ರೈಲ್ವೆ ಯೋಜನೆ ಜಾರಿಗೆ ಕಾಗೇರಿ ಆಗ್ರಹ

KannadaprabhaNewsNetwork | Published : Aug 3, 2024 12:40 AM

ಸಾರಾಂಶ

ಹುಬ್ಬಳ್ಳಿ- ಅಂಕೋಲಾ, ತಾಳಗುಪ್ಪ- ಶಿರಸಿ- ಹುಬ್ಬಳ್ಳಿ, ತಾಳಗುಪ್ಪ- ಹೊನ್ನಾವರ, ಧಾರವಾಡ- ಕಿತ್ತೂರು- ಹುಬ್ಬಳ್ಳಿ ರೈಲ್ವೆ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಶಿರಸಿ: ದೆಹಲಿಯಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಮನವಿ ಸಲ್ಲಿಸಿ, ಸುದೀರ್ಘ ಚರ್ಚೆ ನಡೆಸಿದರು. ಹುಬ್ಬಳ್ಳಿ- ಅಂಕೋಲಾ, ತಾಳಗುಪ್ಪ- ಶಿರಸಿ- ಹುಬ್ಬಳ್ಳಿ, ತಾಳಗುಪ್ಪ- ಹೊನ್ನಾವರ, ಧಾರವಾಡ- ಕಿತ್ತೂರು- ಹುಬ್ಬಳ್ಳಿ ರೈಲ್ವೆ ಯೋಜನೆಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಮತ್ತು ಕೆಲವು ಹೊಸ ರೈಲ್ವೆಗಳಾದ ವಾಸ್ಕೋ- ಬೆಳಗಾವಿ- ಮಿರಜ್ ಪ್ಯಾಸೆಂಜರ್, ಕ್ಯಾಸಲ್‌ರಾಕ್- ಮಿರಜ್- ಕ್ಯಾಸಲ್‌ರಾಕ್ ಈ ಮಾರ್ಗಗಳನ್ನು ಪ್ರಾರಂಭ ಮಾಡಲು ವಿನಂತಿಸಿದರು.

ಬಹಳ ವರ್ಷದ ಬೇಡಿಕೆಯಾದ ಕುಮಟಾ ಮತ್ತು ಗೋಕರ್ಣ ರೈಲ್ವೆ ನಿಲ್ದಾಣದಲ್ಲಿ ಎರಡನೇ ಪ್ಲಾಟ್‌ಫಾರ್ಮ್ ನಿರ್ಮಾಣ, ಕೊಂಕಣ ರೈಲ್ವೆಯಲ್ಲಿ ಸಂಚರಿಸುವ ರೈಲುಗಳಲ್ಲಿ ನಮ್ಮ ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗೆ ಅವಕಾಶ ಕಲ್ಪಿಸುವಿಕೆ, ಕೆಲವು ಸ್ಥಳಗಳಲ್ಲಿ ಮೇಲ್ಸೇತುವೆ ಮತ್ತು ಅಂಡರ್‌ ಪಾಸ್‌ಗಳನ್ನು ನಿರ್ಮಿಸುವಂತೆ ಆಗ್ರಹಿಸಿದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಶೀಘ್ರದಲ್ಲಿ ಈ ಎಲ್ಲ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.----

ಸಂತ್ರಸ್ತರ ಪರವಾಗಿ ದಿಟ್ಟ ನಿರ್ಧಾರ ಕೈಗೊಳ್ಳಿ: ಸೈಲ್‌

ಕಾರವಾರ: ಚೆಂಡಿಯಾ, ಅರಗಾ, ಈಡೂರಗಳಲ್ಲಿ ಮನೆಗಳು ಜಲಾವೃತವಾಗದಂತೆ ನೌಕಾನೆಲೆ ಹಾಗೂ ಜಿಲ್ಲಾ ಆಡಳಿತ ದಿಟ್ಟ ನಿರ್ಧಾರ ಕೈಗೊಂಡು ಜನತೆಯನ್ನು ಭಯಮುಕ್ತಗೊಳಿಸುವಂತೆ ಶಾಸಕ ಸತೀಶ ಸೈಲ್ ಜಿಲ್ಲಾ ಆಡಳಿತವನ್ನು ಒತ್ತಾಯಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶಕ್ಕಾಗಿ ತ್ಯಾಗ ಮಾಡಿದ ಜನತೆ ಧಾರಾಕಾರವಾಗಿ ಸುರಿಯುವ ಮಳೆಯ ಮಧ್ಯದಲ್ಲಿ ಸರ್ಕಾರದ ಕನಿಷ್ಠ ಸೌಕರ್ಯದೊಂದಿಗೆ ಇನ್ನೆಷ್ಟು ದಿನ ಕಾಳಜಿ ಕೇಂದ್ರಲ್ಲಿ ಇರಬೇಕು. ಸಂತ್ರಸ್ತರು ಸೂಕ್ತ ಕ್ರಮಕ್ಕಾಗಿ ಸರ್ಕಾರದ ಮೊರೆ ಇಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ಮತ್ತು ನೌಕಾನೆಲೆ ಕೂಡಲೇ ಈ ಕುರಿತು ದಿಟ್ಟ ನಿರ್ಧಾರ ತೆಗೆದುಕೊಂಡು ಜನರನ್ನು ಭಯ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.ಜತೆಗೆ ಮುಂಬರುವ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಷಯವನ್ನು ತಾವು ಪ್ರಥಮ ಆದ್ಯತೆಯಾಗಿ ಪರಿಗಣಿಸಿ ನೌಕನೆಲೆಯವರಲ್ಲಿ ಮತ್ತು ಜಿಲ್ಲಾಡಳಿತದಲ್ಲಿ ರಕ್ಷಣಾ ಗೋಡೆ ಜತೆಗೆ ಇನ್ನಿತರ ಜೀವರಕ್ಷಣಾ ಕಾರ್ಯದ ಕುರಿತು ಚರ್ಚಿಸಿ ನಿರ್ಣಯಕ್ಕೆ ಬರುವುದಾಗಿ ಶಾಸಕ ಸತೀಶ ಸೈಲ್ ತಿಳಿಸಿದ್ದಾರೆ.

Share this article