ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ 14 ಕೋಟಿ ರು. ಅಂದಾಜು ವೆಚ್ಚದಲ್ಲಿ ಸುಸಜ್ಜಿತ ಒಳಾಂಗಣ ಕ್ರೀಡಾಂಗಣ ನಿರ್ಮಿಸಿ ಅದಕ್ಕೆ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರಿಟ್ಟಿತು.
ಒಳಾಂಗಣ ಕ್ರೀಡಾಂಗಣದಲ್ಲಿ ಸುಸಜ್ಜಿತ ಜಿಮ್, ಈಜುಕೋಳ, ಟೆನ್ನಿಸ್, ಟೇಬಲ್ ಟೆನ್ನಿಸ್ ಕೋರ್ಟ್, ಕಬಡ್ಡಿ ಆಟದ ಮೈದಾನ, ಯೋಗಾಸನ ಮುಂತಾದ ಹಲವು ಕ್ರೀಡಾ ಸೌಲಭ್ಯಗಳಿದ್ದರೂ ನಿರ್ವಹಣೆ ಕೊರತೆಯಿಂದ ನಲುಗುತ್ತಿತ್ತು.ಶಾಸಕ ಎಚ್.ಟಿ.ಮಂಜು ಅವರು ಅಧಿವೇಶದಲ್ಲಿ ವಿಷಯ ಪ್ರಸ್ತಾಪಿಸಿ ಸ್ಟೇಡಿಯಂ ಸುಧಾರಣೆ ಬಗ್ಗೆ ಸದನದಲ್ಲಿ ಮುಖ್ಯಮಂತ್ರಿಗಳಿಂದ ಉತ್ತರ ಪಡೆದಿದ್ದರು. ಸದನದಲ್ಲಿ ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 18ರಿಂದ ಜಾರಿಗೆ ಬರುವಂತೆ ನಿರ್ವಹಣೆ ಜವಾಬ್ದಾರಿಯನ್ನು ಮಿತ್ರ ಫೌಂಡೇಷನ್ ಸಂಸ್ಥೆಗೆ ವಹಿಸಿದ್ದು, ಸಂಸ್ಥೆ ಅಧ್ಯಕ್ಷ ವಿಜಯರಾಮೇಗೌಡ ಸ್ಟೇಡಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈಜುಕೊಳದ ನೀರು ಪಾಚಿಕಟ್ಟಿದೆ. ಇದರ ನಿರ್ವಹಣಾ ಯಂತ್ರಗಳು ಸೇರಿ ಎಲ್ಲಾ ಘಟಕಗಳ ಪರಿಶೀಲನೆ ಮಾಡಿದ್ದೇನೆ. ತಾಲೂಕಿನ ಕ್ರೀಡಾಪಟುಗಳನ್ನು ಉತ್ತೇಜಿಸುವ ಕೋಚಿಂಗ್ ಸೆಂಟರ್ ಆಗಿ ರೂಪಿಸುವುದು ನನ್ನ ಬಯಕೆ. ಈಗಾಗಲೇ ಅಂತರ ರಾಷ್ಟ್ರೀಯ ಮಟ್ಟದ ಇಬ್ಬರು ಕ್ರೀಡಾಪುಟಗಳನ್ನು ಸಂಪರ್ಕಿಸಿದ್ದು, ಅವರ ಮೂಲಕ ಒಳಾಂಗಣ ಕ್ರೀಡಾಂಗಣದಲ್ಲಿ ಬೇಕಾದ ಉತ್ತಮ ಸೌಲಭ್ಯಗಳ ಬಗ್ಗೆ ಮಾರ್ಗದರ್ಶನ ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದರು.
ತಾಲೂಕಿನ ಮೂರ್‍ನಾಲ್ಕು ಮಂದಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳಿದ್ದಾರೆ. ಶಾಸಕರ ಸಹಕಾರ ಪಡೆದು ಸೂಕ್ತ ದಿನಾಂಕ ನಿಗಧಿ ಪಡಿಸಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳನ್ನು ಗೌರವಿಸುವ ಮೂಲಕ ಸ್ಟೇಡಿಯಂಗೆ ಹೊಸ ಕಾಯಕಲ್ಪ ನೀಡುವುದಾಗಿ ತಿಳಿಸಿದರು.ಈ ವೇಳೆ ಮುಖಂಡರಾದ ಬಲ್ಲೇನಹಳ್ಳಿ ರಮೇಶ್, ಬಸವರಾಜು, ಅಜಯ್ ಮತ್ತಿತರರಿದ್ದರು.