ಆನ್ ಲೈನ್ ಜೂಜು, ಬೆಟ್ಟಿಂಗ್ ದಂಧೆ ನಿಷೇಧಕ್ಕಾಗಿ ಪ್ರತಿಭಟನೆ

KannadaprabhaNewsNetwork | Published : Apr 1, 2025 12:50 AM

ಸಾರಾಂಶ

ಈ ಹಿಂದೆ ಯುಗಾದಿ ಹಬ್ಬದ ಅಂಗವಾಗಿ ನಡೆಯುತ್ತಿದ್ದ ಇಸ್ಪೀಟ್ ಆಟವನ್ನು ನಿಷೇಧಿಸಲಾಗಿದೆ. ಹಾಗೆಯೇ ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೀಟ್ ಆಡದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಇದು ಸ್ವಾಗತಾರ್ಹ. ಇಂತಹ ನಿಷೇಧ ಕ್ರಮದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಆದರೆ, ಇದೇ ರೀತಿ ದಿಟ್ಟ ಕ್ರಮವನ್ನು ಆನ್‌ಲೈನ್ ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ಹಾಗೂ ಗೇಮ್ ಆ್ಯಪ್‌ಗಳ ಮೇಲೆ ಏಕೆ ತೆಗೆದುಕೊಂಡಿಲ್ಲ .

ಕನ್ನಡಪ್ರಭ ವಾರ್ತೆ ಮಂಡ್ಯ

ಆನ್‌ಲೈನ್ ಜೂಜು, ಐಪಿಎಲ್ ಬೆಟ್ಟಿಂಗ್ ನಿಷೇಧ ಸೇರಿದಂತೆ ವಿವಿಧ ಮಾದರಿಯ ಬೆಟ್ಟಿಂಗ್‌ ದಂಧೆ ಸಂಪೂರ್ಣ ನಿಲ್ಲಿಸಬೇಕೆಂದು ಆಗ್ರಹಿಸಿ, ರೈತ ಸಂಘ ಜಿಲ್ಲಾ ಸಮಿತಿ(ಏಕೀಕರಣ) ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ವಾಹನ ಸಂಚಾರ ತಡೆ ನಡೆಸಿದರು. ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೆದ್ದಾರಿಯಲ್ಲಿ ಇಸ್ಪೀಟ್ ಆಡುವ ಮೂಲಕ ಅಣಕು ಪ್ರದರ್ಶನಕ್ಕೆ ಮುಂದಾದಾಗ ಅದನ್ನು ಪೊಲೀಸರು ತಡೆಯೊಡ್ಡಿದರು. ಇದರಿಂದ

ಪೊಲೀಸರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ನಾವು ಇಲ್ಲಿ ದುಡ್ಡು ಕಟ್ಟಿಕೊಂಡು ಇಸ್ಪೀಟ್ ಆಡುತ್ತಿಲ್ಲ.

ನಮಗೆ ಇಸ್ಪೀಟ್ ಆಡಲು ಬರಲ್ಲ. ನಾವು ಅಣಕು ಇಸ್ಪೀಟ್ ಆಡುತ್ತಿರೋದು. ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಟ್ಟಿಂಗ್‌ನ್ನು ಮೊದಲು ತಡೆಗಟ್ಟಿ ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಈ ಹಿಂದೆ ಯುಗಾದಿ ಹಬ್ಬದ ಅಂಗವಾಗಿ ನಡೆಯುತ್ತಿದ್ದ ಇಸ್ಪೀಟ್ ಆಟವನ್ನು ನಿಷೇಧಿಸಲಾಗಿದೆ. ಹಾಗೆಯೇ ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೀಟ್ ಆಡದಂತೆ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಇದು ಸ್ವಾಗತಾರ್ಹ. ಇಂತಹ ನಿಷೇಧ ಕ್ರಮದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಆದರೆ, ಇದೇ ರೀತಿ ದಿಟ್ಟ ಕ್ರಮವನ್ನು ಆನ್‌ಲೈನ್ ಜೂಜಾಟ, ಕ್ರಿಕೆಟ್ ಬೆಟ್ಟಿಂಗ್ ಹಾಗೂ ಗೇಮ್ ಆ್ಯಪ್‌ಗಳ ಮೇಲೆ ಏಕೆ ತೆಗೆದುಕೊಂಡಿಲ್ಲ ಎಂದು ಪ್ರಶ್ನಿಸಿದರು.

ನಮ್ಮಲ್ಲಿ ಐಪಿಎಲ್ ಬೆಟ್ಟಿಂಗ್, ಆನ್‌ಲೈನ್ ಜೂಜಾಟದಿಂದ ಯುವ ಸಮೂಹ ಹಾಳಾಗುತ್ತಿದೆ. ಆದರೆ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬದಲಿಗೆ ಆನ್‌ಲೈನ್ ಬೆಟ್ಟಿಂಗ್‌ಗೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವುದು ದುರಂತ. ಕೂಡಲೇ ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮುಖಂಡರಾದ ಶಂಭೂನಹಳ್ಳಿ ಸುರೇಶ್, ಸೊ.ಶಿ.ಪ್ರಕಾಶ್, ಚಂದ್ರು, ಕರವೇ ಮುಖಂಡ ಎಚ್.ಡಿ.ಜಯರಾಂ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article