ಹಾಲು ಖರೀದಿ ವೇಳೆ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಲು ಉತ್ಪಾದಕರು ಕೆ.ಆರ್.ಪೇಟೆ ತಾಲೂಕಿನ ಮಾಳಗೂರು ಗ್ರಾಮದ ಡೇರಿ ಎದುರು ಪ್ರತಿಭಟನೆ ಮಾಡಿ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹಾಲು ಖರೀದಿ ವೇಳೆ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಲು ಉತ್ಪಾದಕರು ತಾಲೂಕಿನ ಮಾಳಗೂರು ಗ್ರಾಮದ ಡೇರಿ ಎದುರು ಪ್ರತಿಭಟನೆ ಮಾಡಿ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.ಹಾಲು ಉತ್ಪಾದಕರು ಮಾತನಾಡಿ, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಪ್ರತಿಯೊಬ್ಬ ಉತ್ಪಾದಕರಿಗೆ 600 ಗ್ರಾಂನಿಂದ 700 ಗ್ರಾಂ ನಷ್ಟು ಮೋಸ ಮಾಡಲಾಗುತ್ತಿದೆ. ಮನ್ಮುಲ್‌ನಲ್ಲಿ ಹಾಲಿನಪುಡಿ ಕಲಬೆರಕೆ ಹಗರಣ ಬೆಳಕಿಗೆ ಬಂದಿರುವ ಸಮಯದಲ್ಲೇ ಹಾಲು ಖರೀದಿ ವೇಳೆ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ದೂರಿದರು.
ರೈತರು ಕಷ್ಟುಪಟ್ಟು ಹೈನುಗಾರಿಕೆ ಮಾಡುತ್ತಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಕಾರ್ಯದರ್ಶಿ ರೈತರಿಗೆ ಮೋಸ ಮಾಡಿದ್ದಾರೆ. ತಾಲೂಕಿನ ಬಹುತೇಕ ಕಡೆ ಇದೇ ಸಮಸ್ಯೆ ಇರಬಹುದು. ಪಶು ಆಹಾರ ಬೆಲೆ ಗಗನಕ್ಕೇರಿದೆ. ಆದರೆ, ಹಾಲಿನ ಬೆಲೆ ಮಾತ್ರ ಏರಿಕೆಯಾಗಿಲ್ಲ. ಇದರ ಮಧ್ಯೆ ತೂಕದಲ್ಲಿ ರೈತರಿಗೆ ಮೋಸ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಲೇ ಮನ್ಮುಲ್ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಹಾಲು ಉತ್ಪಾದಕರಿಗೆ ನ್ಯಾಯ ದೊರಕಿಸಿಕೊಡಬೇಕು. ಜೊತೆಗೆ ಇಷ್ಟು ದಿನ ಮೋಸವಾಗಿರುವ ಹಣವನ್ನು ಕಾರ್ಯದರ್ಶಿಯಿಂದ ವಸೂಲಿ ಮಾಡಿ ರೈತರಿಗೆ ಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಕಾರ್ಯದರ್ಶಿಯಿಂದ ವಸೂಲಿ ಮಾಡಿ ರೈತರಿಗೆ ಪಾವತಿ ಮಾಡದಿದ್ದರೆ ಕೆ.ಆರ್.ಪೇಟೆ ಮನ್ಮುಲ್ ಉಪ ಕಚೇರಿ ಎದುರು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾರ್ಯದರ್ಶಿ ನಂದಿನಿ, ನಾಲ್ಕು ದಿನಗಳಿಂದ ತೂಕದಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ಉತ್ಪಾದಕರಿಗೆ ಆಗಿರುವ ನಷ್ಟವನ್ನು ಕಟ್ಟಿಕೊಡಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಹಾಲು ಉತ್ಪಾದಕರಾದ ನವೀನ್, ದರ್ಶನ್, ಹರೀಶ್, ವೆಂಕಟೇಶ್, ಸತೀಶ್, ಮೋಹನ್, ರಂಗಸ್ವಾಮಿ, ಮಂಜಣ್ಣ, ಮರೀಗೌಡ, ರಘು ಸೇರಿದಂತೆ ಹಲವಾರು ಗ್ರಾಮಸ್ಥರರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.