ಕದ್ರಿ ಉದ್ಯಾನವನದಲ್ಲಿ 4 ದಿನಗಳ ಫಲಪುಷ್ಪ ಪ್ರದರ್ಶನ ಆರಂಭ

KannadaprabhaNewsNetwork |  
Published : Jan 25, 2026, 03:00 AM IST
ಕದ್ರಿ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನದ ನೋಟ  | Kannada Prabha

ಸಾರಾಂಶ

ದ.ಕ. ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕಾ ಇಲಾಖೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಮತ್ತು ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಕದ್ರಿ ಉದ್ಯಾನವನದಲ್ಲಿ ಶುಕ್ರವಾರ ಚಾಲನೆ

ಮಂಗಳೂರು: ದ.ಕ. ಜಿಲ್ಲಾಡಳಿತ, ಜಿ.ಪಂ., ತೋಟಗಾರಿಕಾ ಇಲಾಖೆ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಮತ್ತು ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಕದ್ರಿ ಉದ್ಯಾನವನದಲ್ಲಿ ಶುಕ್ರವಾರ ಚಾಲನೆ ದೊರೆತಿದೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಕದ್ರಿ ಉದ್ಯಾನವನ ಸಾವಿರಾರು ಬಣ್ಣಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ. ಪ್ರದರ್ಶನದ ಅಂಗವಾಗಿ ಸುಮಾರು 15,000 ಸಂಖ್ಯೆಯ 30 ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಪೆಟೋನಿಯಾ, ಟೊರಿನೋ ಇತ್ಯಾದಿ ಹೂವುಗಳನ್ನು ಕುಂಡಗಳಲ್ಲಿ ಬೆಳೆಯಲಾಗಿದೆ. ತರಕಾರಿ ಕೈತೋಟವನ್ನು ರಚಿಸಲಾಗಿದೆ. ಜಿಲ್ಲೆಯ ಮಹತ್ವ, ವಿವಿಧ ಕ್ಷೇತ್ರಗಳ ಗಣ್ಯರ ಬಗ್ಗೆ ಹಣ್ಣು ಮತ್ತು ತರಕಾರಿಗಳಿಂದ ಕಲಾವಿದರು ರಚಿಸಿದ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ವಿವಿಧ ಅಲಂಕಾರಿಕ ಗಿಡಗಳು, ಬೊನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶನದಲ್ಲಿದೆ. ಇದಲ್ಲದೆ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ವಿವಿಧ ಇಲಾಖೆಗಳ ಪ್ರದರ್ಶನ ಮಳಿಗೆ ಸೇರಿದಂತೆ ಸುಮಾರು ನೂರಕ್ಕೂ ಅಧಿಕ ಸ್ಟಾಲ್‌ಗಳು ಇದ್ದು, 10 ವಿಧದ ತರಕಾರಿ ಗ್ರೋ ಬ್ಯಾಗ್‌ ಮೂಲಕ ತರಕಾಗಿ ಬೆಳೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇದಲ್ಲದೆ, ಹೂವಿನ ಮಿಕ್ಕಿ ಮೌಸ್, ಸೆಲ್ಫಿ ಪಾಯಿಂಟ್ ವಿಶೇಷ ಆಕರ್ಷಣೆಯಾಗಿದೆ.

ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು.ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಎಂ. ಗಫೂರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಶಿಧರ್ ಎಚ್., ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್‌, ಸಹಾಯಕ ನಿರ್ದೇಶಕರಾದ ಪ್ರವೀಣ್‌ ಹಾಗೂ ಪ್ರದೀಪ್‌ ಡಿಸೋಜಾ, ಕದ್ರಿ ಅಭಿವೃದ್ದಿ ಸಮಿತಿ ಸದಸ್ಯರಾದ ಕೆ.ರಾಮ ಮುಗ್ರೋಡಿ, ಜಿ.ಕೆ. ಭಟ್, ಜಗನ್ನಾಥ್ ಗಾಂಭೀರ್, ಸಿರಿ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಭಾರತಿ ನಿರ್ಮಲ್, ಸಿರಿ ತೋಟಗಾರಿಕೆ ಸಂಘದ ಸದಸ್ಯ ವೈಕುಂಠ ಹೇರಳೆ, ಹರೀಶ್ಚಂದ್ರ ಅಡ್ಕ ಮತ್ತಿತರರಿದ್ದರು.

ವಿಶೇಷ ಆಕರ್ಷಣೆಯ ‘ವಂದೇ ಭಾರತ್ ರೈಲು’! ಈ ಬಾರಿ ಬಗೆಬಗೆಯ ಹೂವುಗಳಿಂದ ತಯಾರಿಸಲಾದ ವಂದೇ ಭಾರತ್‌ ರೈಲಿನ ಪ್ರತಿಕೃತಿ ಫಲಪುಷ್ಪ ಪ್ರದರ್ಶನದ ವಿಶೇಷ ಆಕರ್ಷಣೆಯಾಗಿದೆ.

ಈ ರೈಲು 3 ಬೋಗಿಗಳನ್ನು ಹೊಂದಿದ್ದು, 24 ಅಡಿ ಉದ್ದ ಇದೆ. ರೈಲಿನ ಹಳಿ 30 ಫೀಟ್ ಉದ್ದ ಇದ್ದು, ಐರಿಸ್‌ ಫ್ಲರಿಷ್‌ನ ಉಮೇಶ್‌ ಅವರು ಇದನ್ನು ರೂಪಿಸಿದ್ದಾರೆ. ಇದಕ್ಕೆ ಮೂರು ಕ್ವಿಂಟಾಲ್‌ ಚೆಂಡು ಹೂವನ್ನು ಬಳಸಲಾಗಿದೆ. ಜಗನ್ನಾಥ್‌ ಗಂಭೀರ್‌ ಇದನ್ನು ರೂಪಿಸುವಲ್ಲಿ ಮುತುವರ್ಜಿ ವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!