ರಾಮನಗರ: ಮಾಜಿ ಶಾಸಕ ಕೆ.ರಾಜು ಅವರು ಮನೆಯಲ್ಲಿದ್ದ ಚಿನ್ನಾಭರಣ ಅಡ ಇಟ್ಟು, ಅನ್ಯರ ಬಳಿ ಬಡ್ಡಿಗೆ ಸಾಲ ಪಡೆದು ಜೆಡಿಎಸ್ ಪಕ್ಷ ಕಟ್ಟಿದ್ದರು. ಅವರು ಎಂದೂ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಟಿಕೆಟ್ ಕೇಳಿರಲಿಲ್ಲ, ಕುಮಾರಸ್ವಾಮಿ ಅವರೇ ಒತ್ತಾಯ ಮಾಡಿ ಚುನಾವಣೆಗೆ ನಿಲ್ಲಿಸಿದ್ದರು.ಇದೆಲ್ಲವನ್ನು ಅರಿಯದ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಕೆ.ರಾಜು ಅವರನ್ನು ಟೀಕಿಸುವುದು ಸರಿಯಲ್ಲ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವಥ್ ಅಸಮಾಧಾನ ವ್ಯಕ್ತಪಡಿಸಿದರು.
ಕೆ.ರಾಜು ಯಾರ ಮರ್ಜಿನಲ್ಲಿ ಬೆಳೆದವರಲ್ಲ. ಆ ಪಕ್ಷಕ್ಕಾಗಿ ತನು, ಮನ, ಧನ ತ್ಯಾಗ ಮಾಡಿದ್ದಾರೆ. ಅವರು ರಾಜಕಾರಣ ಆರಂಭಿಸಿದಾಗ ಈ ಟೀಕಿಸುತ್ತಿರುವವರ ಪೈಕಿ ಅನೇಕರು ಇನ್ನು ಹುಟ್ಟಿರಲೇ ಇಲ್ಲ. ಈ ಹಿಂದೆ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಕೆ.ರಾಜು ಅವರು ಸೋತಿದ್ದು ನಿಜ. ಆದರೆ, ಅವರನ್ನು ಸೋಲಿಸುವಂತೆ ಎಚ್.ಡಿ.ಕುಮಾರಸ್ವಾಮಿ ಕಾರ್ಯಕರ್ತರಿಗೆ ಹೇಳಿದ್ದರು. ಇದಕ್ಕೆ ಅನೇಕ ಜೆಡಿಎಸ್ ಮುಖಂಡರೇ ಸಾಕ್ಷಿ ಇದ್ದಾರೆ ಎಂದು ಆರೋಪಿಸಿದರು.
ಪಕ್ಷ ನಿಷ್ಠೆ ಹೊಂದಿದ್ದ ಕೆ.ರಾಜು :ಮಾಜಿ ಶಾಸಕ ಕೆ.ರಾಜು ಅವರು ಪಕ್ಷನಿಷ್ಟೇ, ಸ್ವಾಮಿ ನಿಷ್ಟೇಯಿಂದ ಬೇರೆಯವರಿಗೆ ಸುಳ್ಳು ಮೋಸ ಮಾಡದೆ ನೇರವಾದಿಯಾಗಿ ನಡೆದವರು ರಾಜಣ್ಣ ತಮ್ಮ ರಾಜಕೀಯದಲ್ಲಿ ಹಲವಾರು ಜನರಿಗೆ ಕೆಲಸ ಕೊಡಿಸಿ ಯಾರಿಂದಲೂ ಬಿಡಿಗಾಸಿಗೆ ಆಸೆ ಬಿದ್ದವರಲ್ಲ. ಯಾವ ಅಧಿಕಾರಿ ಮುಂದೆಯೂ ಕೈಚಾಚಿ ನಿಂತವರಲ್ಲ. ಇಂದು ಕೆ.ರಾಜು ಅವರ ವಿರುದ್ದ ಮಾತನಾಡುವವರು ತಮ್ಮ ಆತ್ಮಸಾಕ್ಷಿ ಇಟ್ಟು ಮಾತನಾಡಲಿ ಎಂದು ತಿಳಿಸಿದರು.
ನಾವೇ ಸಾಕ್ಷಿ ಇದ್ದೇವೆ:
ಸುದ್ದಿಗೋಷ್ಠಿಯಲ್ಲಿ ರಾ.ಚ.ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಶೇಖರ್, ತಾಪಂ ಮಾಜಿ ಅಧ್ಯಕ್ಷ ಜಗದೀಶ್, ಭದ್ರಯ್ಯ, ಮುಖಂಡರಾದ ಕೆಂಪೇಗೌಡನದೊಡ್ಡಿ ಮಂಚೇಗೌಡ, ದೇವರದೊಡ್ಡಿ ಚಂದ್ರಗಿರಿ, ಆಲೇಮರದದೊಡ್ಡಿ ಕರಿಯಪ್ಪ ಇದ್ದರು.
ಎಚ್ಡಿಕೆ ರಾಮನಗರಕ್ಕೆ ಬರಲು ಕೆ.ರಾಜು ಕಾರಣ1999ರಲ್ಲಿ ಸಾತನೂರು ವಿಧಾನಸಭೆ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಎದುರು ಹೀನಾಯವಾಗಿ ಕುಮಾರಸ್ವಾಮಿ ಅವರು ಸೋತಾಗ ರಾಮನಗರಕ್ಕೆ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಬಂದು ಅವರ ನಾಯಕತ್ವದಲ್ಲಿ ಚುನಾವಣೆ ನಡೆಸಬೇಕೆಂದು ನಿರ್ಧಾರ ತೆಗೆದುಕೊಂಡವರಲ್ಲಿ ಕೆ.ರಾಜು ಪ್ರಮುಖರು. 1999-2004ರವರೆಗಿನ ಗ್ರಾಪಂ, ತಾಪಂ, ಜಿಪಂ, ಸಹಕಾರ ಸಂಘಗಳ ಚುನಾವಣೆಗಳಿಗೆ ತಮ್ಮ ಸ್ವಂತ ಹಣ ಖರ್ಚು ಮಾಡಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿ ತಾವು ಸಾಲಗಾರರಾಗಿದ್ದರು ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವತ್ಥ್ ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಅವರನ್ನು ಮತದಾರರು ತಿರಸ್ಕರಿಸಿದರು. ಜೆಡಿಎಸ್ ಪ್ರಮುಖರು ಕಾಂಗ್ರೆಸ್‌ಗೆ ಬುಕ್ ಆಗಿದ್ದರಿಂದ ಸೋಲಾಯಿತೆಂದು ನಿಖಿಲ್ ಅವರೇ ಅಪಪ್ರಚಾರ ಮಾಡಿದರು. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ನಿಷ್ಠೆಯಿಂದ ಶ್ರಮಿಸಿದ್ದೇವೆ. ತಮ್ಮ ಶ್ರಮ ಸತ್ಯ ಎಂಬುದಕ್ಕೆ ನಗರದೇವತೆ ಚಾಮುಂಡೇಶ್ವರಿ ಅಮ್ಮನವರ ಮುಂದೆ ಉಪ್ಪಿನ ಮೇಲೆ ನಿಂತು ಪ್ರಮಾಣ ಮಾಡುತ್ತೇವೆ. ನಿಖಿಲ್ ಹೇಳಿಕೆಯಿಂದ ಬೇಸೆತ್ತು ನಾವೆಲ್ಲ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದೇವೆ.
ರಾಮನಗರದಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.