ಹಲವು ವರ್ಷಗಳ ಬಳಿಕ ಕೈ ಹಿಡಿದು ಸಭೆಗೆ ಬಂದ ಕಾಗೇರಿ-ಅನಂತ

KannadaprabhaNewsNetwork | Published : Jan 12, 2024 1:46 AM

ಸಾರಾಂಶ

ಹಲವಾರು ವರ್ಷದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದ ಅನಂತಕುಮಾರ ಹೆಗಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಗೇರಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಕಾರವಾರ:

ಹಲವಾರು ವರ್ಷದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಅಂತರ ಕಾಯ್ದುಕೊಂಡಿದ್ದ ಅನಂತಕುಮಾರ ಹೆಗಡೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಗೇರಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿನ ಹೋಟೆಲ್ ಒಂದರಲ್ಲಿ ಗುರುವಾರ ನಡೆದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭಿಪ್ರಾಯ ಸಂಗ್ರಹಣಾ ಸಭೆಯಲ್ಲಿ ಅನಂತಕುಮಾರ ಅವರು ಕಾಗೇರಿ ಅವರ ಕೈಹಿಡುಕೊಂಡು ಮಾತನಾಡುತ್ತಾ ನಡೆದುಕೊಂಡು ಸಭೆಗೆ ಬಂದಿದ್ದು, ಸಭಾಂಗಣದಲ್ಲಿ ನೆರೆದಿದ್ದ ಮುಖಂಡರೇ ಆಶ್ಚರ್ಯ ಚಕಿತರಾದರು. ನಾನೊಂದು ತೀರ ನೀನೊಂದು ತೀರ ಎನ್ನುವಂತೆ ಇದ್ದ ಅನಂತಕುಮಾರ ವರ್ತನೆಯ ಬದಲಾವಣೆ ಬಿಜೆಪಿ ನಾಯಕರಲ್ಲಿ ಗೊಂದಲದ ಜತೆಗೆ ಹುಬ್ಬೇರುವಂತೆ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಅನಂತಕುಮಾರ ಹೆಗಡೆ ಮಾತ್ರ ತಮ್ಮ ಪಕ್ಷದ ಅಭ್ಯರ್ಥಿಯ ಪರ ಎಲ್ಲಿಯೂ ಪ್ರಚಾರಕ್ಕೆ ಬಂದಿರಲಿಲ್ಲ. ಕಳೆದ ಹಲವಾರು ವರ್ಷಗಳಿಂದ ಕಾಗೇರಿಯಿಂದ ಅನಂತ ಅಂತರ ಕಾಯ್ದುಕೊಂಡಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಂಕೋಲಾಕ್ಕೆ ಪ್ರಚಾರಕ್ಕೆ ಬಂದಿದ್ದರೂ ಅನಂತಕುಮಾರ ಮಾತ್ರ ಕಾಣಿಸಿಕೊಂಡಿರಲಿಲ್ಲ. ಪಕ್ಷದ ಚಟುವಟಿಕೆಗಳಿಂದ ಕೂಡಾ ದೂರವೇ ಉಳಿದಿದ್ದರು. ಹೀಗಾಗಿ ಬಿಜೆಪಿಯಿಂದ ಮುಂದಿನ ಲೋಕಸಭಾ ಚುನಾವಣೆಗೆ ಟಿಕೆಟ್ ಸಿಗುವುದು ಕಷ್ಟವೆಂದು ಬಹುತೇಕ ಜನರು ಅಂದುಕೊಂಡಿದ್ದು, ಜತೆಗೆ ಅನಂತ ಕೂಡಾ ತಾವು ಚುನಾವಣಾ ಕಣದಿಂದ ದೂರ ಉಳಿಯುವುದಾಗಿ ಹೇಳಿಕೊಳ್ಳುತ್ತಾ ಬಂದಿದ್ದರು. ವಿಧಾಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ವಿರುದ್ಧ ಸೋಲುಕಂಡಿದ್ದ ಕಾಗೇರಿ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದರು.

ಚುನಾವಣೆ ಸಮೀಪಿಸುತ್ತಿದ್ದಂತೆ ಅನಂತಕುಮಾರ ಕಾಲಿಗೆ ಚಕ್ರಕಟ್ಟಿಕೊಂಡಂತೆ ಓಡಾಡಲು ಆರಂಭಿಸಿದ್ದು, ಜಿಲ್ಲೆಯ ವಿವಿಧೆಡೆ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೇ ಕಾಗೇರಿಯನ್ನು ದೂರವೇ ಇಟ್ಟಿದ್ದ ಅವರು, ಏಕಾಏಕಿ ಕೈ ಹಿಡಿದು ಬಹಿರಂಗದಿಂದ ಆತ್ಮೀಯವಾಗಿ ಮಾತನಾಡಿಸಿದ ಲೆಕ್ಕಾಚಾರ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

Share this article