂರು ರಹಿತ ಕುಟುಂಬಗಳಿಗೆ ನಿಗದಿಯಾಗಿದ್ದ ಆಶ್ರಯ ಬಡಾವಣೆಯಲ್ಲಿ ಜೋಪಡಿ, ತಗಡಿನ ಶೆಡ್‌ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಇವರ ಆಧಾರ್‌ ಕಾರ್ಡ್, ವೋಟರ್ ಐಡಿ ಸೇರಿದಂತೆ ಸೌಲಭ್ಯ ಪಡೆದುಕೊಂಡಿದ್ದಾರೆ. ಆದರೆ, ಪುರಸಭೆ ಇದ್ದ ಜಾಗವನ್ನು ಇವರ ಹೆಸರಿನಲ್ಲಿ ಡಿಮ್ಯಾಂಡ್ ರೆಜಿಸ್ಟರ್‌ನಲ್ಲಿ ನಮೂದಿಸಿ ಉತಾರ ಕೊಡುತ್ತಿಲ್ಲ. ಈ ಕುರಿತು ಹಲವು ಸಲ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿಗೆ ಏಕಾಏಕಿ ಪುರಸಭೆ ಸಿಬ್ಬಂದಿ ಆಗಮಿಸಿ ಜೋಪಡಿ ತೆರವುಗೊಳಿಸಲು ತಾಕೀತು ಮಾಡಿ ಹೋಗಿದ್ದಾರೆ. ಇಲ್ಲವಾದರೆ ಜೆಸಿಬಿಯಿಂದ ತೆರವುಗೊಳಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಆದರಿಂದ ಪುರಸಭೆ ಮುಖ್ಯಾಧಿಕಾರಿಗೆ ಸೂಕ್ತ ನಿರ್ದೇಶನ ನೀಡಿ ಜಾಗವನ್ನು ಸಕ್ರಮಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದರು.

ಮನವಿ ಸ್ವೀಕರಿಸಿದ ಶಾಸಕ ದೊಡ್ಡನಗೌಡ ಪಾಟೀಲ, ಕೂಡಲೇ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಎನ್‌.ಎಸ್. ಸುವರ್ಣಮ್ಮ, ರೇಖಾ, ಎಸ್. ಉಮಾದೇವಿ, ಬೀಬಿಜಾನ, ಮಹಾಂತೇಶ ಅಮರಾವತಿ, ಸಿದ್ದಪ್ಪ ಕಲಾಲಬಂಡಿ, ಯಮನೂರಪ್ಪ, ಶಂಕರ್ ಟಿ, ಮರಿಯಪ್ಪ ಹಕ್ಕಲ್, ಯಮನೂರಪ್ಪ, ಮಹೆಬೂಬುಸಾಬ್‌ ಇದ್ದರು.