ರಾಮನಗರ: ಸೇವಾ ಹಿರಿತನವನ್ನು ಪರಿಗಣಿಸಿ ಬಡ್ತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ನೀರುಗಂಟಿಗಳು, ಜವಾನ, ಸ್ವಚ್ಛಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರೆಂದು ಘೋಷಿಸಬೇಕು. ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ 6 ಲಕ್ಷ ಇಡಗಂಟು ಕೊಡಬೇಕು. ಗ್ರಾಪಂಗಳಲ್ಲಿ ಠರಾವು ಮೂಲಕ ನೇಮಿಸಿರುವ ಸಿಬ್ಬಂದಿಗೆ ಜಿಪಂನಿಂದ ಅನುಮೋದನೆ ಆಗದಿದ್ದರೂ ಅಂತಹ ಸಿಬ್ಬಂದಿಗೂ ಇಡಗಂಟು ನೀಡಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ತರಬೇತಿ ಪಡೆದಿರುವ ಎಲ್ಲಾ ಸ್ವಚ್ಛ ವಾಹಿನಿ ನೌಕರರಿಗೆ ಕೆಲಸ ನೀಡಬೇಕು. ಒಡಂಬಡಿಕೆ ಪತ್ರ ಮತ್ತು ಪ್ರತಿ ವರ್ಷದ ನವೀಕರಣ ಪದ್ಧತಿ ರದ್ದುಪಡಿಸಬೇಕು. 15ನೇ ಹಣಕಾಸಿನಲ್ಲಿ ವೇತನ ಪಾವತಿ ಮಾಡಬೇಕು. ಪ್ರತಿಯೊಂದು ಪಂಚಾಯಿತಿಗೆ ಒಬ್ಬರೇ ಚಾಲಕರೆಂದು ಪರಿಗಣಿಸಿ 15 ಸಾವಿರ ವೇತನ ನಿಗದಿ ಮಾಡಬೇಕು. ಎರಡನೇ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅವಕಾಶ ನೀಡಿರುವುದು ಸ್ವಾಗತ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಗಳನ್ನು ಮುಂದುವರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ , ಪ್ರಧಾನ ಕಾರ್ಯದರ್ಶಿ ಜಯಲಿಂಗು, ರಾಮನಗರ ತಾಲೂಕು ಅಧ್ಯಕ್ಷ ರಾಜೇಶ್ , ಚನ್ನಪಟ್ಟಣ ತಾಲೂಕು ಅಧ್ಯಕ್ಷ ಸುರೇಶ್ , ಮಾಗಡಿ ತಾಲೂಕು ಅಧ್ಯಕ್ಷ ನಾಗರಾಜು, ಕನಕಪುರ ತಾಲೂಕು ಅಧ್ಯಕ್ಷ ಪರಶಿವ, ಪದಾಧಿಕಾರಿಗಳಾದ ನಂದಕುಮಾರ್ , ಜೈಶಂಕರ್ , ಯೋಗಲಿಂಗ ಮತ್ತಿತರರು ಭಾಗವಹಿಸಿದ್ದರು.
ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು.