ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಈಡಿಗ ಸಮಾಜದ ದೊಡ್ಡ ಶಕ್ತಿ : ಸಚಿವ ಮಧು ಬಂಗಾರಪ್ಪ ಅಭಿಪ್ರಾಯ

KannadaprabhaNewsNetwork | Updated : Apr 01 2025, 11:29 AM IST

ಸಾರಾಂಶ

ಕಾಗೋಡು ತಿಮ್ಮಪ್ಪ ಮತ್ತು ಎಸ್.ಬಂಗಾರಪ್ಪ ಈಡಿಗ ಸಮಾಜದ ದೊಡ್ಡಶಕ್ತಿಯಾಗಿದ್ದು ಅವರ ರಾಜಕೀಯ ಹೋರಾಟದ ಫಲವಾಗಿಯೇ ನಾವು ಭೂಮಿಹಕ್ಕನ್ನು ಪಡೆದು ಇಂದು ಗೌರವಯುತವಾಗಿ ಬದುಕಲು ಸಾಧ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

 ಸಾಗರ :  ಕಾಗೋಡು ತಿಮ್ಮಪ್ಪ ಮತ್ತು ಎಸ್.ಬಂಗಾರಪ್ಪ ಈಡಿಗ ಸಮಾಜದ ದೊಡ್ಡಶಕ್ತಿಯಾಗಿದ್ದು ಅವರ ರಾಜಕೀಯ ಹೋರಾಟದ ಫಲವಾಗಿಯೇ ನಾವು ಭೂಮಿಹಕ್ಕನ್ನು ಪಡೆದು ಇಂದು ಗೌರವಯುತವಾಗಿ ಬದುಕಲು ಸಾಧ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಪ್ರಾಂತ್ಯ ಆರ್ಯ ಈಡಿಗರ ಸಂಘ ಸೋಮವಾರ ಹಮ್ಮಿಕೊಂಡಿದ್ದ ನೂತನ ಸಮುದಾಯ ಭವನ ಹಾಗೂ ವಾಣಿಜ್ಯ ಮಳಿಗೆಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಗೋಡು ಹಾಗೂ ಬಂಗಾರಪ್ಪನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೆ ನಮ್ಮ ಜವಾಬ್ದಾರಿಯಾಗಿದೆ ಎಂದರು.

ಸಿಗಂದೂರು ದೇವಸ್ಥಾನ ಹಿಂದುಳಿದ ವರ್ಗಕ್ಕೆ ಸೇರಿದ್ದಾಗಿದ್ದು, ಅದನ್ನು ನಮ್ಮ ಸಮುದಾಯದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಇದಕ್ಕೆ ನಾನು ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ಎಲ್ಲ ರೀತಿಯ ಪ್ರಯತ್ನ ಮಾಡುತ್ತೇವೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶೇ.೧೦೦ ನ್ಯಾಯ ದೊರಕಿಸಿಕೊಡುವಲ್ಲಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಬದ್ಧವಿದೆ. ಸಮುದಾಯವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಎಲ್ಲರೂ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಕ್ಷೇತ್ರದ ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸಮಾಜದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟಾಗಿರಬೇಕು. ಸಮಾಜದ ಅಭಿವೃದ್ಧಿಗೆ ನಾವೆಲ್ಲಾ ಒಟ್ಟಾಗಿ ಹೆಜ್ಜೆ ಹಾಕಬೇಕಾಗಿದೆ. ಕಾಲಕಾಲಕ್ಕೆ ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಮಾಡಬೇಕು. ಸಮಾಜದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಅಗತ್ಯ ಕ್ರಮವನ್ನು ಸಂಘವು ಕೈಗೊಳ್ಳಬೇಕು ಎಂದು ಹೇಳಿದರು.

ಹಿಂದೆ ನಾವು ಈಡಿಗರೆಂದು ಹೇಳಿಕೊಳ್ಳಲು ಹಿಂದೇಟು ಹಾಕುವ ಸ್ಥಿತಿ ಇತ್ತು. ಈಗ ಪರಿಸ್ಥಿತಿ ಬದಲಾಗಿದ್ದು ಈಡಿಗರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಸಮಾಜದ ಅಭಿವೃದ್ದಿಗೆ ಸಿಗಂದೂರು ರಾಮಪ್ಪ ಮಾತ್ರವಲ್ಲದೇ, ಆರ್ಥಿಕವಾಗಿ ಸ್ಥಿತಿವಂತರೂ ಸಹಕಾರ ನೀಡಬೇಕು ಎಂದು ಕರೆ ನೀಡಿದರು.

ಡಾಕ್ಟರೇಟ್ ಪದವಿ ಪಡೆದ ಕಾಗೋಡು ತಿಮ್ಮಪ್ಪ ಹಾಗೂ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ. ರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಡಾ.ಜಿ.ಜಿ.ನಾರಾಯಣಪ್ಪ, ಬಿ.ಸ್ವಾಮಿರಾವ್, ಪ್ರಮುಖರಾದ ಬಿ.ಆರ್.ಜಯಂತ್, ಎಸ್.ಕೆ.ಚಂದ್ರು, ರವಿ ಹೊಳೆಕೊಪ್ಪ, ತಾರಾಮೂರ್ತಿ, ಟಿ.ವಿ.ಪಾಂಡುರಂಗ, ಪರಮೇಶ್ವರ್ ಟಿ., ಹೆಚ್.ಎನ್.ದಿವಾಕರ್, ತುಕಾರಾಮ ಶಿರವಾಳ, ನಾಗವೇಣಿ ಪ್ರವೀಣ್, ಶಾರದಾ ನಾಗರಾಜ್ ಇನ್ನಿತರರು ಉಪಸ್ಥಿತರಿದ್ದರು. ಕಲಸೆ ಚಂದ್ರಪ್ಪ ಸ್ವಾಗತಿಸಿದರು. ಕರುಣಾಕರ ಮತ್ತು ಸುಮನಾ ನಿರೂಪಿಸಿದರು. 

Share this article