ಕಾರವಾರ: ಅರಣ್ಯ ಅತಿಕ್ರಮಣದಾರರನ್ನು ಭೇಟಿಯಾಗಲು ಕಾಗೇರಿ ಬರಲಿಲ್ಲ ಎಂದು ಆರೋಪ ಮಾಡುವ ಮಾರ್ಗರೇಟ್ ಆಳ್ವಾ, ಅರಣ್ಯ ಅತಿಕ್ರಮಣದಾರರ ಸಮಸ್ಯೆಯ ಬಗ್ಗೆ ಸದನದಲ್ಲಿ ಕಾಗೇರಿಯವರೆ ಧ್ವನಿ ಎತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಬಿಜೆಪಿ ಮಾಜಿ ವಕ್ತಾರ ನಾಗರಾಜ ನಾಯಕ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಅವರ ಕಣ್ಣಲ್ಲಿ ಒಂದು ಹನಿ ರಕ್ತವಿಲ್ಲ ಎಂದಿರುವ ಆಳ್ವಾರ ಕಣ್ಣಲ್ಲಿ ಒಂದು ಹನಿ ನೀರು ಸಹ ಇಲ್ಲ. ತನ್ನ ಪುತ್ರನ ರಾಜಕೀಯ ಭವಿಷ್ಯ ರೂಪಿಸಲು, ಕಾಗೇರಿ ಅವರ ವಿರುದ್ಧ ಇಲ್ಲ- ಸಲ್ಲದ ಆರೋಪ ಮಾಡಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿದರು.ಜಿಲ್ಲೆಯ ಹಿಂದುಳಿದ ವರ್ಗಗಳ ನಾಯಕರನ್ನು ಬೆಳೆಯದಂತೆ ಚಿವುಟಿ ಹಾಕಿದ್ದೇ ಮಾರ್ಗರೇಟ್ ಆಳ್ವಾ ಆಗಿದ್ದಾರೆ. ರಾಜ್ಯಮಟ್ಟದಲ್ಲಿ ಬೆಳೆಯುವಂತಹ ಸಾಮರ್ಥ್ಯವಿದ್ದ ಆರ್.ಎನ್. ನಾಯ್ಕಗೆ ಕಿರುಕುಳ ಕೊಟ್ಟಾಗ, ನಾನು ರಾಜಕೀಯವಾಗಿ ನಿವೃತ್ತಿ ಪಡೆಯುತ್ತೆನೆ ಹೊರತು ಮಾರ್ಗರೇಟ್ ಆಳ್ವಾರ ಗುಲಾಮಗಿರಿ ಮಾಡಲ್ಲ ಎಂದು ನಾಯ್ಕ ಹೇಳಿದ್ದರು.
ದಿ. ಬಂಗಾರಪ್ಪ ಅವರ ವಿರುದ್ಧ ಕ್ಲಾಸಿಕ್ ಕಂಪ್ಯೂಟರ್ ಹಗರಣ ಸೃಷ್ಟಿಸುವದವರ ಹಿಂದೆ ಇವರೆ ಕೆಲಸ ಮಾಡಿದ್ದರು. ಜಿಲ್ಲೆಯಲ್ಲಿ ದಿ. ಪ್ರಭಾಕರ ರಾಣೆಯವರಾಗಲಿ, ಕುಮಟಾದ ಕೆ.ಎಚ್. ಗೌಡರನ್ನಾಗಲಿ ರಾಜಕೀಯವಾಗಿ ಬೆಳೆಯದಂತೆ ಹುನ್ನಾರ ನಡೆಸಿದ್ದಾರೆ. ಶಿರಸಿಯಲ್ಲಿ ಭೀಮಣ್ಣ ನಾಯ್ಕ ಚುನಾವಣೆಯಲ್ಲಿ ಗೆಲ್ಲದಂತೆ ಬಂಡಾಯ ಅಭ್ಯರ್ಥಿ ನಿಲ್ಲಿಸಿದ ಕೀರ್ತಿ ಆಳ್ವಾ ಅವರಿಗೆ ಸಲ್ಲುತ್ತದೆ. ಅದಲ್ಲದೆ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪುತ್ರ ನಿವೇದಿತ್ ಅವರ ರಾಜಕೀಯ ಪ್ರವೇಶ ಮಾಡಿಸಲು, ಶಾರದಾ ಶೆಟ್ಟಿಗೆ ಟಿಕೆಟ್ ತಪ್ಪಿಸಿ, ಕ್ಷೇತ್ರದಲ್ಲಿ ಒಂದು ದಿನವೂ ಓಡಾಡದ ಪುತ್ರನಿಗೆ ಟಿಕೇಟ್ ನೀಡಿ ಠೇವಣಿ ಕಳೆದುಕೊಳ್ಳಲು ಕಾರಣಿಕರ್ತರಾದವರೇ ಮಾರ್ಗರೇಟ್ ಆಳ್ವಾ ಅವರು ಎಂದು ಲೇವಡಿ ಮಾಡಿದರು.ಸಂಜಯ ಸಾಳುಂಕೆ, ನಯನಾ ನೀಲಾವರ, ಮನೋಜ ಭಟ್, ಸಂದೇಶ ಶೆಟ್ಟಿ ಇದ್ದರು.