ಕೆ.ಆರ್.ಪೇಟೆ: ನವರಾತ್ರಿ ನಿಮಿತ್ತ ಚಂದ್ರಘಂಟಾ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ

KannadaprabhaNewsNetwork |  
Published : Oct 09, 2024, 01:38 AM IST
7ಕೆಎಂಎನ್ ಡಿ15 | Kannada Prabha

ಸಾರಾಂಶ

ದುಷ್ಟ ಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಕಾಣುವ ಚಂದ್ರಘಂಟಾ ದೇವಿ ಸದೃಢ ಸಮಾಜಕ್ಕೆ ಸರ್ವರ ಇಷ್ಟಾರ್ಥಗಳನ್ನು ಈಡೇರಿಸಲಿ. ಇಂದಿನ ಒತ್ತಡದ ಬದುಕಿನಲ್ಲಿ ಜೀವನ ನಡೆಸುತ್ತಿರುವ ನಾವುಗಳು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಕಾಣಬೇಕೆಂದರೆ ದೇವರುಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಬಿಜಿಎಸ್ ಎಜುಕೇಷನ್ ಸೆಂಟರ್ ಶಾಲೆಯಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆದವು.

ಚಂದ್ರಘಂಟಾ ದೇವಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಿದ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್. ರಾಮಕೃಷ್ಣೇಗೌಡ, ಅಧಿದೇವತೆ ಶ್ರೀಚಾಮುಂಡೇಶ್ವರಿ ತಾಯಿ ಮೂರ್ತಿಗೆ ಹಾಗೂ ಜಗದ್ಗುರು ಶ್ರೀಬಾಲಗಂಗಾಧರನಾಥ ಸ್ವಾಮಿ ಪುತ್ಥಳಿಗೂ ಅಭಿಷೇಕ, ಲೋಕ ಕಲ್ಯಾಣಕ್ಕಾಗಿ ಹೋಮ - ಹವನಗಳನ್ನು ನೆರವೇರಿಸಿ ಮಾತನಾಡಿದರು.

ದುಷ್ಟ ಶಕ್ತಿಗಳಿಗೆ ಸಿಂಹಸ್ವಪ್ನವಾಗಿ ತನ್ನ ಭಕ್ತರನ್ನು ಪ್ರೀತಿಯಿಂದ ಕಾಣುವ ಚಂದ್ರಘಂಟಾ ದೇವಿ ಸದೃಢ ಸಮಾಜಕ್ಕೆ ಸರ್ವರ ಇಷ್ಟಾರ್ಥಗಳನ್ನು ಈಡೇರಿಸಲಿ. ಇಂದಿನ ಒತ್ತಡದ ಬದುಕಿನಲ್ಲಿ ಜೀವನ ನಡೆಸುತ್ತಿರುವ ನಾವುಗಳು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಕಾಣಬೇಕೆಂದರೆ ದೇವರುಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದರು.

ನವರಾತ್ರಿ ಹಿಂದೂ ಧರ್ಮದ ಪ್ರಮುಖ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರ ಎಂದು ಕರೆಯುತ್ತಾರೆ. 9 ರಾತ್ರಿಗಳಲ್ಲಿ ಶ್ರೀ ಚಾಮುಂಡೇಶ್ವರಿಯ ದೇವಿ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. 10ನೇ ದಿನ ವಿಜಯ ದಶಮಿ ದಿನ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿ ಶಮಿಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ ಎಂದರು.

ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಮೂರ್ತಿ ಮೆರವಣಿಗೆಯು ಮೈಸೂರಿನಲ್ಲಿ ನಡೆಯುತ್ತದೆ. ಮೈಸೂರು ದಸರಾ ಉತ್ಸವವು ಜಗತ್ಪಸಿದ್ಧಿ ಪಡೆದಿದೆ. ನಾಗಮಂಗಲ ತಾಲೂಕಿನ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಈಗಾಗಲೇ ನವರಾತ್ರಿ ಪೂಜಾ ಕಾರ್ಯಕ್ರಮಗಳು ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ಆರಂಭಗೊಂಡಿದೆ. ಅ.8ರಂದು ಶ್ರೀಮಠದಲ್ಲಿ ಕೆ.ಆರ್.ಪೇಟೆ ತಾಲೂಕಿನ ಭಕ್ತರಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಎ.ಎನ್.ಜಾನಕಿರಾಮ್, ಮನ್ಮುಲ್ ನಿರ್ದೇಶಕ ಡಾಲು ರವಿ, ಕಸಪಾ ಮಾಜಿ ಅಧ್ಯಕ್ಷ ಹರಿಚರಣ್ ತಿಲಕ್, ಪುರಸಭಾ ಮಾಜಿ ಸದಸ್ಯ ಕೆ.ಆರ್.ನೀಲಕಂಠ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೆಕೆರೆ ಮಂಜುನಾಥ್, ಗ್ರಾಪಂ ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗದ ಅಧ್ಯಕ್ಷ ಗಂಜೀಗೆರೆ ಮಹೇಶ್, ಹೇಮಗಿರಿ ಶಾಖಾ ಮಠದ ವ್ಯಾಪ್ತಿಗೆ ಬರುವ ಬಿಜಿಎಸ್ ಶಾಲಾ ಪ್ರಾಂಶುಪಾಲರು ಶಿಕ್ಷಕರು ಸೇರಿದಂತೆ ಇತರರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ