-ಟ್ಯಾಂಕರ್‌ಗಟ್ಟಲೇ ಕೆಮಿಕಲ್ ಕಂಪನಿಗಳ ರಾಸಾಯನಿಕ ತ್ಯಾಜ್ಯ ಹಳ್ಳಕ್ಕೆ ಬಿಡುಗಡೆ । ಸ್ಥಳಕ್ಕೆ ಪರಿಸರ ಮಂಡಳಿ, ಪೊಲೀಸ್ ಅಧಿಕಾರಿಗಳ ಭೇಟಿ
-ಮುಂದುವರೆದ ಕೆಮಿಕಲ್ ಕಳ್ಳಾಟ: ಜನ-ಜೀವ ಜೀಲಕ್ಕೆ ಕಂಟಕ !-ಕಡೇಚೂರು, ರಾಚನಹಳ್ಳಿ, ಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಕೆಮಿಕಲ್ ತ್ಯಾಜ್ಯ ಹರಿಬಿಟ್ಟ ಕಂಪನಿಗಳು !
-----ಕನ್ನಡಪ್ರಭ ಸರಣಿ ವರದಿ ಭಾಗ : 118
ಆನಂದ್ ಎಂ. ಸೌದಿಕನ್ನಡಪ್ರಭ ವಾರ್ತೆ ಯಾದಗಿರಿ
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಲವು ಕೆಮಿಕಲ್ ಕಂಪನಿಗಳು ವಿಷಕಾರಿ ರಾಸಾಯನಿಕ ತ್ಯಾಜ್ಯ ಡ್ರೈನೇಜ್‌ಗಳ ಮೂಲಕ ಕಳ್ಳದಾರಿಯಲ್ಲಿ ಹಳ್ಳಕ್ಕೆ ಬಿಡುತ್ತಿರುವ ಘಟನೆಗಳು ಮತ್ತೆ ಮರುಕಳಿಸುತ್ತಿರುವುದು ಜನ-ಜೀವಜಲಕ್ಕೆ ಆತಂಕ ಮೂಡಿಸಿದೆ.ಒಂದು ದಿನದ ಹಿಂದಷ್ಟೇ, ಇಂತಹುದ್ದೇ ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬೆನ್ನಲೇ, ಶನಿವಾರ ತಡರಾತ್ರಿ ಟ್ಯಾಂಕರುಗಳಟ್ಟಲೇ ರಾಸಾಯನಿಕ ತ್ಯಾಜ್ಯ ಕಡೇಚೂರು, ಶೆಟ್ಟಿಹಳ್ಳಿ ಹಾಗೂ ರಾಚನಹಳ್ಳಿ ಭಾಗಕ್ಕಂಟಿಕೊಂಡಂತೆ ಇರುವ ಪ್ರಮುಖ ರಸ್ತೆಗಳ ಪಕ್ಕದ ಹಳ್ಳದ ಸೇತುವೆಯಲ್ಲಿ ಚೆಲ್ಲಿ ಹೋಗಿರುವುದು ಜನರ ಆಕ್ರೋಶ- ಆತಂಕಕ್ಕೆ ಕಾರಣವಾಗಿದೆ.
ಭಾನುವಾರ ಬೆಳಕು ಹರಿಯುತ್ತಲೇ ಇದನ್ನು ಗಮನಿಸಿ ಗ್ರಾಮಸ್ಥರು, ಪೊಲೀಸ್ ಹಾಗೂ ಪರಿಸರ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸುತ್ತಮುತ್ತಲಿನ ರೈತರೂ ಸ್ಥಳಕ್ಕೆ ಭೇಟಿ ನೀಡಿ, ನೀರಿನ ಮೂಲವೂ ಕಲುಷಿತಗೊಳ್ಳುತ್ತಿರುವ ಬಗ್ಗೆ ಕಿಡಿ ಕಾರಿದರು. ಕೆಮಿಕಲ್ ರಾಸಾಯನಿಕ ದ್ರವ ಪದಾರ್ಥ ಚೆಲ್ಲಿದ್ದರಿಂದ ಅದು ನೂರಾರು ಅಡಿಗಳಷ್ಟು ಹರಿದು, ಆ ಭಾಗದಲ್ಲಿನ ಹುಲ್ಲುಗಾವಲು ಪ್ರದೇಶದ ಸುಟ್ಟು ಸಂಪೂರ್ಣ ಭಸ್ಮವಾಗಿದ್ದರೆ, ಕಪ್ಪೆ, ಮೀನುಗಳಂತಹ ಜಲಚರಗಳು ಸತ್ತು ಹೋಗಿವೆ. ಮಳೆ ಬಂದಿದ್ದೇಯಾದರೆ, ಇದೇ ತ್ಯಾಜ್ಯ ಹಳ್ಳದ ನೀರಿನೊಡನೆ ಬೆರೆತು, ನದಿಗೆ ಸೇರಿ, ಮತ್ತಷ್ಟೂ ಅನಾಹುತಗಳಿಗೆ ಕಾರಣವಾಗಬಹುದು ಎಂಬ ಆಘಾತ ಜನರ ಕಾಡುತ್ತಿದೆ.ಪರಿಸರ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪರಿಸರ ಅಧಿಕಾರಿಗಳ ತಂಡ, ರಾಸಾಯನಿಕ ತ್ಯಾಜ್ಯದ ಮಾದರಿ ಸಂಗ್ರಹಿಸಿದೆ. ಪ್ರಾದೇಶಿಕ ಪ್ರಯೋಗಾಲಯಕ್ಕೆ ಕಳುಹಿಸಿ, ವರದಿ ಪಡೆಯುವ ಸಿದ್ಧತೆ ನಡೆಸಿದೆ. ಎರಡು ದಿನಗಳ ಹಿಂದೆ ಇಂತಹುದ್ದೇ ತ್ಯಾಜ್ಯ ದ್ರವ ಮಾದರಿ ಸಂಗ್ರಹಿಸಿದ್ದ ಅಧಿಕಾರಿಗಳು, ಕಲಬುರಗಿ ಪ್ರಾದೇಶಿಕ ಪ್ರಯೋಗಾಲಯಕ್ಕೆ ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ್ದಾಗ, ಅತೀ ಅಪಾಯಕಾರಿ ಎಂಬ ವರದಿ ಬಂದಿದ್ದರಿಂದ, ಸೈದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಸದ್ಯ, ಕೆಮಿಕಲ್ ಕಂಪನಿಗಳ ಇಂತಹ ಕಳ್ಳಾಟಕ್ಕೆ ಕಡಿವಾಣ ಹಾಕುವಲ್ಲಿ ಈ ಭಾಗದ ಜನರು ತಂಡಗಳಾಗಿ ಕೂಡಿಕೊಂಡು, ಜನರು ರಾತ್ರಿ ವೇಳೆ ತಪಾಸಣೆ ಮುಂದಾಗಲಿದ್ದೇವೆ ಎಂದು ವೀರೇಶ ಕನ್ನಡಪ್ರಭಕ್ಕೆ ತಿಳಿಸಿದರು.
-ಕೋಟ್-1
ಶನಿವಾರ ತಡರಾತ್ರಿ ಕೆಲವು ಕೆಮಿಕಲ್ ಕಂಪನಿಗಳ ಟ್ಯಾಂಕರ್‌ಗಳು ನಮ್ಮ ಶೆಟ್ಟಿಹಳ್ಳಿ, ರಾಚನಹಳ್ಳಿ ಹಾಗೂ ಕಡೇಚೂರು ಭಾಗ ಪ್ರಮುಖ ರಸ್ತೆಗಳಲ್ಲಿರುವ ಹಳ್ಳದ ಸೇತುವೆಯಲ್ಲಿ ತ್ಯಾಜ್ಯ ಹರಿಬಿಟ್ಟಿವೆ. ನೂರಾರು ಅಡಿಗಳಷ್ಟು ಕಪ್ಪನೆಯ ತ್ಯಾಜ್ಯ ಅಲ್ಲೆಲ್ಲ ಹರಡಿ, ಹುಲ್ಲುಗಾವಲು ಪ್ರದೇಶ ಸುಟ್ಟು ಹೋಗಿದೆ, ಕಪ್ಪೆಗಳು ಕಪ್ಪಿಟ್ಟು ಸತ್ತುಹೋಗಿವೆ. ಇದೇ ನೀರು ಹಳ್ಳಕ್ಕೆ ಸೇರಿ, ಅಲ್ಲಿಂದ ನದಿಗೆ ಹೋಗುತ್ತದೆ. ವಿಷಕಾರಿ ನೀರು ಹರಿಬಿಟ್ಟಿರುವವರ ಬಗ್ಗೆ ತನಿಖೆಯಾಗಬೇಕು, ಇದ ತಡೆಗಟ್ಟದಿದ್ದರೆ ಜನರ ಆರೋಗ್ಯ, ಜಲಮೂಲಕ ಕಲುಷಿತಾ ಹಾಗೂ ಕಲುಷಿತ ನೀರಿನಿಂದ ಜಲಚರಗಳು ಸಾವನ್ನಪ್ಪುತ್ತವೆ.- ಕಾಶಿನಾಥ್, ಸಾಮಾಜಿಕ ಕಾರ್ಯಕರ್ತ, ಶೆಟ್ಟಿಹಳ್ಳಿ. (3ವೈಡಿಆರ್20)
-ಕೋಟ್-2
ಪದೇ ಪದೇ ಇಂತಹ ಘಟನೆಗಳು ಘಟಿಸುತ್ತಿದ್ದರೂ ಸಹ, ಪರಿಸರ ಇಲಾಖೆ ತನಗೇನೂ ಗೊತ್ತಿಲ್ಲದಂತೆ ವರ್ತಿಸುತ್ತದೆ. ಜನರ ದೂರುಗಳಿಗೆ ಕಿಡಿಗೊಡದ ಪೊಲೀಸರು, ಮೇಲಧಿಕಾರಿಗಳಿಂದ ಆದೇಶ ಬಂದಾಗ ಮಾತ್ರ ಅಪರಿಚಿತರ ಹೆಸರಲ್ಲಿ ದೂರು ದಾಖಲಿಸಿ, ತನಿಖೆಯನ್ನೇ ಮಾಡದೆ ಪ್ರಕರಣ ಹಳ್ಳ ಹಿಡಿಸುತ್ತಾರೆ. ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ವಿಷಕಾರಿ ಕಂಪನಿಗಳ ಕೃತ್ಯ ತಡೆಯಬೇಕು, ಮಲಗಿಕೊಂಡಂತೆ ನಟಿಸುತ್ತಿರುವ ಅಧಿಕಾರಿಗಳನ್ನು ಬಡಿದೆಬ್ಬಿಸಬೇಕಾದರೆ ಹೋರಾಟಗಳು ಅನವಾರ್ಯ ಎಂದೆನ್ನಿಸುತ್ತದೆ.- ವೀರೇಶ ಸಜ್ಜನ್, ಕನ್ನಡಪರ ಸಂಘಟನೆ ಹೋರಾಟಗಾರ, ಸೈದಾಪುರ. (3ವೈಡಿಆರ್21)
-3ವೈಡಿಆರ್15 : ಅಪಾಯಕಾರಿ ತ್ಯಾಜ್ಯ ಚೆಲ್ಲಿರುವ ಬಗ್ಗೆ ಪರಿಸರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ದ್ರವ ಮಾದರಿ ಸಂಗ್ರಹಿಸಿದ್ದಾರೆ.
3ವೈಡಿಆರ್16 : ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.3ವೈಡಿಆರ್17 : ಕಡೇಚೂರು ಕೈಗಾರಿಕಾ ಪ್ರದೇಶದ ಮುಖ್ಯಸ್ತೆಯ ಬದಿ ಅಪಾಯಕಾರಿ ಕೆಮಿಕಲ್ ತ್ಯಾಜ್ಯ ಟ್ಯಾಂಕರ್ ಮೂಲಕ ಚೆಲ್ಲಿ ಪರಾರಿಯಾಗಿರುವುದು.
3ವೈಡಿಆರ್18 : ಕಡೇಚೂರು ಕೈಗಾರಿಕಾ ಪ್ರದೇಶದ ಮುಖ್ಯಸ್ತೆಯ ಬದಿ ಹಳ್ಳದ ಸೇತುವೆಗೆ ಅಪಾಯಕಾರಿ ಕೆಮಿಕಲ್ ತ್ಯಾಜ್ಯ ಟ್ಯಾಂಕರ್ ಮೂಲಕ ಚೆಲ್ಲಿ ಪರಾರಿಯಾಗಿರುವುದರಿಂದ ಅಲ್ಲಿನ ಹುಲ್ಲುಗಾವಲು ಸುಟ್ಟು ಭಸ್ಮವಾಗಿರುವುದು.3ವೈಡಿಆರ್19 : ಹಳ್ಳಕ್ಕೆ ಅಪಾಯಕಾರಿ ರಾಸಾಯನಿಕ ತ್ಯಾಜ್ಯ ಚೆಲ್ಲಿದ್ದರಿಂದ ಕಪ್ಪೆ ಮುಂತಾದ ಜಲಚರಗಳು ಸುಟ್ಟು ಸಾವನ್ನಪ್ಪಿರುವುದು.