ಕನ್ನಡಪ್ರಭ ವಾರ್ತೆ ಮೈಸೂರು
ಪರಿಸರ ಕಾಳಜಿ ಮತ್ತು ಕನ್ನಡ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮೈಸೂರು ವಿವಿ ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಹೇಳಿದರು.ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅರಿವು ಸಂಶೋಧನಾ ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಪ್ರಬಂಧ ಮಂಡನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಕ್ಕಳು ಹೇಗಿದ್ದರೂ ಶಾಲೆಯಲ್ಲಿ ಇಂಗ್ಲಿಷ್‌ಕಲಿತೇ ಕಲಿಯುತ್ತಾರೆ. ಆದ್ದರಿಂದ ನಾವು ಮನೆಯಲ್ಲಿ ಕನ್ನಡದಲ್ಲಿ ಮಾತನಾಡಬೇಕು, ಕನ್ನಡದಲ್ಲಿ ಮಾತನಾಡಲು ಪ್ರೇರೇಪಿಸಬೇಕು. ನಾವು ಇಂಗ್ಲಿಷ್ ನಲ್ಲಿಯೇ ವ್ಯವಹರಿಸಲು ಹೋದರೆ ಬಾಂಧವ್ಯವೂ ಇರುವುದಿಲ್ಲ, ಭಾಷೆಯೂ ಉಳಿಯುವುದಿಲ್ಲ ಎಂದರು.ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಪರಿಸ್ಥಿತಿ ಶೋಚನೀಯವಾಗಿದೆ. ತಮಿಳರು ಅಥವಾ ತೆಲಗಿನವರು ಇಬ್ಬರು ಇದ್ದರೆ ಅವರದೇ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ಇಬ್ಬರು ಕನ್ನಡಿಗರು ಇದ್ದರೆ ಇಂಗ್ಲಿಷ್ ಅಥವಾ ಬೇರೆ ಭಾಷೆಯಲ್ಲಿ ಮಾತನಾಡುತ್ತಾರೆ. ಕನ್ನಡಿಗರಲ್ಲೇ ಏಕೆ ಇಂತಹ ಮನಸ್ಥಿತಿ. ಈಗಿನ ಮಕ್ಕಳಿಗೂ ಯಾಕೆ ಮಾತನಾಡಲು ಇಷ್ಟವಾಗುತ್ತಿಲ್ಲವೋ ಗೊತ್ತಿಲ್ಲ. ಆದರೆ ಕನ್ಮಡ ಮಾತನಾಡಿದರೆ ಮಾತ್ರ ಉಳಿಯುತ್ತದೆ ಎಂದು ಅವರು ಹೇಳಿದರು.
ಒಂದು ಕನ್ನಡಿಗರು ಮಾತನಾಡಲು ಶುರುವಿಟ್ಟರೂ, ಇಂಗ್ಲಿಷ್ ಬಳಕೆ ಹೆಚ್ಚಿರುತ್ತದೆ. ಇಲ್ಲವೇ ಅಲ್ಪಪ್ರಾಣ, ಮಹಾಪ್ರಾಣಗಳ ತಪ್ಪೆ ಹೆಚ್ಚು ಕಂಡುಬರುತ್ತದೆ. ತಮಿಳರು ಅವರ ಬೇರಿಗೆ ಅಂಟಿಕೊಳ್ಳುತ್ತಾರೆ. ಆದರೆ ನಾವು ಕನ್ನಡ ಬೆಳೆಸದಿದ್ದರೆ ನಿಮಗೂ ಭವಿಷ್ಯ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.ನಾವು ಪರಿಸರದ ಬಗ್ಗೆಯೂ ಕಾಳಜಿ ಹೊಂದಬೇಕು. ಆದಷ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬೇಕು. ಪ್ಲಾಸ್ಟಿಕ್‌ಮುಕ್ತ ಕ್ಯಾಂಪಸ್ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ನಾವು ಸಾಧ್ಯವಾದಷ್ಟು ಆಗಾಗ ಸ್ವಚ್ಛತಾ ಆಂದೋಲನ ಹಮ್ಮಿಕೊಂಡು ಅರಿವು ಮೂಡಿಸುತ್ತೇವ. ಪ್ಲಾಸ್ಟಿಕ್‌ಬಳಕೆಯಿಂದ ನಮ್ಮ ಜೀವರಾಶಿ ನಾಶವಾಗುತ್ತದೆ. ನಮ್ಮ ಜೀವನ ಶೈಲಿ ಮತ್ತು ಯೋಚನಾಮನೋಭಾವ ಬದಲಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕರ್ವಾಲೋ ಕಾದಂಬರಿಯಲ್ಲಿನ ಮಂದಣ್ಣನಿಗೆ ಇರುವ ಜ್ಞಾನ ಅಪಾರ ಎಂಬುದನ್ನು ತಿಳಿಯಬೇಕು. ನಗರ ಪ್ರದೇಶದ ಜನರಿಗೆ ಕಾಡಿನ ಬಗ್ಗೆ ಹೆಚ್ಚೇನು ತಿಳಿದಿರುವುದಿಲ್ಲ. ಆದರೆ ಗ್ರಾಮೀಣ ಜನರಿಗೆ ಅದರ ಮಹತ್ವದ ಅರಿವಿರುತ್ತದೆ. ಪಶ್ಚಿಮಘಟ್ಟದಂತ ನಿತ್ಯಹರಿದ್ವರ್ಣ ಕಾಡು ಬೇರೆ ಯಾವ ದೇಶಕ್ಕೂ ಲಭ್ಯವಿಲ್ಲ. ನಮಗಿರುವ ಸಮೃದ್ಧತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿಯಲ್ಲಿನ ಜೀವ ವೈವಿಧ್ಯತೆ ಕುರಿತು ಕೆ.ಕೆ. ಶೇಖರ್, ಡಿ.ಎನ್. ಕೃಷ್ಣಮೂರ್ತಿ ಅವರ ರಾಜಯೋಗಿ ಕೃತಿಯ ಕುರಿತು ಎಸ್. ಶ್ವೇತಾ ಪ್ರಬಂಧ ಮಂಡಿಸಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎನ್.ಕೆ. ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕ ಡಾ.ಎಚ್.ಎಸ್. ಸತ್ಯನಾರಾಯಣ ಅತಿಥಿಯಾಗಿ ಪಾಲ್ಗೊಂಡಿದ್ದರು. ಎಚ್.ಆರ್. ಕಾವ್ಯ ನಿರೂಪಿಸಿದರು. ಅಭಿಷೇಕ್ ಸ್ವಾಗತಿಸಿದರು. ಕೆ.ಎಸ್. ಶೇಷಣ್ಣ ಸ್ವಾಮಿ ಪ್ರಾರ್ಥಿಸಿದರು.