ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತವಾಧಿಯಲ್ಲಿ ಕಡಬ ತಾಲೂಕು ಮತ್ತು ಕಡಬ ಪಟ್ಟಣ ಪಂಚಾಯಿತಿ ಅನುಷ್ಠಾನಿಸಿ ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿಸಿದೆ. ಇದೀಗ ಪಟ್ಟಣ ಪಂಚಾಯಿತಿಗೆ ಚುನಾವಣೆ ಘೋಷಣೆಯಾಗಿದೆ. ಮೊದಲ ಚುನಾವಣೆಯಲ್ಲಿ ಬಿಜೆಪಿ ಗದ್ದುಗೆ ಹಿಡಿಯಲು ಕಾರ್ಯಕರ್ತರ ಅವಿರತ ಶ್ರಮ ಅಗತ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ಸೋಮವಾರ ಕಡಬ ಅನುಗ್ರಹ ಸಭಾಭವನದಲ್ಲಿ ನಡೆದ ಬಿಜೆಪಿ ಸುಳ್ಯ ಮಂಡಲ ಕಡಬ ತಾಲೂಕಿನ ಕಡಬ ಮಹಾಶಕ್ತಿ ಕೇಂದ್ರದ ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರ ಸಂಕಲ್ಪ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕೆಂಪುಕಲ್ಲು, ಮರಳು ದೊರೆಯದೆ ಕಾರ್ಮಿಕ ವರ್ಗ ಕಂಗಾಲಾಗಿದೆ. ಇಂತಹ ಜ್ವಲಂತ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ. ಜನರಿಗೆ ಬಿಟ್ಟಿ ಭಾಗ್ಯಗಳ ನೀಡಿದ್ದರಿಂದ ರಾಜ್ಯದಲ್ಲಿ ಅಭಿವೃದ್ದಿ ಕುಂಠಿತವಾಗಿದೆ. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಕುರ್ಚಿ ಕಿತ್ತಾಟದಲ್ಲಿ ತೊಡಗಿಸಿಕೊಂಡಿದ್ದು ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಬಿಜೆಪಿ ಪಕ್ಷ ಸಂಘಟನೆ ಮುಖಾಂತರ ಬೆಳೆದು ಬಂದಿದೆ. ಹಾಗಾಗಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಪಕ್ಷ ತೀರ್ಮಾನದಂತೆ ನಡೆಯುತ್ತದೆ ಎಂದರು.ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಬಿಜೆಪಿ ಕಟ್ಟಿ ಬೆಳೆಸುವಲ್ಲಿ ನಮ್ಮ ಹಿರಿಯರ ಪಾತ್ರ ಮಾದರಿಯಾಗಿಟ್ಟುಕೊಂಡು ಸಂಘಟಿತ ಹೋರಾಟದ ಮೂಲಕ ಪಟ್ಟಣ ಪಂಚಾಯಿತಿಯ ಗೆಲುವಿನಲ್ಲಿ ಎಲ್ಲಾ ಕಾರ್ಯಕರ್ತರು ದುಡಿಯಬೇಕು ಎಂದರು.ವಿಧಾನಪರಿಷತ್ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್, ಕಿಶೋರ್ ಬೊಟ್ಯಾಡಿ, ಶಾಸಕ ಡಾ.ಭರತ್ ಶೆಟ್ಟಿ, ಮಾಜಿ ಸಚಿವ ಎಸ್ ಅಂಗಾರ, ಕಡಬ ಪಟ್ಟಣ ಪಂಚಾಯಿತಿ ಚುನಾವಣಾ ನಿರ್ವಾಹಣಾ ಸಮಿತಿ ಪ್ರಮುಖ್ ಕೃಷ್ಣ ಶೆಟ್ಟಿ ಕಡಬ ಮಾತನಾಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಉಪಾಧ್ಯಕ್ಷ ರವೀಂದ್ರನಾಥ ಶೆಟ್ಟಿ, ರಾಕೇಶ್ ರೈ ಕೆಡೆಂಜಿ, ಸುಳ್ಯ ಮಂಡಲ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಳಿ, ಕಡಬ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಕಾಶ್ ಎನ್ ಕೆ, ಪ್ರಧಾನ ಕಾರ್ಯದರ್ಶಿ ಆಶೋಕ್ ಕುಮಾರ್, ಕಟಬ ಪಟ್ಟಣ ಪಂಚಾಯಿತಿ ಚುನಾವಣಾ ನಿರ್ವಹಣಾ ಸಮಿತಿ ಪ್ರಮುಖ್ ಬಾಲಕೃಷ್ಣ ಬಾಣಜಾಲು ಮೊದಲಾದವರು ಉಪಸ್ಥಿತರಿದ್ದರು. ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಸ್ತಾವಿಸಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ವಂದಿಸಿದರು. ವಿನಯ ಕುಮಾರ್ ಕಂದಡ್ಕ ನಿರೂಪಿಸಿದರು.