ಸಾರಾಂಶ
ಬೆಂಗಳೂರು : ಗೋವಾದಲ್ಲಿ ಭಾನುವಾರ ನಡೆದ ಪ್ರತಿಷ್ಠಿತ ಗೋವಾ ‘ದಿ ಐರನ್‌ಮ್ಯಾನ್ 70.3’ ಟ್ರಯಥ್ಲಾನ್ ರೇಸ್ ಅನ್ನು ಸಂಸದ ತೇಜಸ್ವಿ ಸೂರ್ಯ ಅವರು 8 ತಾಸು 27 ನಿಮಿಷ 32 ಸೆಕೆಂಡುಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಈ ಮೂಲಕ ಪ್ರತಿಷ್ಠಿತ ರೇಸ್ ಪೂರ್ಣಗೊಳಿಸಿದ ಜಗತ್ತಿನ ಮೊದಲ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ತೇಜಸ್ವಿ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
1.9 ಕಿ.ಮೀ ಈಜು, 90 ಕಿ.ಮೀ. ಸೈಕ್ಲಿಂಗ್ ಮತ್ತು 21.1 ಕಿ.ಮೀ. ಓಟ ಸೇರಿ ಒಟ್ಟು 113 ಕಿ.ಮೀ. ದೂರ ಕ್ರಮಿಸುವ ಗುರಿಯನ್ನು ಈ ಸ್ಪರ್ಧೆ ಒಳಗೊಂಡಿರುತ್ತದೆ. ಭಾರತ ಸೇರಿದಂತೆ ಸುಮಾರು 50 ದೇಶಗಳ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸ್ಪರ್ಧೆಯಲ್ಲಿ ಭಾಗವಹಿಸುವುದು ಕಠಿಣ ಸವಾಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಅಭಿಯಾನದಿಂದ ಪ್ರೇರಣೆ ಪಡೆದು, ಕಳೆದ ನಾಲ್ಕು ತಿಂಗಳಿಂದ ಈ ರೇಸ್‌ಗಾಗಿ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದ್ದೆ. ರೇಸ್ ಯಶಸ್ವಿಯಾಗಿ ಪೂರ್ಣಗೊಳಿಸುವುದಕ್ಕೆ ಸಂತೋಷವಾಗಿದೆ ಎಂದು ತೇಜಸ್ವಿ ಹೇಳಿದ್ದಾರೆ.
ದೊಡ್ಡ ಗುರಿಗಳನ್ನು ಬೆನ್ನತ್ತಿರುವ ಭಾರತವು ಯುವ ಜನರ ರಾಷ್ಟ್ರವಾಗಿದೆ. ಯುವ ಜನತೆಯ ಸಾಮರ್ಥ್ಯ ಸಂಪೂರ್ಣ ಸದ್ಬಳಕೆಯಾಗಬೇಕಾದರೆ ಉತ್ತಮ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯ ಬಹಳ ಮುಖ್ಯವಾಗುತ್ತದೆ. ಇದರಿಂದ ಆರೋಗ್ಯಕರ ರಾಷ್ಟ್ರವನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ದೈಹಿಕವಾಗಿ ಫಿಟ್ ಆಗಿರುವುದರಿಂದ ಶಿಸ್ತು ಮತ್ತು ಆತ್ಮವಿಶ್ವಾಸ ಬರುತ್ತದೆ. ಅದರಿಂದ ಯಾವುದೇ ಕೆಲಸ, ಕಾರ್ಯಗಳನ್ನು ಕೈಗೊಂಡರೂ ಯಶಸ್ಸಿನ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದು ತಿಳಿಸಿದ್ದಾರೆ.
ಜನರ ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುವ ಉದ್ದೇಶದಿಂದ ಪ್ರಧಾನಿ ಮೋದಿಯವರು ಆರಂಭಿಸಿರುವ ಫಿಟ್ ಇಂಡಿಯಾ ಅಭಿಯಾನವು ವ್ಯಾಯಾಮ ಸೇರಿದಂತೆ ವಿವಿಧ ದೈಹಿಕ ಚಟುವಟಿಕೆಗಳಲ್ಲಿ ನಾಗರಿಕರು ತೊಡಗಿಸಿಕೊಳ್ಳಲು ಜಾಗೃತಿ ಮೂಡಿಸುತ್ತದೆ ಎಂದು ತೇಜಸ್ವಿ ಹೇಳಿದ್ದಾರೆ.
ಏನಿದು ಐರನ್‌ಮ್ಯಾನ್?ದಿ ಐರನ್‌ಮ್ಯಾನ್ 70.3 ಟ್ರಯಥ್ಲಾನ್ ಎಂಬುದು ಓಟ, ಈಜು ಹಾಗೂ ಸೈಕ್ಲಿಂಗ್ ಒಳಗೊಂಡ ರೇಸ್. ವಿಶ್ವ ಟ್ರಯಥ್ಲಾನ್ ಕಾರ್ಪೊರೇಷನ್ ಎಂಬ ಸಂಸ್ಥೆ ಇದನ್ನು ಜಗತ್ತಿನಾದ್ಯಂತ ನಡೆಸುತ್ತದೆ. ಭಾರತದಲ್ಲಿ ಗೋವಾದಲ್ಲಿ ಮಾತ್ರ ಇದು ನಡೆಯುತ್ತದೆ.-
ಫಿಟ್ ಇಂಡಿಯಾಕ್ಕೆಸ್ಫೂರ್ತಿ: ಮೋದಿಫಿಟ್ನೆಸ್‌ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಯುವಜನತೆ ತೊಡಗಿಸಿಕೊಳ್ಳಲು ಈ ಸಾಧನೆ ಸ್ಫೂರ್ತಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೀವು ಫಿಟ್ ಇಂಡಿಯಾಕ್ಕೆ ಸ್ಫೂರ್ತಿ ಎಂದು ಸ್ವತಃ ತೇಜಸ್ವಿ ಸೂರ್ಯ ಅವರಿಗೆ ಕರೆ ಮಾಡಿ ಶ್ಲಾಘಿಸಿದ್ದಾರೆ.