ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಕೆ.ಶೆಟ್ಟಹಳ್ಳಿ ಗ್ರಾಮದ ಅಭಿವೃದ್ಧಿಗೆ ನನ್ನ ಕೈಲಾದಷ್ಟು ನೆರವು ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭರವಸೆ ನೀಡಿದರು.ಸಮೀಪದ ಕೆ.ಶೆಟ್ಟಹಳ್ಳಿಯಲ್ಲಿ ಶ್ರೀ ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಘದ ವತಿಯಿಂದ ನೇತಾಜಿ ಜನ್ಮ ದಿನಾಚರಣೆ ಮತ್ತು ಸಂಘದ 25ನೇ ವರ್ಷದ ಬೆಳ್ಳಿ ಹಬ್ಬದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಈ ಗ್ರಾಮವು ನನ್ನ ತಂದೆ ಮಾಜಿ ಸಂಸದ ದಿ.ಜಿ.ಮಾದೇಗೌಡ ಅವರಿಗೆ ಬಹಳ ಪ್ರೀತಿ ಪಾತ್ರವಾಗಿದ್ದು, ಅವರ ರಾಜಕೀಯ ಏಳ್ಗೆಗೆ ಗ್ರಾಮವು ಸಾಕಷ್ಟು ಶ್ರಮಿಸಿದೆ. ಮಾದೇಗೌಡರು ಇಲ್ಲಿನ ಜನರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಗೌಡರ ಹೋರಾಟಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಿದ್ದರು. ಜತೆಗೆ ಬಹಳಷ್ಟು ಮಂದಿ ಆತ್ಮೀಯರಿದ್ದರು. ಹೆಚ್ಚಿನ ಒಡನಾಟ ಈ ಗ್ರಾಮದವರ ಜತೆ ಇತ್ತು. ನನಗೂ ಕೂಡ ಗ್ರಾಮದ ಬಗ್ಗೆ ವಿಶೇಷ ಕಾಳಜಿಯಿದ್ದು ಹೆಚ್ಚಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.ಸರಕಾರಿ ಇಲಾಖೆಯಲ್ಲಿ ನಿಮ್ಮ ಕೆಲಸಗಳು ಆಗಬೇಕಾದರೆ ನೇರವಾಗಿ ನನ್ನನ್ನು ಭೇಟಿ ಮಾಡಿ, ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸುವ ಕೆಲಸವನ್ನು ಮಾಡುತ್ತ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ. ನನ್ನ ಪರಿಷತ್ ಅವಧಿ ಇನ್ನು 4 ವರ್ಷಗಳಿದ್ದು, ಅಲ್ಲಿಯವರೆಗೆ ನನ್ನ ಅನುದಾನವನ್ನು ನಿಮ್ಮ ಗ್ರಾಮದ ಅಭಿವೃದ್ಧಿಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರ ಸಮುದಾಯ ಭವನ ಕಾಮಗಾರಿ ಪೂರ್ಣಗೊಳಿಸಲು ಅನುದಾನ ಕೊರತೆ ಇದೆ. ಅದಕ್ಕೆ ನಿಮ್ಮ ಅನುದಾನದಿಂದ ಹಣ ನೀಡಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಧು ಜಿ.ಮಾದೇಗೌಡರು 10 ಲಕ್ಷ ರು.ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮವನ್ನು ಶಾಸಕ ಡಿ.ಸಿ.ತಮ್ಮಣ್ಣ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ರೈತ ಮಹಿಳೆಯರಾದ ಸಣ್ಣಮ್ಮ, ಕಮಲಮ್ಮ ಮತ್ತು ಚಿಕ್ಕತಾಯಮ್ಮ ಅವರನ್ನು ಅಭಿನಂದಿಸಲಾಯಿತು.ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ. ಸಂದರ್ಶ, ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ, ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಸ್.ಕೆ. ಮಹದೇವು, ಗ್ರಾಪಂ ಸದಸ್ಯ ಸುರೇಂದ್ರ, ಸಂಘದ ಅಧ್ಯಕ್ಷ ಜೆಸಿಬಿ ಶಿವಲಿಂಗ, ಶೆಟ್ಟಹಳ್ಳಿ ಶಿವರಾಜು, ಎಸ್.ಟಿ. ಬೋರೇಗೌಡ, ಸತೀಶ್, ಹನುಮೇಗೌಡ, ಬೋರೇಗೌಡ, ಮಹೇಶ್, ಮನ್ಮುಲ್ ನಿರ್ದೇಶಕಿ ರೂಪ, ಪುರಸಭಾ ಸದಸ್ಯ ಮಹೇಶ್, ತಾಪಂ ಮಾಜಿ ಅಧ್ಯಕ್ಷ ಗೆಜ್ಜಲಗೆರೆ ಯೋಗೇಶ್, ಗ್ರಾಪಂ ಸದಸ್ಯರಾದ ತಿಮ್ಮಶೆಟ್ಟಿ, ಹರಳಹಳ್ಳಿ ಸುರೇಂದ್ರ, ಹನುಮೇಗೌಡ ಸೇರಿದಂತೆ ಮತ್ತಿತರರಿದ್ದರು.