ಸಾರಾಂಶ
ಈ ಸ್ಪರ್ಧೆಗೆ ಸಿದ್ಧರಾಗಲು 12 ತಿಂಗಳ ಕಠಿಣ ಪರಿಶ್ರಮ ನಡೆಸಿದ್ದೇನೆ. ಕೋಚ್ ಚೈತನ್ಯ ಅವರ ಮೂಲಕ ವಾರಕ್ಕೆ 12ರಿಂದ 15 ಗಂಟೆ ತರಬೇತಿ ಪಡೆದಿದ್ದೇನೆ. ಇದರಲ್ಲಿ ವಾರದಲ್ಲಿ 3 ದಿನ ಈಜು, ಶನಿವಾರ ದೀರ್ಘ ಓಟ, ಭಾನುವಾರ 6 ಗಂಟೆಗಳ ಕಾಲ ಸೈಕ್ಲಿಂಗ್ ಒಳಗೊಂಡಿತ್ತು ಎಂದು ಅವರು ವಿವರಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಕ್ಯಾನ್ಸರ್ ತಜ್ಞ ಡಾ.ಗುರುಪ್ರಸಾದ್ ಭಟ್ ಅವರು ಇಟಲಿಯಲ್ಲಿ ನಡೆದ ‘ಟ್ರಯಥ್ಲಾನ್’ನಲ್ಲಿ ಭಾಗವಹಿಸಿ ಪದಕ ಗೆಲ್ಲುವ ಮೂಲಕ ‘ಐರನ್ ಮ್ಯಾನ್’ ಆಗಿ ಹೊರಹೊಮ್ಮಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಐರನ್ ಮ್ಯಾನ್’ ಆಗಿರುವುದು ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣ. ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರಿನ ಜನ ಸಾಧನೆ ಮಾಡುವಂತೆ ಕ್ರೀಡಾ ಕ್ಷೇತ್ರದಲ್ಲೂ ಸಾಧನೆ ಮಾಡಬೇಕೆನ್ನುವ ನಿಟ್ಟಿನಲ್ಲಿ ಈ ಕಠಿಣ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಗೆದ್ದಿದ್ದೇನೆ. ಮಂಗಳೂರಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯತ್ತ ಆಕರ್ಷಿತರಾಗಬೇಕಿದೆ ಎಂದರು.
ಅಡ್ರಿಯಾಟಿಕ್ ಸಮುದ್ರದಲ್ಲಿ 3.8 ಕಿ.ಮೀ. ಈಜು ಮತ್ತು 108 ಕಿ.ಮೀ. ಸೈಕ್ಲಿಂಗ್ ಹಾಗೂ 42 ಕಿ.ಮೀ. ಓಟವನ್ನು ಈ ಸ್ಪರ್ಧೆ ಒಳಗೊಂಡಿತ್ತು. 16 ಗಂಟೆಯಲ್ಲಿ ಈ ಎಲ್ಲವನ್ನೂ ಯಶಸ್ವಿಯಾಗಿ ಪೂರ್ತಿಗೊಳಿಸಿದ್ದೇನೆ. 3.8 ಕಿ.ಮೀ ಈಜನ್ನು 1 ಗಂಟೆ 25 ನಿಮಿಷದಲ್ಲಿ, 180 ಕಿ.ಮೀ. ಸೈಕ್ಲಿಂಗ್‌ನ್ನು 6 ಗಂಟೆ 55 ನಿಮಿಷ ಹಾಗೂ 42.2 ಕಿ.ಮೀ. ಓಟವನ್ನು 5 ಗಂಟೆ 10 ನಿಮಿಷದಲ್ಲಿ ಕ್ರಮಿಸಿದ್ದೇನೆ. ಇದನ್ನು ಜಗತ್ತಿನ ಅತ್ಯಂತ ಕಠಿಣ ಏಕದಿನ ಕ್ರೀಡಾಕೂಟವೆಂದು ಪರಿಗಣಿಸಲಾಗಿದ್ದು, ಇದರಲ್ಲಿ ಒಟ್ಟು 2,439 ಮಂದಿ ಭಾಗವಹಿಸಿದ್ದರು ಎಂದರು.ಈ ಸ್ಪರ್ಧೆಗೆ ಸಿದ್ಧರಾಗಲು 12 ತಿಂಗಳ ಕಠಿಣ ಪರಿಶ್ರಮ ನಡೆಸಿದ್ದೇನೆ. ಕೋಚ್ ಚೈತನ್ಯ ಅವರ ಮೂಲಕ ವಾರಕ್ಕೆ 12ರಿಂದ 15 ಗಂಟೆ ತರಬೇತಿ ಪಡೆದಿದ್ದೇನೆ. ಇದರಲ್ಲಿ ವಾರದಲ್ಲಿ 3 ದಿನ ಈಜು, ಶನಿವಾರ ದೀರ್ಘ ಓಟ, ಭಾನುವಾರ 6 ಗಂಟೆಗಳ ಕಾಲ ಸೈಕ್ಲಿಂಗ್ ಒಳಗೊಂಡಿತ್ತು ಎಂದು ಅವರು ವಿವರಿಸಿದರು.ತರಬೇತುದಾರರಾದ ಮನೀಶ್, ಸಂಕೇತ್ ಹಾಗೂ ಮುಬಿನ್ ಇದ್ದರು.