ಸಾರಾಂಶ
ಐರನ್ ಮ್ಯಾನ್ ಅನ್ನುವುದು ಕಠಿಣ ಸ್ಪರ್ಧೆ. 3.8 ಕಿ.ಮೀ ಸಮುದ್ರದಲ್ಲಿ ಈಜು, 180 ಕಿ.ಮೀ ಸೈಕ್ಲಿಂಗ್ ಹಾಗೂ 42 ಕಿ.ಮೀ ಮ್ಯಾರಥಾನ್ ಮಾಡಬೇಕಿರುತ್ತದೆ. ಆ.27ರಂದು ಡೆನ್ಮಾರ್ಕ್‌ನ ಕೋಪೆನ್‌ಹೆಗನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಯಶಸ್ವಿಯಾಗಿ ಐರನ್ ಮ್ಯಾನ್ ಅನ್ನಿಸಿಕೊಂಡಿದ್ದಾರೆ ಸಂದೀಪ್ ಪಾಟೀಲ್.
- ಗಿರೀಶ್ ಮಾದೇನಹಳ್ಳಿ
ಕನ್ನಡ ಸುಪ್ರಸಿದ್ಧ ಕವಿ ಗೋಪಾಲಕೃಷ್ಣ ಅಡಿಗರ ಅವರು ಹೇಳಿದ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎನ್ನುವ ಮಾತಿಗೆ ಅನ್ವರ್ಥವಾಗಿರುವುದು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ)ಯ ಐಜಿಪಿ ಹಾಗೂ ಕನ್ನಡಿಗ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರಿಗೆ.
ಸದಾ ಹೊಸತನದೆಡೆ ತುಡಿಯುವ ಅವರು, ಎದುರಾಗುವ ಅಡೆತಡೆಗಳನ್ನು ನೀರು ಕುಡಿದಷ್ಟೇ ಸಲೀಸಾಗಿ ನಿಭಾಯಿಸುವ ಕುಶಾಗ್ರಮತಿ ಹಾಗೂ ಛಲಗಾರ. ಈ ಛಲವೇ ವಿದೇಶದ ನೆಲದಲ್ಲಿ ‘ಐರನ್ ಮ್ಯಾನ್’ ತ್ರಿವಳಿ ಸವಾಲು ಪೂರೈಸಿದ ಕನ್ನಡನಾಡಿನ ಪ್ರಥಮ ಐಪಿಎಸ್ ಅಧಿಕಾರಿ ಎಂಬ ಚಾರಿತ್ರಿಕ ದಾಖಲೆ ಅವರ ಹೆಸರಿನಲ್ಲಿ ಅಚ್ಚೊತ್ತಿದೆ. 47 ವರ್ಷ ವಯಸ್ಸಿನ ಐಜಿಪಿ ಸಾಧನೆಗೆ ಚಿರ ಯುವಕರು ಥಂಡಾ ಹೊಡೆದಿದ್ದಾರೆ.
ಸಂದೀಪ್ ಪಾಟೀಲ್, 2004ನೇ ಸಾಲಿನ ಐಪಿಎಸ್ ಅಧಿಕಾರಿ. ಹುಟ್ಟೂರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಮಲನಗರ. ಕಾಶಿನಾಥರಾವ್ ಪಾಟೀಲ್ ಹಾಗೂ ವಿಜಯಾ ಪಾಟೀಲ್ ದಂಪತಿಯ ಪುತ್ರ. ವಕೀಲರಾಗಿರುವ ಪೂನಮ್ ಪಾಟೀಲ್ ಅವರ ಪತಿ.
ಅಪರಾಧ ಪ್ರಕರಣಗಳ ಪತ್ತೇದಾರಿಕೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯಲ್ಲಿ ಸಿದ್ಧಹಸ್ತರು. ಬೆಳಗಾವಿ, ಮಂಗಳೂರು, ದಾವಣಗೆರೆ ಹಾಗೂ ಬೆಂಗಳೂರು ಹೀಗೆ ಕೆಲಸ ಮಾಡಿದ್ದ ಸ್ಥಳಗಳಲ್ಲಿ ಮೈಲಿಗಲ್ಲು ನೆಟ್ಟಿದ್ದಾರೆ. ಬೆಂಗಳೂರಿನ ಸಿಸಿಬಿ ಮುಖ್ಯಸ್ಥರಾಗಿದ್ದಾಗ ಕನ್ನಡ ಚಲನಚಿತ್ರ ರಂಗದ ಮಾದಕ ವಸ್ತು (ಡ್ರಗ್ಸ್) ಮಾರಾಟ ಜಾಲವನ್ನು ಬಯಲಿಗೆಳೆದವರು. ಇದೊಂದು ಉದಾಹರಣೆ ಅಷ್ಟೇ. ಬಿಡುವಿಲ್ಲದ ಕೆಲಸದ ನಡುವೆ ಫಿಟ್ನೆಸ್ ಮರೆಯದ ಸಂದೀಪ್ ಪಾಟೀಲ್ ಅವರು, ನುರಿತ ಈಜುಗಾರನಲ್ಲದಿದ್ದರೂ ಸಮುದ್ರ ಅಲೆಗಳ ಹಿಮ್ಮೆಟ್ಟಿಸಿ ಐರನ್ ಮ್ಯಾನ್ ಆಗಿದ್ದು ವಿಸ್ಮಯ.
14 ಗಂಟೆಯಲ್ಲಿ ಸಾಧನೆ ಗುರಿ
ಇತ್ತೀಚಿಗೆ ಡೆನ್ಮಾರ್ಕ್ ದೇಶದ ಕೋಪನ್‌ಹೇಗನ್ ನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಐರನ್ ಮ್ಯಾನ್ ಸ್ಪರ್ಧೆ ನಡೆಯಿತು. ಈ ಐರನ್‌ಮ್ಯಾನ್ ಟ್ರಯಥ್ಲಾನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಸಂದೀಪ್ ಪಾಟೀಲ್ ವಿಜಯ ಪತಾಕೆ ಹಾರಿಸಿದ್ದಾರೆ. ಈ ಸ್ಫರ್ಧೆ 3.8 ಕಿ.ಮೀ ಸಮುದ್ರದಲ್ಲಿ ಈಜು, 180 ಕಿ.ಮೀ ಸೈಕ್ಲಿಂಗ್ ಹಾಗೂ 42 ಕಿ.ಮೀ ಮ್ಯಾರಥಾನ್ ಒಳಗೊಂಡಿತ್ತು. ಈ ಮೂರು ಸವಾಲುಗಳನ್ನು 14 ಗಂಟೆ 45 ನಿಮಿಷಗಳಲ್ಲಿ ಪೂರೈಸಿ ದಾಖಲೆ ನಿರ್ಮಿಸಿದ್ದಾರೆ. ಅದಕ್ಕೂ ಮೊದಲೆ ಪೋಲೆಂಡ್ ಮತ್ತು ಟರ್ಕಿಯಲ್ಲಿ ಮಿನಿ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸಿದ್ದರು.
ಹೇಗೆ ಪೂರ್ವ ಸಿದ್ಧತೆ
‘ನನಗೆ ಕೆಲ ವರ್ಷಗಳ ಹಿಂದೆ ಪತ್ರಿಕೆಗಳಲ್ಲಿ ಐರನ್ ಮ್ಯಾನ್ ಸ್ಪರ್ಧೆ ಕುರಿತು ಓದಿದ್ದು ಬಿಟ್ಟರೆ ಮುಂದೊಂದು ದಿನ ನಾನು ಆ ಸವಾಲನ್ನು ಗೆಲ್ಲುವೆ ಎಂಬ ಊಹೆ ಸಹ ಇರಲಿಲ್ಲ. ಆ ಧೈರ್ಯ ಹೇಗೆ ಬಂತು ಎಂದು ಈಗಲೂ ಆಶ್ಚರ್ಯವಾಗುತ್ತದೆ. ದೇಹ ಸ್ಥಿರತೆಗೆ ಜಿಮ್‌ನಲ್ಲಿ ಕಸರತ್ತು ಹಾಗೂ ಕೆಲವು ಬಾರಿ ಚುಟುಕು ಓಟದಲ್ಲಿ ಪಾಲ್ಗೊಂಡಿದ್ದೆ’ ಎನ್ನುತ್ತಾರೆ ಸಂದೀಪ್ ಪಾಟೀಲ್.
ಐರನ್ ಮ್ಯಾನ್ ಎನ್ನುವುದು ವಿಭಿನ್ನವಾದ ಸ್ಪರ್ಧೆ. ಇದರಲ್ಲಿ ಈಜು, ಸೈಕ್ಲಿಂಗ್ ಹಾಗೂ ಮ್ಯಾರಥಾನ್‌ನಲ್ಲಿ ಗೆಲ್ಲಬೇಕು. ಮೂರು ಕೂಡ ಕಠಿಣ ಕ್ರೀಡೆಯೇ. ಈ ಸ್ಪರ್ಧೆ ಕೇವಲ ಶಿಸ್ತು ಮತ್ತು ಧೈರ್ಯ ಮಾತ್ರವಲ್ಲ ಫಿಟ್ನೆಸ್ ಹಾಗೂ ತರಬೇತಿ ವಿಚಾರದಲ್ಲೇ ಹೊಸತನ ಬಯಸುತ್ತದೆ.
‘ನನಗೆ ಈಜು ಬಹುದೊಡ್ಡ ಸವಾಲಾಯಿತು. ಐಪಿಎಸ್ ಆಯ್ಕೆಯಾದ ಬಳಿಕ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಕಡ್ಡಾಯವಾಗಿದ್ದ ಕಾರಣಕ್ಕೆ ಈಜು ಕಲಿತಿದ್ದು ಬಿಟ್ಟರೆ ವೃತ್ತಿಪರ ಈಜುಪಟು ಆಗಿರಲಿಲ್ಲ. ನಾನು ಸಾಮಾನ್ಯವಾಗಿ 300-400 ಮೀಟರ್ ಈಜುತ್ತಿದ್ದೆ. ಆದರೆ ಈ ಸ್ಪರ್ಧೆಗೆ ಸಮುದ್ರದಲ್ಲಿ 4 ಕಿ.ಮೀ ಈಜಿದ್ದೇನೆ. ಸಮುದ್ರದ ಅಲೆಗಳ ಜತೆ ಸೆಣಸಾಡಲು ಈಜು ಕಲಿಕೆಗೆ ಸಾಕಷ್ಟು ಸಮಯ ವಿನಿಯೋಗಿಸಿದೆ. ಈ ಹಂತದಲ್ಲಿ ಬೆಳಿಗ್ಗೆ ತರಬೇತಿ ಮುಗಿಸಿ 10 ಗಂಟೆ ಹೊತ್ತಿಗೆ ಆಫೀಸಿಗೆ ಹೋಗಿರುತ್ತಿದ್ದೆ. ಪೆರೇಡ್ ಇದ್ದಾಗ ಬೆಳಗಿನ ಜಾವ 4 ಗಂಟೆಗೆ ತರಬೇತಿ ಶುರು ಮಾಡುತ್ತಿದ್ದೆ’ ಎಂದು ಪಾಟೀಲ್ ಹೇಳಿದರು.
ಮುಂಜಾನೆ ಎದ್ದು ಸೈಕ್ಲಿಂಗ್
‘ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಕೆರೆಯಲ್ಲಿ ಗಂಟೆಗಟ್ಲೆ ಈಜಿ ಈ ಮಟ್ಟಕ್ಕೆ ಬಂದೆ. ಕೆಲವೊಮ್ಮೆ 4 ಗಂಟೆಗೆ ಎದ್ದು ಹೋಗಿದ್ದೂ ಇದೆ. ಒಮ್ಮೊಮ್ಮೆ ಇದು ಬೇಕಾ ಅನ್ನಿಸುತ್ತಿತ್ತು. ಆದರೆ ಹಿಡಿದ ಕೆಲಸ ಬಿಡಬಾರದು ಎಂಬ ದೃಢಮನಸ್ಸಿನಿಂದ ಮುಂದುವರೆದೆ. ಈಜುವಿಕೆ ಬಳಿಕ ಸೈಕ್ಲಿಂಗ್ ಮತ್ತೊಂದು ಚಾಲೆಂಜ್ ಆಗಿತ್ತು. ಕೇವಲ 7 ತಾಸುಗಳಲ್ಲಿ 180 ಕಿ.ಮೀ ಸೈಕ್ಲಿಂಗ್ ಮಾಡಬೇಕಿತ್ತು. ಪ್ರತಿ ಭಾನುವಾರ ಮುಂಜಾನೆ ಇದಕ್ಕಾಗಿ ಮೀಸಲಿಟ್ಟಿದ್ದೆ. ಗನ್ ಮ್ಯಾನ್ ಇಲ್ಲದೆ, ಕಾರು ಚಾಲಕ ಇಲ್ಲದೆ ಸೂರ್ಯೋದಯಕ್ಕೂ ಮುನ್ನವೇ ನಾನು ರಸ್ತೆಗಿಳಿಯುತ್ತದೆ. ಜನರಿಗೂ ಆ ರಸ್ತೆಗಳಿಗೂ ನಾನು ಅಧಿಕಾರಿ ಆಗಿರಲಿಲ್ಲ. ಕೇವಲ ಸೈಕ್ಲಿಸ್ಟ್ ಅಷ್ಟೇ. ವಾರಕ್ಕೊಮ್ಮೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಸೈಕ್ಲಿಂಗ್ ಮಾಡುತ್ತಿದ್ದೆ. ಅಪರಿಚಿತತೆ ನಮಗೆ ತಪ್ಪುಗಳ ತಿದ್ದಿಕೊಳ್ಳುವ ಪಾಠ ಹೇಳುತ್ತದೆ. ಆರಂಭದಲ್ಲಿ ಒಂದೆರಡು ಗಂಟೆ ಸೈಕಲ್ ತುಳಿದು ಅಭ್ಯಾಸ ಶುರುವಾಯಿತು. ಆ ಮೇಲೆ ಐದಾರು ಗಂಟೆಗಳವರೆಗೆ ಸೈಕಲ್ ಯಾನ ನಡೆಯಿತು. ಹಾಗಂತ ಸೈಕ್ಲಿಂಗ್ ತರಬೇತಿ ಸುಲಭವಾಗಿ ನಡೆಯಲಿಲ್ಲ. ಕೆಲವು ಬಾರಿ ಕಷ್ಟಗಳು ಎದುರಾದವು. ಎರಡು ಸಲ ಬೈಕ್‌ನವರು ನನ್ನ ಸೈಕಲ್‌ಗೆ ಗುದ್ದಿಸಿದ್ದರು. ಅದೃಷ್ಟವಶಾತ್ ದೊಡ್ಡ ಆಘಾತ ಸಂಭವಿಸಲಿಲ್ಲ. ಈ ರೀತಿಯ ಅಡೆತಡೆಗಳು ನನ್ನನ್ನು ಮತ್ತಷ್ಟು ಗುರಿ ಮುಟ್ಟಲು ಕಠಿಣಗೊಳಿಸಿದವು’ ಎನ್ನುತ್ತಾರೆ ಅವರು.
ಈಜು ಹಾಗೂ ಸೈಕ್ಲಿಂಗ್ ಮುಗಿದ ನಂತರ ಓಡುವುದು. ಅದು ತಿಳಿದಷ್ಟು ಸಲೀಸಲ್ಲ. ಮೂರು ಹಂತಗಳಲ್ಲಿ ಒಂದರ ಹಿಂದೆ ಒಂದು ನಡೆಯುತ್ತವೆ. ಸಮಯ ಇರಲ್ಲ. ಅಲ್ಪಾವಧಿಯಲ್ಲೇ ಕಾಲುಗಳನ್ನು ಓಡಲು ಅಣಿಗೊಳಿಸಬೇಕು. ಸುದೀರ್ಘವಾಗಿ ಈಜು ಹಾಗೂ ಸೈಕಲ್ ತುಳಿದು ಕಾಲುಗಳು ಮರಗಟ್ಟಿರುತ್ತವೆ. ಅವುಗಳನ್ನು ಓಡುವಂತೆ ಮಾಡೋದು ಭಾರಿ ಕಸರತ್ತು.
ಮೂರು ಸೂತ್ರಗಳು ಮರೆಯಬಾರದು
‘ಬಲ (strength), ಸ್ಥಿರತೆ (conditioning) ಹಾಗೂ ಆಹಾರ ಪೋಷಣೆ (nutrition) ಇವು ಪ್ರಮುಖ ಶಿಸ್ತುಗಳು. ಕಠಿಣ ತರಬೇತಿ, ಆಹಾರದಲ್ಲಿ ಕಟ್ಟುನಿಟ್ಟಿನ ನಿಯಮ ಪಾಲಿಸಿದೆ. ವಾರಕ್ಕೆ ಎರಡ್ಮೂರು ಬಾರಿ ಜಿಮ್‌ನಲ್ಲಿ ದೇಹ ದಂಡನೆ ಬಿಡಲಿಲ್ಲ. ಸವಾಲು ಸ್ವೀಕರಿಸಲು ಭುಜ ಹಾಗೂ ಕಾಲು ಸೇರಿ ಇಡೀ ದೇಹ ಹುರಿಗೊಂಡಿತು. ಐರನ್ ಮ್ಯಾನ್ ಸ್ಪರ್ಧಾಳು 13 ತಾಸುಗಳು ಸಾಮಾನ್ಯ ಆಹಾರ ಸ್ವೀಕರಿಸುವಂತಿಲ್ಲ. ದೇಹವು ಪ್ರತಿ ಗಂಟೆಗೆ ಕನಿಷ್ಠ 60-70 ಗ್ರಾಂ ಕಾರ್ಬೋಹೈಡ್ರೇಟ್ಸ್ ಬಯಸುತ್ತದೆ. ತರಬೇತಿ ಅವಧಿಯಲ್ಲಿ ಆಹಾರ ಇತಿಮಿತಿಗೆ ದೇಹವನ್ನು ಒಗ್ಗಿಸುವುದು ವಿಭಿನ್ನ ಸವಾಲಾಗಿತ್ತು. ಐರನ್ ಮ್ಯಾನ್‌ಗೆ ಈ ಮೂರು ಸೂತ್ರಗಳನ್ನು ವ್ರತದಂತೆ ಪಾಲಿಸಲೇ ಬೇಕಾಗುತ್ತದೆ. ಸೈಕಲ್ ತುಳಿಯೋದು ಕಡಿಮೆ ಮಾಡಿದರೆ ಓಡಲು ಪ್ರಯಾಸವಾಗುತ್ತದೆ. ಹೀಗೆ ಒಂದು ತಪ್ಪಿದ್ದರೂ ಇನ್ನೊಂದರ ಮೇಲೆ ಅಡ್ಡಪರಿಣಾಮ ಬೀರುತ್ತದೆ’ ಎಂದು ಸಂದೀಪ್ ಪಾಟೀಲ್ ಹೇಳುತ್ತಾರೆ.
ಸಂದೀಪ್ ಪಾಟೀಲ್, ಫ್ರಮ್ ಇಂಡಿಯಾ
‘ಐದು ತಿಂಗಳ ಅವಿರತ ತರಬೇತಿ ಬಳಿಕ ಐರನ್ ಮ್ಯಾನ್ ಸ್ಪರ್ಧೆಗೆ ಡೆನ್ಮಾರ್ಕ್ ದೇಶದ ಕೋಪನ್‌ಹೇಗನ್ ನಗರಕ್ಕೆ ಪಯಣಿಸಿದೆ. ಒಂದೆಡೆ ಹೇಳಲಾಗದಷ್ಟು ಖುಷಿ ಜತೆ ನಾನು ಸವಾಲು ಗೆಲ್ಲುವೆನೇ ಎನ್ನುವ ಪುಟ್ಟ ಅನುಮಾನ ಮನದಲ್ಲಿ ಮೂಡಿತು. ಆ ನೆಲದಲ್ಲಿ ಕಾಲಿಟ್ಟ ಕೂಡಲೇ ಆ ದೇಶದ ನೀರನ್ನು ಮುಟ್ಟಿ ಪರೀಕ್ಷಿಸಿದೆ. ಅಲ್ಲಿನ ಶೀತ ವಾತಾವರಣಕ್ಕೆ ನನ್ನ ದೇಹ ಮರಗಟ್ಟುವಂತಾಯಿತು. ಆದರೆ ಸ್ಪರ್ಧೆಗೆ ಎರಡು ದಿನಗಳ ಮುನ್ನವೇ ಹೋಗಿದ್ದರಿಂದ ವಾತಾವರಣಕ್ಕೆ ದೇಹವನ್ನು ಒಗ್ಗಿಸಿದೆ’ ಎಂದು ಸಂದೀಪ್ ಪಾಟೀಲ್ ನೆನೆದರು.
ಸೈಕಲ್ ಸ್ಪರ್ಧೆ ಪ್ರಾರಂಭದಲ್ಲಿ ತಡೆ ಇಲ್ಲದೆ ಸುಸೂತ್ರವಾಗಿ ಸಾಗಿತು. 110 ಕಿ.ಮೀ ತಲುಪಿದ ಬಳಿಕ ನಾನು ನಿಯಂತ್ರಣ ತಪ್ಪಿ ಕೆಳಗೆ ಬಿದ್ದೆ. ಆದರೆ ಅದೃಷ್ಟವಾಶಾತ್ ತುಂಬಾ ತೊಂದರೆ ಆಗಲಿಲ್ಲ. ಅಂತಿಮವಾಗಿ ನಾನು ನಿರೀಕ್ಷಿತ ಸಮಯಕ್ಕೆ ಕೋರ್ಸ್ ಮುಗಿಸಿದೆ. ಹಾಗೆಯೇ ಓಟದ ಆರಂಭವು ತ್ರಾಸದಾಯಕವಾಗಿತ್ತು. ನಾನು ನ್ಯೂಟ್ರಿಷನ್ ಸ್ವೀಕರಿಸುವುದನ್ನು ನಿಲ್ಲಿಸಿದೆ. ನನಗೆ ಕಿತ್ತಲೆ, ಬಾಳೆ ಹಣ್ಣು ಹಾಗೂ ಅರ್ಧ ಕಪ್ ಕೋಲಾ ಸ್ವೀಕರಿಸಿದ ಕೂಡಲೇ ಎನರ್ಜಿ ನಾಶವಾಗುತ್ತಿತ್ತು. ಇದೇ ರೀತಿ ಐದು ಕಿ.ಮೀಗೊಮ್ಮೆ ಮರುಕಳಿಸಿತು. ಹೀಗಿದ್ದರೂ ಬಿಡದೆ ಓಟ ಮುಂದುವರೆಸಿದೆ. ನಿಗದಿತ ಗುರಿ ತಲುಪಲು 100 ಮೀಟರ್ ಇದ್ದಾಗ ನನ್ನ ಹೆಸರು ಜತೆ ನನ್ನ ದೇಶದ ಹೆಸರು ಕೂಗಿದರು. ಸಂದೀಪ್ ಪಾಟೀಲ್ ಫ್ರಮ್ ಇಂಡಿಯಾ ಎಂದಾಗ ಹೆಮ್ಮೆ ಎನಿಸಿತು. ಗುರಿ ಮುಟ್ಟಿದಾಗ ನನಗೆ ಮಾತುಗಳೇ ಬರಲಿಲ್ಲ. ಈ ಕನಸಿನ ಗಮ್ಯ ತಲುಪಲು ಸವಿಸಿದ ಹಾದಿ ಕಣ್ಮುಂದೆ ಅರೆ ಕ್ಷಣ ಸುಳಿಯಿತು. ಈ ಗುರಿ ಸಾಧನೆಗೆ ತಿಂಗಳುಗಟ್ಟಲೇ ತರಬೇತಿ, ಲೆಕ್ಕಕ್ಕೆ ಸಿಗದ ಮುಂಜಾನೆಗಳು, ಹರಿದ ಬೆವರು ಹಾಗೂ ಭಾದಿಸಿದ ನೋವು ಎಲ್ಲವು ಮರೆತು ಹೋಯಿತು’ ಎಂದು ಅವರು ಸಂತಸ ಹಂಚಿಕೊಂಡರು.
ಐರನ್ ಮ್ಯಾನ್ ಕೇವಲ ಸ್ಪರ್ಧೆ ಅಲ್ಲ. ನಮ್ಮಲ್ಲಿನ ಶಿಸ್ತು, ದೃಢತೆ ಹಾಗೂ ನಂಬಿಕೆಗಳನ್ನು ಪ್ರಸುತ್ತಪಡಿಸುವುದಾಗಿದೆ. ನಾವು ಕಲ್ಪನೆಗೆ ನಿಲುಕದ್ದನ್ನು ಸಾಧಿಸಿಸಲು ಸಮರ್ಥರಿದ್ದೇವೆ ಎನ್ನುವ ಆತ್ಮವಿಶ್ವಾಸ ಮೂಡಿಸುತ್ತದೆ.
--- ಸಂದೀಪ್ ಪಾಟೀಲ್
ಐಜಿಪಿ, ಕೆಎಸ್‌ಆರ್‌ಪಿ