ಕನ್ನಡಪ್ರಭ ವಾರ್ತೆ ಮೈಸೂರು
ಸ್ಪರ್ಧಾತ್ಮಕ ಜಗತ್ತಿನ ಮ್ಯಾರಾಥಾನ್ ನಲ್ಲಿ ಗೆಲುವು ಸಾಧಿಸಲು ಪ್ರಯತ್ನ ಗಟ್ಟಿಯಾಗಿರಬೇಕು. ಛಲಬಿಡದೆ ಪ್ರಯತ್ನ ಪಟ್ಟು ಗೆಲುವು ಸಾಧಿಸಿ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ ಟಿಸಿ) ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಕಿವಿಮಾತು ಹೇಳಿದರು.ನಗರದ ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೆ-ಸೆಟ್ ಮತ್ತು ಯಜಿಸಿ-ನೆಟ್ ಪರೀಕ್ಷೆಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಗೆಲುವು ಸುಲಭವಲ್ಲ, ಭಯ ಇರಬೇಕು. ಆ ಭಯ ನಿಮ್ಮನ್ನು ಸದಾ ಎಚ್ಚರಗೊಳಿಸಿ ಗೆಲುವಿನ ದಾರಿ ತೋರಿಸಬೇಕು. ಹೀಗಾಗಿ, ಬದಲಾದ ಸಮಯ ಮತ್ತು ಪ್ರಯತ್ನಕ್ಕೆ ಬದ್ಧರಾಗಿರಿ ಎಂದರು.
ಕೆ-ಸೆಟ್, ಯುಜಿಸಿ-ನೆಟ್ ಪರೀಕ್ಷೆ ಯುಪಿಎಸ್ಸಿ, ಕೆಪಿಎಸ್ಸಿ ಪರೀಕ್ಷೆಗಳಷ್ಟೆ ಕಠಿಣವಾದದ್ದು, ಇದರ ಅನುಭವ ನನಗಿದೆ. ಹೀಗಾಗಿ ಸಮಯ ವ್ಯರ್ಥ ಮಾಡದೆ ಇಂದಿನಿಂದಲೇ ಪಠ್ಯಕ್ರಮ ಕಡೆಗೆ ಗಮನಹರಿಸಿ. ಹಿಂದೆ ಇದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೂ ಕಷ್ಟವಾಗುತ್ತಿತ್ತು. ಯಾವುದೇ ಸೌಲಭ್ಯ ಹಾಗೂ ಸವಲತ್ತು ಇರುತ್ತಿರಲಿಲ್ಲ. ಆದರೆ, ಇವಾಗ ಹಾಗಿಲ್ಲ. ಎಲ್ಲಾ ಸೌಲಭ್ಯಗಳಿವೆ ಎಂದು ಅವರು ಹೇಳಿದರು.ಮಾಹಿತಿ ತಂತ್ರಜ್ಞಾನ, ಚಾಟ್ ಜಿಪಿಟಿ ಮತ್ತು ಎಐ ಅಂತಹ ಡಿಜಿಟಲ್ ಸಾಧನಗಳಿವೆ. ಚಾಟ್ ಜಿಟಿಪಿಯಲ್ಲಿ ನೀವು 10 ಪ್ರಶ್ನೆ ಕೇಳಿದರೆ 20 ಹೆಚ್ಚು ಉತ್ತರ ಸಹಿತ ಪ್ರಶ್ನೆ ಸಿಗುತ್ತವೆ. ಇವುಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಪರೀಕ್ಷೆಯಲ್ಲಿ ಗೆಲುವು ಸಾಧಿಸಿ ಎಂದರು.
ಸ್ಪರ್ಧಾತ್ಮಕ ಪರೀಕ್ಷೆ ಟ್ರಬಲ್ ಸೂಟರ್. ವರ್ಷ ಪೂರ್ತಿ ಓದಿದ್ದು 3 ಗಂಟೆಯಲ್ಲಿ ತೋರಿಸಬೇಕು. ಹೀಗಾಗಿ ನೀವು ಏನನ್ನು ಓದಬೇಕು, ಎಷ್ಟು ಓದಬೇಕು, ಯಾವಾಗ ಓದಬೇಕು ಎನ್ನುವುದನ್ನು ನಿಗದಿ ಮಾಡಿಕೊಳ್ಳಿ. ಈ ಮೂಲಕ ಗುರಿ ತಲುಪಲು ಸ್ಪಷ್ಟ ದಾರಿ ಹುಡುಕಿಕೊಳ್ಳಬೇಕು ಎಂದು ಅವರು ಹೇಳಿದರು.ಪಠ್ಯಕ್ರಮವನ್ನು ದಿನ ನೋಡಬೇಕು. ಹಂತ ಹಂತವಾಗಿ ಅದನ್ನು ಪೂರ್ಣಗೊಳಿಸುತ್ತ ಹೋಗಬೇಕು. ಅಂತಿಮವಾಗಿ ಗುರಿ ತಲುಪುವವರೆಗೂ ಛಲ ಬಿಡಬಾರದು. ಈ ಮಧ್ಯೆ ಮೊಬೈಲ್ ನಿಮ್ಮನ್ನು ದಾರಿ ತಪ್ಪಿಸುತ್ತದೆ. ಸ್ಕ್ರಾಲ್ ಮಾಡುವ ಕೆಟ್ಟ ಚಾಳಿ ನಿಮ್ಮನ್ನು ದಾರಿ ತಪ್ಪಿಸುತ್ತಿದೆ. ಇದರಿಂದ ನಿದ್ರೆ ಸೇರಿದಂತೆ ಭವಿಷ್ಯಕ್ಕೂ ಕುತ್ತುಂಟಾಗಲಿದೆ. ಗೆಲವು ಸಿಗುವವರೆಗೂ ಎಲ್ಲವನ್ನು ತೊರೆಯಿರಿ ಎಂದು ಅವರು ಎಚ್ಚರಿಸಿದರು.
ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಎಸ್.ಕೆ. ನವೀನ್ ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್. ಆನಂದ್ ಕುಮಾರ್, ಡೀನ್ ಗಳಾದ ಪ್ರೊ. ರಾಮನಾಥಂ ನಾಯ್ಡು, ಡಾ.ಎನ್.ಆರ್. ಚಂದ್ರೇಗೌಡ, ಹಣಕಾಸು ಅಧಿಕಾರಿ ಡಾ.ಎಸ್. ನಿರಂಜನ್ ರಾಜ್, ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಮೊದಲಾದವರು ಇದ್ದರು.