ಕನ್ನಡಪ್ರಭ ವಾರ್ತೆ, ತುಮಕೂರು
ನಗರದ ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಸಂಘದಲ್ಲಿ ನಡೆದ ನುಡಿನಮನದಲ್ಲಿ ಮಾತನಾಡಿದ ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್, ತಳಸಮುದಾಯಗಳಿಗೆ ನಿರಂತರ ಪ್ರೇರಣೆಯಾಗಿದ್ದ ಕೆ.ಶಿವರಾಂ ಅವರು, ಐಎಎಸ್ ಹುದ್ದೆಗೆ ಅಗತ್ಯವಿರುವ ಇಂಗ್ಲಿಶ್ ಭಾಷೆಯ ಜ್ಞಾನವಿದ್ದರೂ ಕನ್ನಡದ ಮೇಲಿನ ಅಭಿಮಾನದಿಂದ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿಯೇ ಯುಪಿಎಸ್ಸಿ ಪರೀಕ್ಷೆ ಬರೆದು ಉದ್ಯೋಗವನ್ನು ಪಡೆದರು ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ದೊರೆಯುಬೇಕು ಎಂಬ ಮಹತ್ವ ಉದ್ದೇಶ ಹೊಂದಿದ್ದ ಕೆ.ಶಿವರಾಮ್ ಅಧಿಕಾರದ ಅವಧಿಯಲ್ಲಿ ಗುಡಿಸಲಲ್ಲಿ ಇದ್ದವರ ಪರವಾಗಿಯೇ ಯೋಚಿಸುತ್ತಿದ್ದರು. ಅವರ ಅಭ್ಯುದಯಕ್ಕಾಗಿ ಮಿಡಿಯುತ್ತಿದ್ದರು ಎನ್ನುವುದಕ್ಕೆ ಸಾಕಷ್ಟು ಜೀವಂತ ನಿದರ್ಶನಗಳು ರಾಜ್ಯದಲ್ಲೆಡೆ ಕಾಣಿಸುತ್ತವೆ. ಅಂತಹ ಜೀವಪರ ಅಧಿಕಾರಿಯಾಗಿ ಸಮುದಾಯ ಏಳ್ಗೆಗಾಗಿ ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.ರಾಮಾಂಜಿನಪ್ಪ ಮಾತನಾಡಿ, ದಲಿತ ಸಮುದಾಯದ ಮಕ್ಕಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಅನುವು ಆಗುವಂತೆ ಸರ್ಕಾರದ ಮನವೊಲಿಸಿ, ವಿದೇಶ ಸ್ಕಾಲರ್‌ಶಿಪ್ ಹೆಚ್ಚಳ ಮಾಡಿಸಿದ್ದಲ್ಲದೆ, ಶಿಕ್ಷಣದಿಂದ ಮಾತ್ರ ಯುವಜನತೆ ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ ಎಂಬುದನ್ನು ಬಲವಾಗಿ ನಂಬಿದ್ದರು. ಕೆ.ಶಿವರಾಮ್ ಅದಕ್ಕಾಗಿ ಕೌಶಲ್ಯ ತರಬೇತಿಯನ್ನು ಆರಂಭಿಸಿದರು. ಇಂತಹ ಜನಪರ ಕಾಳಜಿ ಅಧಿಕಾರಿ, ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲವೆಂಬುದು ನೋವಿನ ಸಂಗತಿ ಎಂದರು.