ಚಾಮರಾಜನಗರ : ಕಾಲೇಜಿಗೂ ಕಾಲಿಟ್ಟ ಖದೀಮರ ಗ್ಯಾಂಗ್

KannadaprabhaNewsNetwork | Updated : Jun 28 2024, 12:05 PM IST
Follow Us

ಸಾರಾಂಶ

ಚಿನ್ನದಂಗಡಿ, ಮಳಿಗೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಈಗ ಕಾಲೇಜಿಗೂ ಎಂಟ್ರಿ ಕೊಟ್ಟಿದ್ದು ಪರೀಕ್ಷಾ ಕೇಂದ್ರದ ಡಿವಿಆರ್, ಬ್ಯಾಟರಿ, ಟಿವಿಯನ್ನೇ ಹೊತ್ತೊಯ್ದಿದ್ದಾರೆ.

 ಚಾಮರಾಜನಗರ : ಚಿನ್ನದಂಗಡಿ, ಮಳಿಗೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಈಗ ಕಾಲೇಜಿಗೂ ಎಂಟ್ರಿ ಕೊಟ್ಟಿದ್ದು ಪರೀಕ್ಷಾ ಕೇಂದ್ರದ ಡಿವಿಆರ್, ಬ್ಯಾಟರಿ, ಟಿವಿಯನ್ನೇ ಹೊತ್ತೊಯ್ದಿದ್ದಾರೆ. ಚಾಮರಾಜನಗರ ಸರ್ಕಾರಿ ಪಿಯು ಬಾಲಕರ ಕಾಲೇಜಿನಲ್ಲಿ ಈ ಕಳವು ಪ್ರಕರಣ ನಡೆದಿದ್ದು ಉಪನ್ಯಾಸಕ ವರ್ಗ ಕಳವು ಘಟನೆಯಿಂದ ಆತಂಕಕ್ಕೀಡಾಗಿದ್ದಾರೆ‌.

ಗೇಟಿನ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಪರೀಕ್ಷೆ ಮುನ್ನೆಚ್ಚರಿಕೆಗೆ ಅಳವಡಿಸಿದ್ದ ಸಿಸಿಟಿವಿ, ಡಿವಿಆರ್‌ನ್ನು ಹಾಗೂ ಲಕ್ಷಾಂತರ ಮೌಲ್ಯದ 10 ಬ್ಯಾಟರಿಗಳು, ಎಲ್‌ಇಡಿ ಟಿವಿಯನ್ನು ಹೊತ್ತೊಯ್ದಿದ್ದಾರೆ. ಪ್ರಸ್ತುತ ಪಿಯು-3 ಪರೀಕ್ಷೆ ನಡೆಯುತ್ತಿದ್ದು ಈಗಾಗಲೇ 4 ವಿಷಯಗಳಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಕೇಂದ್ರದ ಡಿವಿಆರ್ ಕನ್ನ ಹಾಕಿರುವುದರಿಂದ ಪರೀಕ್ಷೆ ನಡೆದ ಪ್ರಮುಖ ದಾಖಲೆಯೇ ಇಲ್ಲದಂತಾಗಿದೆ.

ಪಿಯುಸಿ-3 ರ ಪರೀಕ್ಷೆಯಲ್ಲಿ ಈಗಾಗಲೇ 4 ವಿಷಯಗಳಿಗೆ ಎಕ್ಸಾಂ ಬರೆದಿರುವ ವಿದ್ಯಾರ್ಥಿಗಳು ಕೂಡ ಕಾಲೇಜಿಗೆ ಕನ್ನ ಹಾಕಿರುವುದರಿಂದ ದಿಗಿಲುಗೊಂಡಿದ್ದಾರೆ. ಗುರುವಾರ ಬೆಳಗ್ಗೆ ಕಾಲೇಜಿಗೆ ಆಗಮಿಸಿದ ಡಿ.ಗ್ರೂಪ್‌ ನೌಕರರೊಬ್ಬರು ಗೇಟ್‌ ಮುರಿದಿರುವುದನ್ನು ಗಮನಿಸಿದ್ದಾರೆ. ಅಲ್ಲದೆ, ಪ್ರಾಂಶುಪಾಲರ ಕೊಠಡಿ ಬಳಿ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

ಪ್ರವಾಸಿ ಮಂದಿರದ ಬಳಿ ಪಟ್ಟಣ ಪೊಲೀಸ್‌ ಠಾಣೆ ಇದ್ದ ವೇಳೆ ಯಾವುದೇ ರೀತಿಯ ಕಳ್ಳತನ ಪ್ರಕರಣ ನಡೆಯುತ್ತಿರಲಿಲ್ಲ. ಪಟ್ಟಣ ಠಾಣೆಯನ್ನು ಸಂತೇಮರಹಳ್ಳಿ ರಸ್ತೆಯಲ್ಲಿ ನಿರ್ಮಿಸಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ.

 ನಗರದ ಕುವೆಂಪು ಬಡಾವಣೆ, ಡಾ.ಬಿ.ಆರ್‌. ಅಂಬೇಡ್ಕರ್‌ ಬಡಾವಣೆ, ಮುಬಾರಕ್‌ ಮೊಹಲ್ಲಾದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಪಟ್ಟಣ ಠಾಣೆಯ ಪೊಲೀಸರು ರಾತ್ರಿ ವೇಳೆ ಗಸ್ತು ಕರ್ತವ್ಯಗಳನ್ನು ಹೆಚ್ಚಿಸಬೇಕಾಗಿದೆ. ಆಗಾಗ್ಗೆ ರೌಡಿಗಳ ಪೇರಡ್‌ಗಳನ್ನು ನಡೆಸುವ ಮೂಲಕ ಕಳ್ಳರು ಮತ್ತು ರೌಡಿಗಳಿಗೆ ಎಚ್ಚರಿಕೆ ನೀಡುವ ಕೆಲಸವನ್ನು ಪೊಲೀಸ್‌ ಇಲಾಖೆ ಮಾಡಬೇಕಿದೆ. ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ಕೊಟ್ಟು ತನಿಖೆ ನಡೆಸಿದ್ದಾರೆ. ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಚಾಮರಾಜನಗರ ಪಟ್ಟಣ ಠಾಣೆಗೆ ಈ ಸಂಬಂಧ ದೂರು ಕೊಟ್ಟಿದ್ದಾರೆ.