ಉಪ್ಪಿನಂಗಡಿ: ಉಪ್ಪಿನಂಗಡಿ ಪರಿಸರದಲ್ಲಿ ಶನಿವಾರ ಸಂಜೆ ಸಿಡಿಲು ಸಹಿತ ಮಳೆಯಾಗಿದ್ದು, ಈ ವೇಳ ಸಿಡಿಲು ಬಡಿದು ಉತ್ತರ ಪ್ರದೇಶ ಮೂಲದ ಕಾರ್ಮಿಕ ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ನಡೆದಿದೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮರಳು ಸಂಗ್ರಹಿಸುವ ಕಾರ್ಮಿಕ, ಉತ್ತರ ಪ್ರದೇಶದ ನಿವಾಸಿ ಶ್ರೀಕಿಶುನ್ (೫೬) ಮೃತಪಟ್ಟವರು. ಉತ್ತರ ಪ್ರದೇಶದ ಚೈನ್‌ಪುರ ಗುಲೌರಾ ನಿವಾಸಿಯಾಗಿರುವ ಶ್ರೀಕಿಶುನ್ ಮತ್ತವರ ಸಹೋದ್ಯೋಗಿಗಳಿದ್ದ ತಂಡ ಪಿ.ಪಿ. ಜೋಯ್ ಎಂಬವರ ಒಡೆತನದಲ್ಲಿ ಕಾರ್ಮಿಕರಾಗಿ ಗುಂಡ್ಯ ಹೊಳೆಯಲ್ಲಿ ಮರಳುಗಾರಿಕೆ ಮಾಡುತ್ತಿದ್ದರು. ಶನಿವಾರದಂದು ಮಳೆ ಸುರಿಯಲಾರಂಭಿಸಿದಾಗ ಸಮೀಪದ ತಮ್ಮ ವಾಸ್ತವ್ಯದ ಶೆಡ್‌ನಲ್ಲಿ ಕುಳಿತ್ತಿದ್ದರು. ಈ ವೇಳೆ ನಾಲ್ವರು ಕುಳಿತ್ತಿದ್ದ ಶೆಡ್ಡಿಗೆ ಸಿಡಿಲು ಅಪ್ಪಳಿಸಿದ್ದು, ಶ್ರೀಕಿಶುನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಿಹಾರ ಮೂಲದ ಮಹಾದೇವ್ (೩೦) ಮತ್ತು ಗೌರಿ ಚೌದ್ರಿ (೪೫) ಸಿಡಿಲಾಘಾತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮಹಜರು ನಡೆಸಿದ್ದಾರೆ.
ಮರಗಳು ಉರುಳಿ ಸಂಚಾರಕ್ಕೆ ತೊಡಕು: ಕಡಬ ಪರಿಸರದಲ್ಲಿ ಭಾರೀ ಮಳೆಗೆ ಕಡಬ ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ವಾಹನ ಸಂಚಾರದಲ್ಲಿ ವ್ಯತ್ಯಯವುಂಟಾಯಿತು. ಎಡಮಂಗಲ ನಿಂತಿಕಲ್ಲು ರಸ್ತೆಯಲ್ಲೂ ಮರ ಬಿದ್ದು ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಮರ್ಧಾಳ ಪೇಟೆಯಲ್ಲಿ ಸಿಡಿಲು ಬಡಿದು ಮರ ಸುಟ್ಟು ಹೋಗಿದೆ.ಗ್ರಾಮಾಂತರದಲ್ಲಿ ಗುಡುಗು ಸಹಿತ ಗಾಳಿ ಮಳೆ: ವಿವಿಧೆಡೆ ಹಾನಿಸುಬ್ರಹ್ಮಣ್ಯ/ಸುಳ್ಯ/ಪುತ್ತೂರುದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಗಾಳಿ ಮಳೆಯಾಗಿದೆ.ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆ ಗುಡುಗು ಸಹಿತ ಗಾಳಿ- ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಕುಲ್ಕುಂದದಲ್ಲಿ ಮೀನು ಅಂಗಡಿ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಸುಬ್ರಹ್ಮಣ್ಯದ ಸಮೀಪದ ಇಂಜಾಡಿ ಎಂಬಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಹಾನಿಗೊಂಡಿದೆ. ನಡುಗಲ್ಲು ಸಮೀಪದ ಮರಕತ ಎಂಬಲ್ಲಿ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಹಲವು ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಸುಬ್ರಹ್ಮಣ್ಯ- ಗುತ್ತಿಗಾರು ರಸ್ತೆಯ ಅಲ್ಲಲ್ಲಿ ಮರ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ಬಳಿಕ ಮರಗಳತೆರವು ಮಾಡಲಾಗಿದೆ. ಸುಬ್ರಹ್ಮಣ್ಯ ಪರಿಸರದ ಸುಬ್ರಹ್ಮಣ್ಯ, ಐನೆಕಿದು, ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಕೈಕಂಬ, ಕುಲ್ಕುಂದ, ಏನೆಕಲ್ಲು, ಬಳ್ಪ, ಗುತ್ತಿಗಾರು, ಬಿಳಿನೆಲೆ ಪರಿಸರದಲ್ಲೂ ಗುಡುಗು ಸಹಿತ ಗಾಳಿ-ಮಳೆಯಾಗಿದೆ.
ಸುಳ್ಯದಲ್ಲಿ ಗಾಳಿ, ಮಳೆಗೆ ಹಾನಿ ಸುಳ್ಯ ಹಾಗೂ ಆಸುಪಾಸಿನಲ್ಲಿ ಶನಿವಾರ ಸಂಜೆ ಸುರಿದ ಗಾಳಿ ಮಳೆಗೆ ಹಲವೆಡೆ ಹಾನಿಯಾಗಿದೆ. ಪಂಜ -ಕಡಬ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕೆಲವು ಕಡೆ ರಸ್ತೆ ಮೇಲೆ ಮರ ಬಿದ್ದು ಸ್ವಲ್ಪ ಹೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು. ಹಲವು ಕಡೆ ವಿದ್ಯುತ್ ಲೈನ್ ಮೇಲೆ ಮರ ಉರುಳಿದ್ದು ವಿದ್ಯುತ್ ಕಂಬಗಳು ಮುರಿದಿದ್ದು ಅಪಾರ ಹಾನಿಯಾಗಿದೆ.ಮುಚ್ಚಾರ ಚಿನ್ನಪ್ಪ ಗೌಡರ ಮನೆಗೆ ಮರ ಬಿದ್ದು ಹಾನಿಯಾಗಿದೆ. ನಡುಗಲ್ಲು, ಮರಕತ ಮತ್ತಿತರ ಕಡೆ ಗಾಳಿ ಮಳೆಗೆ ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಹಲವು ವಿದ್ಯುತ್ ಕಂಬಗಳು ಧರಾಶಾಯಿ ಆಗಿರುವುದಾಗಿ ವರದಿಯಾಗಿದೆ.ಪುತ್ತೂರಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆತಾಲೂಕಿನಾದ್ಯಂತ ಶನಿವಾರ ಸಂಜೆ ಮುಂಗಾರು ಪೂರ್ವ ಮಳೆ ಸುರಿದು ಇಳೆಯನ್ನು ತಂಪಾಗಿಸಿತು. ಪುತ್ತೂರು ನಗರ ಸೇರಿದಂತೆ ಸುತ್ತ ಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಸುಮಾರು ೫ ಗಂಟೆಯ ವೇಳೆಗೆ ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆ ಸುರಿಯಿತು.ಪುತ್ತೂರಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆ: ತಾಲೂಕಿನಾದ್ಯಂತ ಶನಿವಾರ ಸಂಜೆ ಮುಂಗಾರು ಪೂರ್ವ ಮಳೆ ಸುರಿದು ಇಳೆಯನ್ನು ತಂಪಾಗಿಸಿತು. ಪುತ್ತೂರು ನಗರ ಸೇರಿದಂತೆ ಸುತ್ತ ಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಸುಮಾರು ೫ ಗಂಟೆಯ ವೇಳೆಗೆ ಸುಮಾರು ಅರ್ಧ ಗಂಟೆಗಳ ಕಾಲ ಗುಡುಗು ಸಹಿತ ಸಾಧಾರಣ ಮಳೆ ಸುರಿಯಿತು.ಬೆಳ್ತಂಗಡಿ ತಾಲೂಕಲ್ಲಿ ಮಳೆಬೆಳ್ತಂಗಡಿ: ತಾಲೂಕಿನ ದಿಡುಪೆ, ನಡ, ಲಾಯಿಲ, ಗೇರುಕಟ್ಟೆ, ಬೆಳ್ತಂಗಡಿ, ಚಾರ್ಮಾಡಿ ಮೊದಲಾದ ಕಡೆಗಳಲ್ಲಿ ಶನಿವಾರ ಗುಡುಗು, ಸಿಡಿಲಿನ ಮಳೆಯಾಗಿದೆ. ಈ ವೇಳೆ ಚಾರ್ಮಾಡಿಯ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆಯು ನಡೆಯಿತು. ಬೆಂಕಿ ಸಿಡಿಲು ಬಡಿದು ಉಂಟಾಗಿರುವ ಶಂಕೆ ಇದ್ದು, ಉತ್ತಮ ಮಳೆಯಾದ ಕಾರಣ ಅರಣ್ಯ ಭಾಗಕ್ಕೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ತಿಳಿದು ಬಂದಿದೆ.