ಕಡೂರು: ಬರಗಾಲಕ್ಕೆ ತುತ್ತಾದ ಸಾವಿರಾರು ಎಕರೆ ರಾಗಿ ಬೆಳೆ

KannadaprabhaNewsNetwork | Published : Nov 20, 2023 12:45 AM

ಸಾರಾಂಶ

ಕಡೂರು: ಬರಗಾಲಕ್ಕೆ ತುತ್ತಾದ ಸಾವಿರಾರು ಎಕರೆ ರಾಗಿ ಬೆಳೆ

ರೈತರಿಗೆ ಬೆಂಬಲ ಬೆಲೆ - ಬೆಳೆ ನಷ್ಟ ಪರಿಹಾರಕ್ಕೆ ಸರಕಾರಕ್ಕೆ ಆಗ್ರಹ

ಕೆ.ಎನ್ .ಕೃಷ್ಣಮೂರ್ತಿ.ಕನ್ನಡಪ್ರಭ ವಾರ್ತೆ, ಕಡೂರು

ಸದಾ ಬರಗಾಲಕ್ಕೆ ತುತ್ತಾಗುವ ಕಡೂರು ತಾಲೂಕಿನಲ್ಲಿ ಮಳೆಯ ಜೂಜಾಟದಿಂದಾಗಿ ಬೆಳೆಗಳು ಹಾಳಾಗುವ ಮೂಲಕ ರೈತರ ಸ್ಥಿತಿ ಅರೆ ಬರೆ ಎಂಬಂತಾಗಿದೆ. ತಾಲೂಕಿನಲ್ಲಿ ಮಳೆಗಾಲ ಆರಂಭದ ಜೂನ್ ತಿಂಗಳಲ್ಲಿ ನಿರೀಕ್ಷಿತ ಮಳೆ ಬಾರದೆ ಸುಮಾರು 460 ಹೆಕ್ಟೇರ್‌ ನಲ್ಲಿ ಹಾಕಲಾಗಿದ್ದ ಎಳ್ಳು, ಸೂರ್ಯ ಕಾಂತಿ, ಹಲಸಂದೆ ಸೇರಿದಂತೆ ಕಾಳಿನ ಬೆಳೆಗಳು ಕೈ ಕೊಟ್ಟವು. ಬಯಲು ಪ್ರದೇಶದ ರೈತರು ಮೂಲಕ ಮುಂಗಾರು ಕೈ ಕೊಟ್ಟಿದ್ದರಿಂದ ಕಂಗಾಲಾದರು. ಹಿಂಗಾರಿನಲ್ಲೂ ಸಹ ರೈತನನ್ನು ಮಳೆ ಕೈ ಹಿಡಿಯಲಿಲ್ಲ ಇದರ ಪರಿಣಾಮ ಬೆಳೆ ಕೈಗೆ ಬರಲಿಲ್ಲ. ತಾಲೂಕಿನ ಸಾವಿರಾರು ಎಕರೆಯಲ್ಸಿ ಬೆಳೆದಿದ್ದ ರಾಗಿಯಲ್ಲಿ ಶೇ.70 ರಷ್ಟು ಹಾಳಾಗಿ ಶೇ 30 ರಷ್ಟು ಮಾತ್ರ ತಾಲೂಕಿನ ಕುಂಕಾನಾಡು ಸೇರಿದಂತೆ ಸಿಂಗಟಗೆರೆ, ಪಂಚನಹಳ್ಳಿ, ಚೌಳ ಹಿರಿಯೂರು ಹೋಬಳಿಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ರಾಗಿ ಬಂದಿದೆ. ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿರುವ 123 ತಾಲೂಕುಗಳಲ್ಲಿ ಕಡೂರು ಕೂಡ ಬರಗಾಲ ಪ್ರದೇಶವೆಂದು ಪರಿಗಣಿತವಾಗಿದೆ. ಆದರೆ ತಾಲೂಕಿನಲ್ಲಿ ಸದ್ಯಕ್ಕೆ ಬರಗಾಲಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳು ಅನುಷ್ಠಾನವಾಗಿಲ್ಲ. ಹಾಳಾದ ಬೆಳೆ ಸಮೀಕ್ಷೆಯಲ್ಲಿ ಬೆಳೆ ಕಳೆದು ಕೊಂಡ ರೈತರು ಆ್ಯಪ್ ಮೂಲಕ ಬೆಳೆ ನಷ್ಟದ ಪ್ರಮಾಣವನ್ನು ರೈತರೆ ಅಪ್ಲೋಡ್ ಮಾಡಿ ಸರ್ಕಾರಕ್ಕೆ ಕಳಿಸುವಂತೆ ರಾಜ್ಯ ಸರ್ಕಾರ ಮಾಡಿದೆ. ಈ ಬಗ್ಗೆ ಕೆಲ ರೈತರಿಗೆ ಸರಿಯಾದ ಮಾಹಿತಿ ಇಲ್ಲ . ಇನ್ನು ರೈತರ ರಾಗಿ ಕ್ವಿಂಟಾಲ್‌ಗೆ 3200-3300 ರು. ಇದ್ದು, ಸರಕಾರ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿಗೆ ಮುಂದಾಗುವ ಜತೆಗೆ ಬೆಳೆ ನಷ್ಟದ ಪರಿಹಾರಕ್ಕೂ ರೈತರ ನೆರವಿಗೆ ಸರ್ಕಾರ ಬರಬೇಕಿದೆ. ಕಡೂರು ತಾಲೂಕಿನ ಕೆಲ ಹೋಬಳಿಗಳಲ್ಲಿ ಮಾತ್ರ ರಾಗಿ ಕಟಾವಿಗೆ ಬಂದಿದೆ. ಆದರೆ ಮಳೆ ಇಲ್ಲದೆ ಸಾವಿರಾರು ಎಕರೆಯಲ್ಲಿ ಮಾರೆತ್ತರಕ್ಕೆ ಬೆಳೆದ ರಾಗಿ ಒಣಗಿ ನಿಂತಿದೆ. ಕಳೆದ 15 ದಿನಗಳ ಹಿಂದೆ ದಿಢೀರ್ ಎಂದು ಮೂರು ದಿನಗಳ ಕಾಲ ಸುರಿದ ಮಳೆಯಿಂದ ರಾಗಿಬೆಳೆಗೆ ಜೀವ ಜಲ ಸಿಕ್ಕಿದಂತಾಗಿದೆ. ಆದರೂ ನೀರೀಕ್ಷಿತ ಮಟ್ಟದಲ್ಲಿ ಕೈಹತ್ತಿಲ್ಲ. ಕಡೂರು ತಾಲೂಕಿನಲ್ಲಿ ಕನಕನ ಕಲ್ಲಿನಿಂದ ಕುಂಕಾ ನಾಡಿನವರೆಗೆ ಮೂರು ವರ್ಷಕ್ಕೆ ಒಮ್ಮೆ ಮಳೆ ಬೆಳೆ ಎಂಬ ಐತಿಹ್ಯದ ಮಾತಿದ್ದು ,ಈ ಭಾರಿಯೂ ಇದು ನಿಜವಾಗುತ್ತಾ ಎಂಬ ಆತಂಕ ರೈತರಿಗಿದೆ. ಬಯಲು ಪ್ರದೇಶದ ರೈತರಿಗೆ ಬೆಳೆಗಳು ಕೈಕೊಡುತ್ತಿವೆ. ಆದರೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ತೆಂಗು ಇರದೆ ಹೋಗಿದ್ದರೆ ರೈತರ ಪಾಡು ಇನ್ನಷ್ಟು ಹೀನಾಯ ಸ್ಥಿತಿ ತಲುಪುತ್ತಿತ್ತು. ಒಟ್ಟಾರೆ ಸರಕಾರ ರೈತರ ನೆರವಿಗೆ ಬರುವ ಮೂಲಕ ಆಸರೆಯಾಗಬೇಕಿದೆ. ಇದರೊಂದಿಗೆ ಪ್ರಕೃತಿ ಪೂರಕವಾದರೆ ಮಾತ್ರ ರೈತ ನಿಟ್ಟುಸಿರು ಬಿಡಲು ಸಾಧ್ಯ.

-- ಬಾಕ್ಸ್‌-- 36 ಸಾವಿರ ಹೆಕ್ಟೇರ್‌ ಪ್ರದೇಶದ ಬೆಳೆಹಾನಿ

ತಾಲೂಕಿನಲ್ಲಿ ವಾರ್ಷಿಕ 639 ಮಿ.ಮೀ.ವಾಡಿಕೆ ಮಳೆ ಇದೆ. ಇಲ್ಲಿತನಕ 411 ಮಿ.ಮೀ.ಮಳೆಯಾಗ ಬೇಕಿದ್ದು, ಆದರೆ 362 ಮಿ.ಮೀ.ಮಳೆಯಾಗಿ ಸಾಕಷ್ಟು ಕಡೆ ರಾಗಿ ಬೆಳೆ ಹಾಳಾಗಿದೆ. ಕಡೂರು ತಾಲೂಕಿನ 46 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದ ರಾಗಿ ಮತ್ತಿತರ ಬೆಳೆಗಳಲ್ಲಿ 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿ ಎಂದು ರಾಜ್ಯ ಸರಕಾರಕ್ಕೆ ಕೃಷಿ ಇಲಾಖೆಯಿಂದ ವರದಿ ಮಾಡಲಾಗಿದೆ.

---- ---ಕಡೂರು ತಾಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಬಂದಿರುವ ರಾಗಿ ಜೊತೆ ಹಾಳಾಗಿರುವ ಬೆಳೆಯನ್ನು ಕೂಡ ಸೇರಿಸಿ ಸಣ್ಣ ಮತ್ತು ದೊಡ್ಡ ರೈತರು ಸೇರಿದಂತೆ ಎಲ್ಲ ರೈತರಿಗೂ ಅನ್ಯಾಯವಾಗದಂತೆ ಬೆಳೆ ಪರಿಹಾರಕ್ಕೆ ಈಗಾಗಲೇ ಸರಕಾರದ ಗಮನ ಸೆಳೆಯಲಾಗಿದೆ. ಆದಷ್ಟು ಬೇಗ ಖರೀದಿ ಕೇಂದ್ರ ಆರಂಭಿಸಲು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಮಾಡಿ ಸರ್ಕಾರದ ಗಮನ ಸೆಳೆದು ಶೀಘ್ರದಲ್ಲೇ ರಾಗಿ ಖರೀದಿ ಮಾಡುವಂತೆ ಹಾಗು ಪರಿಹಾರ ಸಿಗುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು

- ಕೆ.ಎಸ್. ಆನಂದ್

ಶಾಸಕರು,ಕಡೂರು. .19ಕೆಕೆಡಿಯು1,1ಎ..

ಕಡೂರು ತಾಲೂಕಿನಲ್ಲಿ ಮಳೆ ಇಲ್ಲದೆ ಹಾಳಾಗಿರುವ ರಾಗಿ ಬೆಳೆ.,

19ಕೆಕೆಡಿಯು1ಬಿ.ಶಾಸಕ ಕೆ ಎಸ್. ಆನಂದ್...

Share this article