ಶಿರಸಿ: ಯುವ ಪತ್ರಕರ್ತರು ಬ್ರೇಕಿಂಗ್ ನ್ಯೂಸ್ ಗಡಿಬಿಡಿಯಿಂದ ಹೊರ ಬಂದು ಅಧ್ಯಯನಶೀಲತೆ ಅಳವಡಿಸಿಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಶನಿವಾರ ನಗರದ ಪೂಗಾ ಭವನದಲ್ಲಿ ಶಿರಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿರಿಯ ವರದಿಗಾರ ರಾಘವೇಂದ್ರ ಬೆಟ್ಟಕೊಪ್ಪ ಅವರಿಗೆ ನೀಡಲಾದ ಮಾಧ್ಯಮ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗದ ಜತೆ ಪತ್ರಿಕಾ ರಂಗವೂ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಅಧಿಕೃತವಾಗಿ ನಾಲ್ಕನೇ ಅಂಗ ಎಂದು ಕರೆಯಲ್ಪಡದಿದ್ದರೂ ಈ ಮೂರು ಅಂಗಗಳ ಜತೆ ಪತ್ರಿಕೋದ್ಯಮ ನಡೆದು ಬಂದಿದೆ. ಪತ್ರಿಕೋದ್ಯಮ ಬೆಳವಣಿಗೆಗೆ ಅನೇಕ ಹಿರಿಯರು ಶ್ರಮಿಸಿದ್ದಾರೆ. ಆದರೆ ದಿನಕಳೆದಂತೆ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಜತೆ ಪತ್ರಿಕಾ ರಂಗದ ತಪ್ಪುಗಳನ್ನು ಎತ್ತಿ ಹಿಡಿಯುವ ಸ್ಥಿತಿ ಬಂದಿದೆ. ಸಮಾಜದಲ್ಲಿಂದು ಎಲ್ಲ ಕ್ಷೇತ್ರದವರಿಗೂ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.ಪ್ರಶಸ್ತಿ ಪ್ರದಾನ ನೆರವೇರಿಸಿ, ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಯಾವುದೇ ಅಪಮೌಲ್ಯದ ಆಗದ ರೀತಿಯಲ್ಲಿ ತೆಗೆದುಕೊಂಡು ಹೋಗುವುದು ಮಾಧ್ಯಮ. ಸಮಾಜಕ್ಕೆ ಸಂದೇಶಗಳನ್ನು ನೀಡುತ್ತ ಬಂದ ಮಾಧ್ಯಮದವರ ಕೊಡುಗೆಯನ್ನು ನಾವು ಮರೆಯಬಾರದು. ಪತ್ರಿಕಾರಂಗವು ಒಂದು ವಿಷಯಕ್ಕೆ ಬದ್ಧವಾಗದೇ ಸರ್ಕಾರ ಮತ್ತು ಸಾರ್ವಜನಿಕ ಕ್ಷೇತ್ರದ ತೊಂದರೆಯನ್ನು ಸರಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದರು.
ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಮಾತನಾಡಿ, ಪತ್ರಕರ್ತರು ಕಟುಸತ್ಯವನ್ನು ನಿರ್ಭಿತಿಯಿಂದ ಬರೆಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಯಾರ ಒತ್ತಡಕ್ಕೂ ಮಣಿಯದೇ ಪತ್ರಿಕೋದ್ಯಮದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ಅನೇಕ ಹಿರಿಯರನ್ನು ನಾವು ಕಾಣಬಹುದಾಗಿದೆ. ಹೆಚ್ಚು ಮೌಲ್ಯಯುತ ವಿಷಯಗಳಿಗೆ ಮಹತ್ವ ನೀಡಿ, ಮಾಧ್ಯಮಗಳು ಸರಿಯಾಗಿ ಕೆಲಸ ನಿರ್ವಹಿಸಿದರೆ ವ್ಯವಸ್ಥೆ ಸರಿ ದಾರಿಯಲ್ಲಿ ಸಾಗುತ್ತದೆ ಎಂದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಮಾತನಾಡಿ, ಇಂದಿನ ಕಾಲದಲ್ಲಿ ಓದುವಿಕೆ ಕಡಿಮೆಯಾಗಿದ್ದು, ಇದು ಕಳವಳಕಾರಿ ಸಂಗತಿಯಾಗಿದೆ ಎಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಸಂದೇಶ ಭಟ್ಟ ಬೆಳಖಂಡ ಮಾತನಾಡಿ, ಪತ್ರಕರ್ತರು ಎಂದಿಗೂ ಸಾಮಾಜಿಕ ಕಳಕಳಿ ಹೊಂದಿದವರು ಎಂದರು.ಹಿರಿಯ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ದಂಪತಿಯನ್ನು ’ಮಾಧ್ಯಮ ಶ್ರೀ’ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಬಳಿಕ ಮಾತನಾಡಿದ ಅವರು, ಪತ್ರಕರ್ತರು ವರದಿಗಾರಿಕೆ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಾಗ ಸಮಾಜದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯ. ಯುವ ಪತ್ರಕರ್ತರು ಅಧ್ಯಯನಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು. ಉತ್ಸಾಹಿ ಪತ್ರಕರ್ತ ಮಂಜುನಾಥ ಸಾಯಿಮನೆ ಅವರಿಗೆ ಗೋಲ್ಡನ್ ಪೆನ್ ಪುರಸ್ಕಾರ ನೀಡಲಾಯಿತು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಉಪಸ್ಥಿತರಿದ್ದರು. ಗಾಯಕಿ ರೇಖಾ ಸತೀಶ ಭಟ್ಟ ಪ್ರಾರ್ಥಿಸಿದರು. ಸ್ವರ್ಣವಲ್ಲಿ ಶ್ರೀಗಳ ಶುಭ ಸಂದೇಶವನ್ನು ಪ್ರವೀಣ ಹೆಗಡೆ ವಾಚಿಸಿದರು. ಸಂಘದ ಉಪಾಧ್ಯಕ್ಷ ವಿನುತಾ ಹೆಗಡೆ ಸ್ವಾಗತಿಸಿದರು. ರವಿ ಹೆಗಡೆ ಗಡಿಹಳ್ಳಿ ಸನ್ಮಾನ ಪತ್ರ ವಾಚಿಸಿದರು. ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ ಕೆರೆಗದ್ದೆ ನಿರೂಪಿಸಿದರು. ಶಿವಪ್ರಸಾದ ಹಿರೇಕೈ ವಂದಿಸಿದರು.ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಸಹಯೋಗ ನೀಡಿತ್ತು.