ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಹಾಗಣಪತಿ ಮೆರವಣಿಗೆಗೂ ಮುನ್ನ ಕ್ಷೇತ್ರದ ಶಾಸಕ ಎಚ್.ಟಿ.ಮಂಜು ಅವರು ಪತ್ನಿ ರಮಾರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಗಣಪತಿ ವಿಸರ್ಜನಾ ಮೆರವಣಿಗೆ 850ಕ್ಕೂ ಹೆಚ್ಚು ಪೊಲೀಸರ ಸರ್ಪಗಾವಲಿನಲ್ಲಿ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಪಕ್ಕದ ಗಣಪತಿ ಪ್ರತಿಷ್ಠಾಪನಾ ಸ್ಥಳದಿಂದ ಪ್ರವಾಸಿ ಮಂದಿರ ವೃತ್ತ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಶಾಂತಿಯುತವಾಗಿ ಸಾಗಿತು.ಮೆರವಣಿಗೆಯಲ್ಲಿ ಕೇರಳದಿಂದ ಚಂಡೆ ವಾದಕರು ಸೇರಿದಂತೆ ವಿಶೇಷ ಜಾನಪದ ಕಲಾ ತಂಡಗಳು ಆಗಮಿಸಿದ್ದು, ತಮ್ಮ ಕಲಾ ಪ್ರದರ್ಶನದ ಮೂಲಕ ಜನರಿಗೆ ಮನರಂಜನೆ ನೀಡಿದವು. ಮೆರವಣಿಗೆ ಯುದ್ದಕ್ಕೂ ಸಾವಿರಾರು ಯುವಕರು ಕೇಸರಿ ಶಾಲು ಧರಿಸಿ ಡಿಜೆ ಸೌಂಡಿಗೆ ತಕ್ಕಂತೆ ಕುಣಿಯುತ್ತ ಸಂಭ್ರಮಿಸಿದರು.
ಪಟ್ಟಣದಲ್ಲಿ ಇದುವರೆಗೂ ಯಾವುದೇ ರೀತಿಯ ಕೋಮು ಗಲಭೆಗಳು ನಡೆದಿಲ್ಲ. ನಾಗಮಂಗಲ, ಮದ್ದೂರಿನ ಗಲಭೆ ನಂತರ ಪಟ್ಟಣ ಪೊಲೀಸರು ಮುನ್ನೆಚ್ಚರಿಕಾ ಕ್ರಮ ವಹಿಸಿ ಕಟ್ಟು ನಿಟ್ಟಿನ ರಕ್ಷಣಾ ವ್ಯವಸ್ಥೆ ಮಾಡಿದ್ದರು.
ಕೋಮು ಸೌಹಾರ್ದತೆ ಅಂಗವಾಗಿ ಕಳೆದ ವಾರ ಪಟ್ಟಣದ ಮುಸ್ಲಿಮರು ಮಹಾಗಣಪತಿಗೆ ವಿಶೇಷ ಪ್ರಜೆ ಸಲ್ಲಿಸಿ ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಮುನ್ನುಡಿ ಬರೆದಿದ್ದರು. ಆದರೂ ಪಟ್ಟಣ ಪೊಲೀಸರು ಮುಖ್ಯ ರಸ್ತೆಯ ಮಸೀದಿ ಬಳಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಿದ್ದರು.
ಸಂಜೆ ಪಟ್ಟಣದ ಹೊರವಲಯದ ದೇವೀರಮ್ಮಣಿ ಕೆರೆಯಲ್ಲಿ ಮಹಾ ಗಣಪತಿಯ ವಿಸರ್ಜನೆ ನಡೆಯಿತು.