ರಾಮನಗರ: ಬೆಂಗಳೂರು - ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಬರುವ ಕದಂಬ ಜಂಕ್ಷನ್ ನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸುವ ಸಂಬಂಧ ಅಂಡರ್ ಗ್ರೌಂಡ್ ಟನಲ್ ನಿರ್ಮಾಣ ಅಥವಾ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಕುರಿತಂತೆ ಬೆಂಗಳೂರು ಉಸ್ತುವಾರಿ ಸಚಿವರಿಗೆ ಪತ್ರ ಬರೆಯುವುದಾಗಿ ಸಂಸದ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ನಾನು ಸಂಸದನಾಗಿ ಮೂರುವರೆ ತಿಂಗಳಾಗಿದೆ. ಸಂಸತ್ ಅಧಿವೇಶನದಲ್ಲಿ ಎರಡು ಬಾರಿ ಮಾತನಾಡುವ ಅವಕಾಶ ಸಿಕ್ಕಿದೆ. ದೇಶದಲ್ಲಿ ಶೇಕಡ 13ರಷ್ಟು ಸಾವುಗಳು ರಸ್ತೆ ಅಪಘಾತದಿಂದ ಆಗುತ್ತಿದೆ. ಕ್ಯಾನ್ಸರ್ ನಿಂದ ಶೇಕಡ 8ರಷ್ಟು ಸಾವುಗಳು ಸಂಭವಿಸುತ್ತಿವೆ. ಹೀಗಾಗಿ ಪ್ರತಿ 125 -150 ಕಿ.ಮೀ.ಗೆ ಪಾಲಿ ಟ್ರಾಮಾ ಕ್ಲಿನಿಕ್ ಪ್ರಾರಂಭಿಸುವಂತೆ ಸಂಸತ್ ಮತ್ತು ಸಚಿವರ ಗಮನ ಸೆಳೆದಿದ್ದೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಮಾತ್ರವಲ್ಲದೆ ದೇಶಾದ್ಯಂತ ಈ ಯೋಜನೆ ಜಾರಿಗೆ ತರುವಂತೆ ಚರ್ಚೆ ನಡೆಸಿದ್ದೇನೆ. ಇದರಿಂದ ಅಪಘಾತಕ್ಕೊಳಗಾದ ಗಾಯಾಳುಗಳ ಪ್ರಾಣ ರಕ್ಷಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕನಕಪುರ, ಸಾತನೂರು, ಚನ್ನಪಟ್ಟಣ ಹಾಗೂ ಬನ್ನೇರುಘಟ್ಟ ಭಾಗಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಟ್ ನಿರ್ಮಾಣ ಮಾಡುವ ಅಗತ್ಯವಿದೆ. ಈಗಾಗಲೇ 72 ಕಿ.ಮೀ. ತಡೆಗೋಡೆ ನಿರ್ಮಾಣವಾಗಿದ್ದು, 28 ಕಿ.ಮೀ ಬಾಕಿಯಿದೆ. ಆದ್ದರಿಂದ ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚೆ ನಡೆಸಿ ರೇಲ್ವೆ ಹಳಿಗಳನ್ನು ಕಡಿಮೆ ದರದಲ್ಲಿ ಒದಗಿಸುವಂತೆ ಮನವಿ ಮಾಡಿದ್ದು, ಇದಕ್ಕೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.ಸ್ಯಾಟ್ ಲೈಟ್ ರಿಂಗ್ ರೋಡ್(ಎಸ್ ಟಿಆರ್ ಆರ್ ) ನಿಂದ ಅನುಮೋದನೆ ಕೊಡುವಂತೆ ನಾನು ಮತ್ತು ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವು. ಅವರು 45 ದಿನಗಳಲ್ಲಿ ಅನುಮೋದನೆ ನೀಡುವ ಭರವಸೆ ನೀಡಿದ್ದರು. ಈಗ 30 ದಿನದೊಳಗೆ ಅನುಮೋದನೆ ನೀಡಿದ್ದಾರೆ. ಎಸ್ ಟಿಆರ್‌ಆರ್ ಯೋಜನೆ ಬೆಂಗಳೂರಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲಿದೆ ಎಂದು ಹೇಳಿದರು.
ಬೆಂಗಳೂರು - ಹೊಸೂರು ಹೈವೈ ಬಗ್ಗೆಯೂ ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸಿದ್ದೇವೆ. ಕುಣಿಗಲ್ ನಲ್ಲಿ ಕೊಬ್ಬರಿ ಬೆಳೆಗಾರರ ಬಾಕಿ ಪಾವತಿ ಮಾಡಿಸಿದ್ದೇವೆ. ಕೆರೆ ತುಂಬಿಸುವ ಕಾರ್ಯಕ್ಕೂ ಒತ್ತು ಕೊಡಬೇಕಿದೆ. 56 ಕೆರೆಗಳು ತುಂಬಿಲ್ಲ. ಮಳೆ ಆಗುತ್ತಿದ್ದರೂ ಆ ನೀರು ಕೆರೆಗೆ ಹರಿಯುತ್ತಿಲ್ಲ. ಅದಕ್ಕಾಗಿ ಕೆರೆ ತುಂಬಿಸುವ ಕಾರ್ಯಕ್ಕೆ ವಿಶೇಷವಾಗಿ ಗಮನ ಹರಿಸುತ್ತೇವೆ ಎಂದು ಮಂಜುನಾಥ್ ಹೇಳಿದರು.
ಬಾಕ್ಸ್.............
ಜಿಲ್ಲಾ ಕೇಂದ್ರವಾಗಿರುವ ಕಾರಣ ರಾಮನಗರ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸಂಸದರ ಕಚೇರಿ ಉದ್ಘಾಟನೆ ಮಾಡಿದ್ದೇನೆ ಎಂದು ಸಂಸದ ಡಾ. ಮಂಜುನಾಥ್ ಹೇಳಿದರು.
ಕೋಟ್ ....
-ಡಾ.ಸಿ.ಎನ್ .ಮಂಜುನಾಥ್, ಸಂಸದರು, ಬೆಂಗಳೂರು ಗ್ರಾಮಾಂತರ ಕ್ಷೇತ್ರ
ರಾಮನಗರ ಜಿಪಂ ಕಚೇರಿಯಲ್ಲಿ ನೂತನ ಸಂಸದ ಕಚೇರಿಯಲ್ಲಿ ಡಾ.ಸಿ.ಎನ್.ಮಂಜುನಾಥ್ ದಂಪತಿ ವಿಶೇಷ ಪೂಜೆ ಸಲ್ಲಿಸಿದರು.