ಕನ್ನಡಪ್ರಭ ವಾರ್ತೆ ಕೋಲಾರ
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿವಿಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗ ಮುಚ್ಚುತ್ತಿರುವ ಕುರಿತಂತೆ ಸ್ಪಷ್ಟನೆ ನೀಡಿದ್ದು, ವಿವಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವಿದ್ದು, ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದೆ, ವಿಭಾಗದಲ್ಲಿ ಐದು ಮಂದಿ ಅತಿಥಿ ಉಪನ್ಯಾಸಕರಿದ್ದು, ೧೦ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದು ಪರೀಕ್ಷೆ ಹೊತ್ತಿಗೆ ಅವರೂ ಸಹ ಹಾಜರಾತಿ ಕೊರತೆ ಎದುರಿಸುತ್ತಿರುವುದು ವಿವಿಯ ಗಮನಕ್ಕೆ ಬಂದಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಳೆದ ಸೆಮಿಸ್ಟರ್‌ನಲ್ಲಿ ಒಬ್ಬನೇ ವಿದ್ಯಾರ್ಥಿ ತರಗತಿಗೆ ಹಾಜರಾದರೂ ತರಗತಿ ನಡೆಸಿ ಅವರಿಗೆ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಲಾಯಿತು. ಆದರೆ ಇದೀಗ ವಿದ್ಯಾರ್ಥಿಗಳಿಗೆ ಬೇಕಿಲ್ಲದ ವಿಭಾಗ ಮುಚ್ಚುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.ಆದರೆ ಕೋರ್ಸು ಮುಚ್ಚುವ ಕುರಿತು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿಲ್ಲ, ವಿವಿಯ ವಿದ್ಯಾವಿಷಯಕ ಪರಿಷತ್, ಸಿಂಡಿಕೇಟ್ ಸದಸ್ಯರನ್ನೊಳಗೊಂಡ ಸಮಿತಿ ರಚಿಸಿ ಅದರ ಶಿಫಾರಸ್ಸಿನಂತೆ ವಿಭಾಗವನ್ನು ಈ ವರ್ಷ ಮುಂದುವರಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಸದರಿ ವಿಭಾಗವನ್ನು ಮುಚ್ಚುವ ಕುರಿತು ವಿದ್ಯಾವಿಷಯಕ ಪರಿಷತ್ ಮತ್ತು ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆಯನ್ನೂ ಪಡೆಯಲಾಗಿದೆ ಹಾಗೂ ಈ ವಿಷಯವನ್ನು ಸರ್ಕಾರದ ಗಮನಕ್ಕೂ ತರಲಾಗಿದೆ. ವಿವಿ ಸ್ವಾಯುತ್ತ ಸಂಸ್ಥೆಯಾಗಿದ್ದು, ಕರ್ನಾಟಕ ವಿವಿ ಕಾಯಿದೆಯಡಿ ಯಾವುದೇ ಅಧ್ಯಯನ ವಿಭಾಗವನ್ನು ಮುಚ್ಚುವ ಹಕ್ಕು ಹೊಂದಿದೆ, ಈ ಹಿನ್ನೆಲೆಯಲ್ಲಿ ವಿವಿ ಪ್ರಜ್ಞಾಪೂರ್ವಕವಾಗಿಯೇ ಈ ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿರುವ ವಿಭಾಗವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಸಾರ್ವಜನಿಕರಿಗೆ ಈ ಮೂಲಕ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದ್ದಾರೆ.