ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಕೆಪಿಎಸ್ ಶಾಲೆ ಆವರಣದಲ್ಲಿ ವೃತ್ತವಾರು 12 ಮತಗಟ್ಟೆ ಸ್ಥಾಪಿಸಲಾಗಿತ್ತು. ಬ್ಯಾಂಕ್‌ನಲ್ಲಿ 10,500 ಷೇರುದಾರರಿದ್ದು, ವಿವಿಧ ಕಾರಣಗಳಿಂದ 4444 ಮತದಾರರು ಅನರ್ಹಗೊಂಡ ಪರಿಣಾಮ 1761 ಷೇರುದಾರರಿಗೆ ಮತದಾನದ ಹಕ್ಕು ನೀಡಲಾಗಿತ್ತು.
ಬ್ಯಾಂಕ್‌ನಲ್ಲಿ ಒಟ್ಟು 14 ನಿರ್ದೇಶಕ ಸ್ಥಾನಗಳಿದ್ದು ಎರಡು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದ ಹಿನ್ನೆಲೆಯಲ್ಲಿ 12 ಸ್ಥಾನಗಳಿಗೆ ಚುನಾವಣೆ ನಡೆಯಿತು. ಒಟ್ಟು 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಮತದಾನದ ಹಕ್ಕು ಹೊಂದಿದ್ದ 1761 ಮತದಾರರಲ್ಲಿ 1426 ಮತದಾರರು ತಮಗೆ ನಿಗದಿಯಾಗಿದ್ದ ವಿವಿಧ ವೃತ್ತಗಳ ಮತಗಟ್ಟೆ ಕೇಂದ್ರದಲ್ಲಿ ಮತ ಚಲಾಯಿಸಿದರು. ಮತದಾನದ ಹಕ್ಕಿನಿಂದ ವಂಚಿತರಾದ 1349 ಮತದಾರರು ರಾಜ್ಯ ಹೈಕೋರ್ಟ್ ಮೂಲಕ ಮತದಾನದ ಹಕ್ಕು ಪಡೆದು ಮತ ಚಲಾಯಿಸಿದರು. ಇದರಿಂದ ಒಟ್ಟಾರೆ 2775 ಮಂದಿ ವಿವಿಧ ಮತಗಟ್ಟೆ ಕೇಂದ್ರಗಳಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಶಾಸಕ ಎಚ್.ಟಿ.ಮಂಜು ತಮ್ಮ ಪತ್ನಿ ರಮಾ ಜೊತೆಗೂಡಿ ಮತ ಚಲಾಯಿಸಿದರೆ, ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ವಿಜಯರಾಮೇಗೌಡ, ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ಪುರಸಭೆ ಅಧ್ಯಕ್ಷೆ ಪಂಕಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಹರಳಹಳ್ಳಿ ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕೀರಾಂ ಸೇರಿದಂತೆ ಹಲವು ಮುಖಂಡರು ಮತಚಲಾಯಿಸಿ ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
ತಾಪಂ ಇಒ ಕೆ.ಸುಷ್ಮಾ ಚುನಾವಣಾ ಅಧಿಕಾರಿಯಾಗಿದ್ದು, ಪೊಲೀಸ್ ನಿರೀಕ್ಷಕಿ ಸುಮಾರಾಣಿ ಮತ್ತು ಪಿ.ಎಸ್.ಐ ನವೀನ್ ನೇತೃತ್ವದ ಪೊಲೀಸರ ಪಡೆ ಶಾಂತಿಯುತ ಚುನಾವಣೆಗೆ ಅಗತ್ಯ ಕ್ರಮ ವಹಿಸಿತ್ತು.