ಕೃಷಿ ತ್ಯಾಜ್ಯದಿಂದ ಪ್ಯಾಕೇಜಿಂಗ್ ಉತ್ಪನ್ನ ತಯಾರಿಸಲು ಐಐಟಿ ರೂರ್ಕಿ ಜೊತೆ ಸಹಭಾಗಿತ್ವ ಮಾಡಿಕೊಂಡ ಅಮೆಜಾನ್. ಈ ಕುರಿತ ವರದಿ ಇಲ್ಲಿದೆ.

ಕನ್ನಡಪ್ರಭವಾರ್ತೆ

ಕೃಷಿ ತ್ಯಾಜ್ಯದಿಂದ ನವೀನ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ರೂರ್ಕಿ ಜೊತೆಗೆ ಅಮೆಜಾನ್‌ ಸಂಸ್ಥೆಯು ಸಹಭಾಗಿತ್ವ ಮಾಡಿಕೊಂಡಿದೆ.

ಈ ಯೋಜನೆಯು ಮರರಹಿತ ಕಾಗದ ತಂತ್ರಜ್ಞಾನವನ್ನು ರೂಪಿಸುವ ಗುರಿಯನ್ನು ಹೊಂದಿದ್ದು, ಇದು ಕೃಷಿ ತ್ಯಾಜ್ಯವನ್ನು ಸುಡುವುದನ್ನು ತಪ್ಪಿಸುವುದಲ್ಲದೆ, ಹೊಸ ಮರದ ತಿರುಳಿನ ಅಗತ್ಯತೆಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಗುರವಾದರೂ ಬಲಿಷ್ಠವಾಗಿರುವ ಈ ಪ್ಯಾಕೇಜಿಂಗ್ ಸಾಮಾಗ್ರಿಗಳು ಸಾಂಪ್ರದಾಯಿಕ ಮರದ ತಿರುಳಿನ ಕಾಗದ ಅಥವಾ ಪ್ಲಾಸ್ಟಿಕ್ ಚೀಲಗಳಿಗೆ ಪರ್ಯಾಯವಾಗಿ ಬಳಕೆಯಾಗಲಿದ್ದು, ಮರುಬಳಕೆ ಮಾಡಬಹುದಾದ ಮತ್ತು ಮನೆಯಲ್ಲೇ ಗೊಬ್ಬರವಾಗಬಲ್ಲ ಆಯ್ಕೆಗಳನ್ನು ಒದಗಿಸುತ್ತವೆ.

ಈ ಸಂಶೋಧನೆಯು ಗೋಧಿ ಹುಲ್ಲು ಮತ್ತು ಕಬ್ಬಿನ ಸಿಪ್ಪೆಯಂತಹ ಬೆಳೆಗಳ ಉಳಿಕೆಗಳನ್ನು ಉತ್ತಮ ಗುಣಮಟ್ಟದ ತಿರುಳನ್ನಾಗಿ ಪರಿವರ್ತಿಸುವತ್ತ ಗಮನ ಹರಿಸಲಿದೆ. ಈ ಮೂಲಕ ತಯಾರಿಸಿದ ಪೇಪರ್ ಮೇಲರ್‌ ಗಳು ಸಾಮಾನ್ಯ ಪ್ಯಾಕೇಜಿಂಗ್‌ ಗೆ ಸಮನಾದ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದು ಕೃಷಿ ತ್ಯಾಜ್ಯವನ್ನು ಮೌಲ್ಯಯುತ ಪ್ಯಾಕೇಜಿಂಗ್ ವಸ್ತುವನ್ನಾಗಿ ಮಾಡುವ ಮೂಲಕ ಭಾರತದಲ್ಲಿ ಬೆಳೆಗಳ ಕಳೆಯನ್ನು ಸುಡುವ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಆಮದು ಮಾಡಿಕೊಳ್ಳುವ ಮರದ ತಿರುಳಿನ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ ಮತ್ತು ಕೃಷಿ ತ್ಯಾಜ್ಯಕ್ಕೆ ಮಾರುಕಟ್ಟೆ ಒದಗಿಸುವ ಮೂಲಕ ರೈತರಿಗೆ ಹೆಚ್ಚುವರಿ ಆದಾಯವನ್ನು ತಂದುಕೊಡಲಿದೆ.

ಐಐಟಿ ರೂರ್ಕಿಯ ಪೇಪರ್ ಮತ್ತು ಪ್ಯಾಕೇಜಿಂಗ್ ಟೆಕ್ನಾಲಜಿ ವಿಭಾಗದೊಂದಿಗಿನ ಈ ಸಹಭಾಗಿತ್ವವು, ಮುಂದಿನ 15 ತಿಂಗಳ ಅವಧಿಯಲ್ಲಿ ಪ್ರಯೋಗಾಲಯ ಮಟ್ಟದ ಅಭಿವೃದ್ಧಿ ಮತ್ತು ಪರೀಕ್ಷೆಯೊಂದಿಗೆ ಪ್ರಾರಂಭವಾಗಲಿದೆ. ಈ ಪರೀಕ್ಷೆಗಳು ಯಶಸ್ವಿಯಾದಲ್ಲಿ, ಮುಂದಿನ ವರ್ಷದ ಮಧ್ಯಭಾಗ ಅಥವಾ ಅಂತ್ಯದ ವೇಳೆಗೆ ಕೈಗಾರಿಕಾ ಮಟ್ಟದ ಪ್ರಯೋಗಗಳು, ಪ್ರಕ್ರಿಯೆ ದೃಢೀಕರಣ ಮತ್ತು ವಾಣಿಜ್ಯ ಉತ್ಪಾದನೆಗೆ ಅಮೆಜಾನ್ ಮುಂದಾಗಲಿದೆ.

ಈ ಕುರಿತು ಅಮೆಜಾನ್ ಇಂಡಿಯಾದ ಆಪರೇಷನ್ಸ್ ವಿಭಾಗದ ಉಪಾಧ್ಯಕ್ಷರಾದ ಅಭಿನವ್ ಸಿಂಗ್ ಮಾತನಾಡಿ, ‘ಅಮೆಜಾನ್‌ ನಲ್ಲಿ ನಾವು ಭಾರತದ ಅತ್ಯಂತ ವೇಗದ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಕಾರ್ಯಾಚರಣಾ ಜಾಲವನ್ನು ನಿರ್ಮಿಸುತ್ತಿದ್ದೇವೆ ಮತ್ತು ನಿರ್ವಹಿಸುತ್ತಿದ್ದೇವೆ. ಇದನ್ನು ಮತ್ತಷ್ಟು ಸುಸ್ಥಿರವಾಗಿಸಲು ನಾವು ಬದ್ಧರಾಗಿದ್ದೇವೆ. ಈ ಪ್ರಯತ್ನದ ಭಾಗವಾಗಿ, ಬೆಳೆಗಳ ಉಳಿಕೆಗಳಿಂದ ನವೀನ ಪ್ಯಾಕೇಜಿಂಗ್ ಅಭಿವೃದ್ಧಿಪಡಿಸಲು ನಾವು ಐಐಟಿ ರೂರ್ಕಿ ಜೊತೆ ಕೈಜೋಡಿಸುತ್ತಿದ್ದೇವೆ. ಭಾರತವು ವಾರ್ಷಿಕವಾಗಿ ಸುಮಾರು 500 ಮಿಲಿಯನ್ ಟನ್ ಕೃಷಿ ತ್ಯಾಜ್ಯವನ್ನು ಉತ್ಪಾದಿಸುತ್ತದೆ. ಇದನ್ನು ಪ್ಯಾಕೇಜಿಂಗ್ ರೂಪದಲ್ಲಿ ಮರುಬಳಕೆ ಮಾಡುವ ಮೂಲಕ, ನಾವು ಸಾಂಪ್ರದಾಯಿಕ ಸಾಮಾಗ್ರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು’ ಎಂದು ಹೇಳಿದರು.

ಐಐಟಿ ರೂರ್ಕಿಯ ನಿರ್ದೇಶಕರಾದ ಪ್ರೊ. ಕಮಲ್ ಕಿಶೋರ್ ಪಂತ್ ಅವರು ಮಾತನಾಡಿ, ‘ಈ ಸಹಭಾಗಿತ್ವವು ಭಾರತದ ''ಸರ್ಕ್ಯುಲರ್ ಎಕಾನಮಿ''ಯ ಕನಸನ್ನು ನನಸು ಮಾಡುವತ್ತ ಒಂದು ಪ್ರಮುಖ ಹೆಜ್ಜೆಯಾಗಿದ್ದು, ಇದು ಸರ್ಕಾರದ ಸ್ವಚ್ಛ ಭಾರತ, ಸ್ಟಾರ್ಟ್ಅಪ್ ಇಂಡಿಯಾ ಮತ್ತು ರಾಷ್ಟ್ರೀಯ ಸಂಪನ್ಮೂಲ ದಕ್ಷತೆ ನೀತಿಯಂತಹ ಅಭಿಯಾನಗಳಿಗೆ ಪೂರಕವಾಗಿ ಮೂಡಿಬಂದಿದೆ. ಕೃಷಿ ತ್ಯಾಜ್ಯಗಳನ್ನು ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಸಾಮಾಗ್ರಿಗಳನ್ನಾಗಿ ಪರಿವರ್ತಿಸುವ ಮೂಲಕ, ನಾವು ಭಾರತದಲ್ಲಿ ಬೆಳೆಗಳ ಉಳಿಕೆಯನ್ನು ಸುಡುವ ಮತ್ತು ಹೊಸ ಸಾಮಗ್ರಿಗಳ ಮೇಲಿನ ಅವಲಂಬನೆಯ ಅವಳಿ ಸವಾಲುಗಳನ್ನು ನಿರ್ವಹಿಸಲಿದ್ದೇವೆ’ ಎಂದು ಹೇಳಿದರು.

ಐಐಟಿ ರೂರ್ಕಿ, ಸಹರಾನ್‌ಪುರ ಕ್ಯಾಂಪಸ್‌ನ ಕಾಗದ ಮತ್ತು ಪ್ಯಾಕೇಜಿಂಗ್ ತಂತ್ರಜ್ಞಾನ ವಿಭಾಗದ ಇನ್ನೋಪಾಪ್ ಲ್ಯಾಬ್‌ನ ಪ್ರೊ. ವಿಭೋರ್ ಕುಮಾರ್ ರಸ್ತೋಗಿ ಮತ್ತು ಡಾ. ಅನುರಾಗ್ ಕುಲಶ್ರೇಷ್ಠ ಅವರು ಈ ಸಂಶೋಧನಾ ಯೋಜನೆಯನ್ನು ಮುನ್ನಡೆಸಲಿದ್ದಾರೆ.

ಪ್ಯಾಕೇಜಿಂಗ್ ಪ್ರಮಾಣವನ್ನು ಕಡಿಮೆ ಮಾಡುವ ತನ್ನ ನಿರಂತರ ಪ್ರಯತ್ನಗಳ ಭಾಗವಾಗಿ, ಅಮೆಜಾನ್ ಇಂಡಿಯಾ ತನ್ನ ಶೇಕಡ 50ಕ್ಕಿಂತ ಹೆಚ್ಚು ಆರ್ಡರ್‌ ಗಳನ್ನು ಅವುಗಳ ಮೂಲ ಪ್ಯಾಕೇಜಿಂಗ್‌ ನಲ್ಲಿ ಅಥವಾ ಕನಿಷ್ಠ ಪ್ಯಾಕೇಜಿಂಗ್‌ ನೊಂದಿಗೆ ರವಾನಿಸುತ್ತಿದೆ. ಕಂಪನಿಯು ದೇಶದ 300ಕ್ಕೂ ಹೆಚ್ಚು ನಗರಗಳಲ್ಲಿ ಆರ್ಡರ್‌ ಗಳನ್ನು ನೇರವಾಗಿ ಉತ್ಪನ್ನದ ಪ್ಯಾಕೇಜಿಂಗ್‌ ನಲ್ಲೇ ವಿತರಿಸುತ್ತಿದೆ. 2019 ರಿಂದ, ಅಮೆಜಾನ್ ಇಂಡಿಯಾ ತನ್ನ ಎಲ್ಲಾ ವಿತರಣಾ ಕೇಂದ್ರಗಳಲ್ಲಿ ಪ್ಯಾಕೇಜಿಂಗ್‌ ನಿಂದ ಶೇಕಡ 100ರಷ್ಟು ಏಕಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದೆ.