ಕಾವೇರಿ ನೀರಾವರಿ ನಿಗಮದ ಕಚೇರಿಗೆ ರೈತರಿಂದ ಮುತ್ತಿಗೆ, ಪ್ರತಿಭಟನೆ

KannadaprabhaNewsNetwork |  
Published : Nov 04, 2026, 02:15 AM IST
59 | Kannada Prabha

ಸಾರಾಂಶ

ನಾಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಸ್ಥಗಿತಗೊಳಿಸಿರುವುದು ರೈತರನ್ನುಕೆರಳಿಸಿತು

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಕಬಿನಿ ಬಲದಂಡೆ ನಾಲೆಯ ವ್ಯಾಪ್ತಿಯ ರೈತರ ಜಮೀನುಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಆಕ್ರೋಶಗೊಂಡ ರೈತರು ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕಬಿನಿ ಜಲಾಶಯದಿಂದ ನಾಲೆಗೆ ನೀರು ಹರಿಸಲಾಗುತ್ತಿದ್ದ ಹಿನ್ನೆಲೆ ಬಲದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳಿಗೆ ನೀರುಣಿಸುವ ಮೂಲಕ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ನಾಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರನ್ನು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಸ್ಥಗಿತಗೊಳಿಸಿರುವುದು ರೈತರನ್ನುಕೆರಳಿಸಿತು. ಈಗಾಗಲೇ ಬೆಳೆಗಳು ಬೆಳೆದು ನಿಂತಿದ್ದು, ಕಟಾವಿನ ಹಂತದತ್ತ ಸಾಗುತ್ತಿರುವ ಸಂದರ್ಭದಲ್ಲಿ ನೀರು ಸ್ಥಗಿತಗೊಂಡರೆ ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು

ಕೃಷಿಗಾಗಿ ಸಾಲಸೋಲ ಮಾಡಿ ಬಿತ್ತನೆ, ಗೊಬ್ಬರ, ಔಷಧೋಪಚಾರ ಹಾಗೂ ಕೃಷಿ ಚಟುವಟಿಕೆಗಳಿಗೆ ಹಣ ಹೂಡಿರುವ ರೈತರು, ಬೆಳೆಗಳಿಗೆ ನೀರು ದೊರೆಯದೆ ಹೋದರೆ ತಮ್ಮ ಇಡೀ ವರ್ಷದ ಶ್ರಮ ವ್ಯರ್ಥವಾಗಲಿದೆ ಎಂಬ ಚಿಂತೆಯಲ್ಲಿದ್ದಾರೆ. ಅದರಲ್ಲೂ ನಾಲೆಯ ನೀರನ್ನೇ ನಂಬಿಕೊಂಡಿರುವ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಸ್ಥಗಿತಗೊಳಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಒಗ್ಗೂಡಿ ನೀರಾವರಿ ನಿಗಮದ ಕಚೇರಿಗೆ ತೆರಳಿ ಅಧಿಕಾರಿಗಳನ್ನು ಪ್ರಶ್ನಿಸಿ, ತಕ್ಷಣವೇ ನೀರು ಹರಿಸುವಂತೆ ಒತ್ತಾಯಿಸಿದರು.

ನರಸೀಪುರದ ರೈತರನ್ನು ಕಡೆಗಣಿಸಿದರೆ ಹೇಗೆ?

ಸಚಿವ ಪುಟ್ಟರಂಗಶೆಟ್ಟಿ ಅವರು ಕೊಳ್ಳೇಗಾಲ ಭಾಗದ ರೈತರ ಜಮೀನುಗಳಿಗೆ ನೀರು ಹರಿಸುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನೆಲೆ ಟಿ. ನರಸೀಪುರ ಭಾಗದ ಕಬಿನಿ ಬಲದಂಡೆ ನಾಲೆಗೆ ಹರಿಸಲಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ ಎಂಬ ಗಂಭೀರ ಆರೋಪವನ್ನು ಪ್ರತಿಭಟನಾಕಾರರು ಮಾಡಿದರು.

ಒಂದು ಭಾಗದ ರೈತರ ಬೆಳೆಗಳಿಗೆ ನೀರು ಒದಗಿಸುವ ಉದ್ದೇಶದಿಂದ ಮತ್ತೊಂದು ಭಾಗದ ರೈತರ ಜಮೀನುಗಳಿಗೆ ಹರಿಸಲಾಗುತ್ತಿದ್ದ ನೀರನ್ನು ಏಕಾಏಕಿ ನಿಲ್ಲಿಸುವುದು ಯಾವ ನ್ಯಾಯ? ನೀರಾವರಿ ವಿಚಾರದಲ್ಲಿ ರಾಜಕೀಯ ಪ್ರಭಾವಕ್ಕೆ ಮಣಿದು ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ರೈತರು ಮುಂದಿಟ್ಟರು. ರೈತರ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸದೆ ಹಾಗೂ ಸ್ಥಳೀಯ ರೈತರ ಅಭಿಪ್ರಾಯವನ್ನು ಪರಿಗಣಿಸದೆ ನೀರು ಸ್ಥಗಿತಗೊಳಿಸಿರುವ ಅಧಿಕಾರಿಗಳ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

8 ದಿನಗಳ ಕಾಲ ನೀರು ಹರಿಸಲು ಒಪ್ಪಿಗೆ

ಪ್ರತಿಭಟನಾಕಾರರ ತೀವ್ರ ಆಕ್ಷೇಪ ಹಾಗೂ ರೈತರ ಒತ್ತಾಯಕ್ಕೆ ಸ್ಪಂದಿಸಿದ ಎಇಇ ದಿನೇಶ್ ಕುಮಾರ್ ಅವರು ಮೇಲಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದರು. ಕಬಿನಿ ಬಲದಂಡೆ ನಾಲೆಯ ವ್ಯಾಪ್ತಿಯ ರೈತರ ಬೆಳೆಗಳ ಹಿತದೃಷ್ಟಿಯಿಂದ ನೀರು ಹರಿಸುವಂತೆ ರೈತರು ಮಾಡುತ್ತಿರುವ ಒತ್ತಾಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದರು.

ನಂತರ ಮೇಲಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಎಂಟು ದಿನಗಳ ಕಾಲ ನಾಲೆಗೆ ನೀರು ಹರಿಸಲು ಒಪ್ಪಿಗೆ ಸೂಚಿಸಿದರು. ಅಧಿಕಾರಿಗಳಿಂದ ನೀರು ಹರಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆ ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ಶಿವಕುಮಾರ್, ಜೈಸ್ವಾಮಿ, ಸಿದ್ದರಾಜು, ಮಹದೇವು, ಮಹೇಶ, ಮಹದೇವ ಪ್ರಸಾದ್, ರಂಗಯ್ಯ, ಮಹದೇವ ನಾಯಕ, ಪಾಪನಾಯಕ, ಮಹದೇವ ನಾಯಕ, ಮಹದೇವಸ್ವಾಮಿ, ಮನು,ಮಹೇಶ, ಸೋಮಣ್ಣ, ರೈತ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರ ಚೆನ್ನಮ್ಮ, ಭುವನೇಶ್ವರಿದೇವಿ ಭಾವಚಿತ್ರದ ಮೆರವಣಿಗೆ
ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌