ಅಕ್ಕಿ ಅಕ್ರಮ ಹಗರಣ: ಸತ್ತವರಿಗೂ ಅನ್ನಭಾಗ್ಯ !

| N/A | Published : Sep 10 2025, 10:26 AM IST

annabhagya

ಸಾರಾಂಶ

ಜಿಲ್ಲೆಯ ಗುರುಮಠಕಲ್‌ನ ಎರಡು ಗೋದಾಮುಗಳಲ್ಲಿ ಭಾರಿ ಪ್ರಮಾಣದಷ್ಟು (4 ಸಾವಿರ ಕ್ವಿಂಟಾಲ್‌) ಪತ್ತೆಯಾದ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಸಂಗ್ರಹ ಪ್ರಕರಣದ ಹೂರಣ ಬಗೆದಷ್ಟೂ ಬಯಲಾಗುತ್ತಿದೆ.

ಆನಂದ್‌ ಎಂ. ಸೌದಿ

 ಯಾದಗಿರಿ :   ಜಿಲ್ಲೆಯ ಗುರುಮಠಕಲ್‌ನ ಎರಡು ಗೋದಾಮುಗಳಲ್ಲಿ ಭಾರಿ ಪ್ರಮಾಣದಷ್ಟು (4 ಸಾವಿರ ಕ್ವಿಂಟಾಲ್‌) ಪತ್ತೆಯಾದ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಸಂಗ್ರಹ ಪ್ರಕರಣದ ಹೂರಣ ಬಗೆದಷ್ಟೂ ಬಯಲಾಗುತ್ತಿದೆ. ಪ್ರತಿ ಕುಟುಂಬಕ್ಕೆ, ಪ್ರತಿ ತಿಂಗಳು ಲಭ್ಯವಾಗುವ ಪಡಿತರ ಆಹಾರಧಾನ್ಯಗಳಲ್ಲಿ, ಜಿಲ್ಲೆಯ ಅನೇಕ ಕಡೆಗಳಲ್ಲಿ ಮೃತಪಟ್ಟವರ ಹೆಸರುಗಳನ್ನು ಡಿಲೀಟ್‌ ಮಾಡದೆ ಹಾಗೆಯೇ ಬಿಟ್ಟಿರುವುದರಿಂದ, ಸತ್ತವರ ಹೆಸರಲ್ಲಿಯೂ ದಾಸ್ತಾನು ಎತ್ತುವಳಿ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಮೂಡಿ ಬಂದಿವೆ.

ಜನನ ಮತ್ತು ನೋಂದಣಿ ಇಲಾಖೆಗಳ ಮೂಲಕ, ಮೃತಪಟ್ಟವರ ಹೆಸರು ಪಡೆದು, ಸ್ಥಳ ಮಹಜರು ನಡೆಸಿ ಸಂಬಂಧಿತ ಅಧಿಕಾರಿಗಳು ಡಿಲೀಟ್‌ ಮಾಡಬೇಕು. ಆದರೆ, ಇದ್ಯಾವುದೂ ಆಗುವುದೇ ಇಲ್ಲ. ಸತ್ತವರ ಜೊತೆಗೆ, ವಲಸೆ ಹೋದವರ ಹೆಸರುಗಳಲ್ಲಿ ಉಳಿದ ಆಹಾರಧಾನ್ಯ ಸರ್ಕಾರಕ್ಕೆ ತಿಳಿಸುವ ಬದಲು, ಅವರ ಹೆಸರಲ್ಲೂ ಎತ್ತುವಳಿ ಮಾಡಲಾಗುತ್ತದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. 

"ನಮ್ಮ ಅತ್ತೆಯವರು ತೀರಿಕೊಂಡು ಎರಡು ವರ್ಷಗಳಾಗಿವೆ. ಮರಣ ಪ್ರಮಾಣ ಪತ್ರ ಕೊಟ್ಟು ಬಂದಿರುವ ನಾನು, ಹೆಸರು ಡಿಲೀಟ್ ಮಾಡುವಂತೆ ನಾನು ಅನೇಕ ಬಾರಿ ಮನವಿ ಮಾಡಿದರೂ ಆಗಿಲ್ಲ. ಈಗಲೂ ಅವರ ಹೆಸರಿನಲ್ಲಿ ದಾಸ್ತಾನು ಎತ್ತುವಳಿಯಾಗುತ್ತಿದೆ. ನಮ್ಮೂರಲ್ಲೇ ಇಂತಹ 25ಕ್ಕೂ ಹೆಚ್ಚು ಜನ ಮೃತಪಟ್ಟವರ ಹೆಸರುಗಳಲ್ಲಿ ತಿಂಗಳ ಕೊನೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ದಾಸ್ತಾನು ಸಂಗ್ರಹಿಸಲಾಗುತ್ತಿದೆ. ಎಂದು "ಕನ್ನಡಪ್ರಭ"ಕ್ಕೆ ತಿಳಿಸಿದ ಸುರಪುರದ ಮರೆಪ್ಪ (ಮನವಿ ಮೇರೆಗೆ ಹೆಸರು ಬದಲಾಯಿಸಲಾಗಿದೆ) ದೂರಿದರು. ಬಲ್ಲ ಮೂಲಗಳ ಪ್ರಕಾರ, ದಂಧೆಕೋರರ ಜೊತೆ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪಗಳಿವೆ.

300-400 ಜನರ (50 ರಿಂದ 60 ಕಾರ್ಡ್‌) ಉಳಿಯುತ್ತವೆ. ಹಾಗೆಯೇ, ರೆಗ್ಯುಲರ್‌ ಫಲಾನುಭವಿಗಳಿಗೆ ಬಯೋಮೆಟ್ರಿಕ್‌ ಪಡೆದು, ಆ ತಿಂಗಳ ಬಿಟ್ಟು, ಮುಂದಿನ ತಿಂಗಳಿನ ದಾಸ್ತಾನು ವಿತರಿಸಲಾಗುತ್ತಿದೆ. ಪ್ರತಿ ಫಲಾನುಭವಿಗೆ 1 ಕೆಜಿ ಸ್ಯೂಟ್‌ (ಸೋರಿಕೆ, ಸಾಗಾಣಿಕೆ ಮುಂತಾದ ಖರ್ಚು ಎಂದು ಕಡಿತ) ಮುರಿಯುತ್ತಿರುವುದರಿಂದ ಒಂದು ಹಳ್ಳಿಯಲ್ಲಿ, ಒಂದು ನ್ಯಾಯಬೆಲೆ ಅಂಗಡಿಯಿಂದ 20-30 ಕ್ವಿಂಟಾಲ್‌ ಆಹಾರಧಾನ್ಯ ಉಳಿದಿದ್ದನ್ನು ಸರ್ಕಾರಕ್ಕೆ ತೋರಿಸುವ ಬದಲು, ಬಹುತೇಕ ಅಂಗಡಿಗಳು ದಲ್ಲಾಳಿಗಳಿಗೆ- ರೈಸ್‌ಮಿಲ್‌ಗಳಿಗೆ ಮಾರುತ್ತಾರೆ.." ಎಂದು ಮರೆಪ್ಪ ತಿಳಿಸಿದರು. .

9ವೈಡಿಆರ್‌10 : ಗುರುಮಠಕಲ್ ರೈಸ್‌ಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿರುವ ಅನ್ನಭಾಗ್ಯ ಹಾಗೂ ಕೇಂದ್ರ ಸರ್ಕಾರದ ಪೋಷಣ ಅಭಿಯಾನದ ಪೋಷಕಾಂಶಯುಕ್ತ ಅಕ್ಕಿ.  

Read more Articles on