‘ಫಾರಿನ್‌ ಅನ್ನಭಾಗ್ಯ’ ಕೊಟ್ಟವರಿಗೆ ಹವಾಲಾ ಮೂಲಕ ಹಣ ಪಾವತಿ?

| N/A | Published : Sep 11 2025, 05:41 AM IST

annabhagya

ಸಾರಾಂಶ

ವಿದೇಶಗಳಿಗೆ ರಫ್ತಾಗುವ ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟದಿಂದ ಬರುವ ಕೋಟ್ಯಂತರ ರುಪಾಯಿ ಹಣ ಹವಾಲಾ ಮಾರ್ಗದಲ್ಲಿ ಪಾವತಿಯಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

  ಯಾದಗಿರಿ :  ವಿದೇಶಗಳಿಗೆ ರಫ್ತಾಗುವ ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟದಿಂದ ಬರುವ ಕೋಟ್ಯಂತರ ರುಪಾಯಿ ಹಣ ಹವಾಲಾ ಮಾರ್ಗದಲ್ಲಿ ಪಾವತಿಯಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅನ್ನಭಾಗ್ಯ ಅಕ್ರಮ ಅಕ್ಕಿ ದಂಧೆಯಲ್ಲಿ ಭಾಗಿಯಾಗಿರುವ ದಂಧೆಕೋರರು, ಮಹಾರಾಷ್ಟ್ರ, ತೆಲಂಗಾಣ ಹಾಗೂ ಗುಜರಾತ್‌ನಿಂದ, ಹಾಂಕಾಂಗ್‌ ಮಾರ್ಗವಾಗಿ ವಿದೇಶಕ್ಕೆ ಅಕ್ಕಿ ವರ್ಗಾವಣೆ ಮಾಡುತ್ತಾರೆ. ಇವರಿಗೆ ಹವಾಲಾ ಮೂಲಕವೇ ಹಣ ಪಾವತಿಯಾಗುತ್ತಿದೆ ಎನ್ನಲಾಗಿದೆ.

ಬಡವರಿಗೆ ಸರ್ಕಾರದಿಂದ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ, ವಿದೇಶಕ್ಕೆ ರಫ್ತು ಮಾಡಲು ಭಾರಿ ಪ್ರಮಾಣದ ಅಕ್ಕಿ ಚೀಲಗಳನ್ನು ದಾಸ್ತಾನು ಮಾಡಿದ್ದ ಯಾದಗಿರಿ ಜಿಲ್ಲೆಯ ಗುರುಮಠಕಲ್‌ನ ಎರಡು ರೈಸ್‌ಮಿಲ್‌ಗಳನ್ನು ಜಪ್ತಿ ಮಾಡಿ, ದೂರು ದಾಖಲಿಸಿಕೊಳ್ಳಲಾಗಿತ್ತು. ಇಲ್ಲಿನ ದಾಳಿ ವೇಳೆ ಬೆಳಕಿಗೆ ಬಂದ ಕೆಲ ಅಂಶಗಳು, ವಿದೇಶಿ ಹಣ ವರ್ಗಾವಣೆಯಾದ ಬಗ್ಗೆಯೂ ಅನುಮಾನಗಳನ್ನು ಮೂಡಿಸಿದೆ.

ನಿವೃತ್ತ ಐಪಿಎಸ್‌ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ಈ ಬಗ್ಗೆ ಮಾಹಿತಿ ನೀಡಿ, ದೇಶದ ವಿವಿಧೆಡೆಯಿಂದ ಕೇಂದ್ರ/ರಾಜ್ಯ ಸರ್ಕಾರಗಳ ಪಡಿತರ ಅಕ್ಕಿಯನ್ನು ಸಂಗ್ರಹಿಸಿ, ಪಾಲಿಶ್‌ ಆಗಿ ಹೊರಹೋಗುವ ಅಕ್ಕಿ, ಕೋಟ್ಯಂತರ ರುಪಾಯಿಗಳ ವಹಿವಾಟಿಗೆ ಕಾರಣವಾಗುತ್ತದೆ. ಈ ಕುರಿತ ವಹಿವಾಟು ವೇಳೆ ದೊಡ್ಡಮಟ್ಟದಲ್ಲಿ ಹಣ ಹವಾಲಾ ಮೂಲಕ ವರ್ಗಾವಣೆಯಾಗುತ್ತದೆ. ಅಕ್ರಮ ಅಕ್ಕಿ ಸಾಗಾಟ ಅಥವಾ ಅಕ್ರಮ ಅಕ್ಕಿ ದಾಸ್ತಾನು ಪ್ರಕರಣಗಳ ಬಗ್ಗೆ ಸೂಕ್ತ ತನಿಖೆಯಾದರೆ, ಈ ಬಗ್ಗೆ ಮತ್ತಷ್ಟು ಅಂಶಗಳು ಬೆಳಕಿಗೆ ಬರಬಹುದು ಎಂದು ತಿಳಿಸಿದರು.

ಗಡಿಭಾಗದ ಮಿಲ್‌ಗಳಲ್ಲಿ ಪಾಲಿಶ್‌

ಗಡಿಭಾಗದಲ್ಲಿರುವ ಅಕ್ಕಿಮಿಲ್‌ಗಳ ಮೂಲಕ ರಾಜ್ಯಾದ್ಯಂತ ಸಂಗ್ರಹಿಸಿದ ಅನ್ನಭಾಗ್ಯದ ಅಕ್ಕಿಗಳನ್ನು ಪಾಲಿಶ್‌ ಮಾಡಲಾಗುತ್ತದೆ. ಪಡಿತರ ಅಂಗಡಿ, ಜನರಿಂದ ಖರೀದಿಸುವ ಅಕ್ಕಿಯನ್ನು ಕಡಿಮೆ ಮೊತ್ತಕ್ಕೆ ಖರೀದಿಸಿ ಪಾಲಿಶ್‌ ಬಳಿಕ ದೊಡ್ಡ ಮೊತ್ತಕ್ಕೆ ಮಾರಾಟವಾಗುತ್ತದೆ. ಹೊರರಾಜ್ಯದ ರಫ್ತಿನ ವೇಳೆಯೂ ಕಡಿಮೆ ಮೊತ್ತ ತೋರಿಸಿ ನಂತರ ವಿದೇಶಗಳಲ್ಲಿ ಉತ್ತಮ ಗುಣಮಟ್ಟದ ಅಕ್ಕಿ ಹೆಸರಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮೂಲಕ ದಂಧೆಕೋರರು ದೊಡ್ಡಮೊತ್ತದ ಲಾಭ ಮಾಡಿಕೊಳ್ಳುತ್ತಾರೆ. ಸ್ಟಾಕಿಸ್ಟ್‌ ಮತ್ತು ಸೂಪರ್‌ ಸ್ಟಾಕಿಸ್ಟ್‌ ಹಾಗೂ ಕೆಲ ದೊಡ್ಡ ಮಿಲ್‌ನವರಿಗೆ ಹವಾಲಾ ಮಾರ್ಗದಲ್ಲಿ ಹಣ ಪಾವತಿಯಾಗುತ್ತದೆ.

ಫೇಸ್‌ಟೈಮ್‌ ಮೂಲಕ ಮಾತುಕತೆ?

ಅಕ್ರಮ ದಂಧೆ ಕೋರರು ಫೇಸ್‌ಟೈಮ್ ಮೂಲಕ ಮಾತುಕತೆ ನಡೆಸುತ್ತಾರೆ. ಸಾವಿರಾರು ಕೋಟಿ ರು. ವಹಿವಾಟು ನಡೆಸುವ ದಲ್ಲಾಳಿಗಳು ಹಾಗೂ ದಂಧೆಕೋರರು ಇದಕ್ಕೆಂದೇ ಗುಂಪು ರಚಿಸಿಕೊಂಡು, ‘ಫೇಸ್‌ಟೈಮ್‌’ ಆ್ಯಪ್‌ ಮೂಲಕ ಹಣದ ಹಾಗೂ ದಾಸ್ತಾನು ಸಾಗಣೆಯ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಆ್ಯಪಲ್‌ ಮೊಬೈಲ್‌ ಮೂಲಕ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆದರೆ, ಆ್ಯಂಡ್ರಾಯಿಡ್‌ ಮೊಬೈಲ್‌ ಬಳಕೆದಾರರು ವೆಬ್‌ ಮೂಲಕ ಈ ಮೀಟಿಂಗ್‌ನಲ್ಲಿ ಜಾಯಿನ್‌ ಆಗಬಹುದಾಗಿದೆ. ಈ ಎಲ್ಲಾ ಸಭೆ ಗೌಪ್ಯವಾಗಿಯೇ ನಡೆಯುತ್ತಿದೆ. ಯಾವುದೇ ಸಾಕ್ಷ್ಯವೂ ಸಿಗುವುದು ಕಷ್ಟ ಎಂದು ಹೇಳಲಾಗುತ್ತದೆ. 

Read more Articles on